ನ್ಯಾಯಾಲಯ ಆದೇಶ ಪಾಲನೆ ನಿರ್ಲಕ್ಷ್ಯ: ಇಲಾಖೆಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ
x
ಕರ್ನಾಟಕ ಹೈಕೋರ್ಟ್‌

ನ್ಯಾಯಾಲಯ ಆದೇಶ ಪಾಲನೆ ನಿರ್ಲಕ್ಷ್ಯ: ಇಲಾಖೆಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ

ನ್ಯಾಯಲಯದ ಆದೇಶಗಳನ್ನು ನಿರ್ಲಕ್ಷಿಸುತ್ತಿರುವ ಕಾರಣ ವ್ಯವಸ್ಥೆ ದುರ್ಬಲಗೊಂಡಿದೆ. ನ್ಯಾಯಾಲಯಗಳು ತಮ್ಮ ಅಧಿಕಾರ ಕಳೆದುಕೊಳ್ಳುತ್ತಿವೆ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವಿರುದ್ಧ ಕಿಡಿಕಾರಿದೆ


Click the Play button to hear this message in audio format

ಬೆಂಗಳೂರು: ನ್ಯಾಯಾಲಯಗಳ ಆದೇಶ ಪಾಲಿಸಲು ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರಗಳು ನಿರ್ಲಕ್ಷ್ಯ ತೋರುತ್ತಿವೆ ಹಾಗೂ ವಿಳಂಬ ಧೋರಣೆ ಅನುಸರಿಸುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಡಿಸಿರುವ ಹೈಕೋರ್ಟ್, ಈ ಕುರಿತಂತೆ ಸ್ವಯಂ ಪ್ರೇರಿತ ಸಾರ್ವಜನಿಕ ಅರ್ಜಿ ದಾಖಲಿಸಿಕೊಂಡಿದೆ.

ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅರ್ಜಿ ದಾಖಲಿಸಿಕೊಂಡಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಕ್ಷಮ ಪ್ರಾಧಿಕಾರಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

ನ್ಯಾಯಲಯದ ಆದೇಶಗಳನ್ನು ನಿರ್ಲಕ್ಷಿಸುತ್ತಿರುವ ಕಾರಣ ವ್ಯವಸ್ಥೆ ದುರ್ಬಲಗೊಂಡಿದೆ. ನ್ಯಾಯಾಲಯಗಳು ತಮ್ಮ ಅಧಿಕಾರ ಕಳೆದುಕೊಳ್ಳುತ್ತಿವೆ. ಕೋರ್ಟ್‌ ಆದೇಶಗಳು ಸರ್ಕಾರಿ ಅಧಿಕಾರಿಗಳ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂಬುದು ಇದನ್ನು ನೋಡಿದರೆ ವೇದ್ಯವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ನ್ಯಾಯಪೀಠ, ನ್ಯಾಯಾಲಯದ ಆದೇಶಗಳನ್ನು ಪಾಲಿಸದೇ ಇರುವ ಸರ್ಕಾರದ ಎಲ್ಲಾ ಇಲಾಖೆಗಳನ್ನು ಪ್ರತಿವಾದಿಗಳಾಗಿ ಮಾಡಬೇಕು ಎಂದು ರಿಜಿಸ್ಟ್ರಾರ್‌ ಅವರಿಗೆ ಸೂಚಿಸಿದೆ.

ಕೋರ್ಟ್‌ ಆದೇಶಗಳನ್ನು ಪಾಲಿಸಲು ಸರ್ಕಾರ ಹಾಗೂ ಸಕ್ಷಮ ಪ್ರಾಧಿಕಾರಗಳು ಯಾವ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಬೇಕು? ಆದೇಶ ಪಾಲನೆ ವಿಚಾರಗಳನ್ನು ನಿರ್ವಹಿಸಲು ವಿಶೇಷ ಶಾಖೆ, ಸಕ್ಷಮ ಅಧಿಕಾರಿಗಳನ್ನು ನೇಮಿಸಲಾಗಿದೆಯೇ? ಇದಕ್ಕಾಗಿ ಯಾವುದಾದರೂ ವ್ಯವಸ್ಥೆ ರೂಪಿಸಲಾಗಿದೆಯೇ? ಕೋರ್ಟ್‌ ಆದೇಶಗಳನ್ನು ಜಾರಿಗೊಳಿಸಲು ಮತ್ತು ಅದನ್ನು ಮೇಲ್ವಿಚಾರಣೆ ನಡೆಸಲು ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ? ಕೋರ್ಟ್‌ ಆದೇಶಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಲಾಗಿದೆಯೇ? ಈ ತನಕ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳೇನು? ಎಂಬುವುದರ ಬಗ್ಗೆ ಸರ್ಕಾರ ಮತ್ತು ಅರೆ- ಸರ್ಕಾರಿ ಸಂಸ್ಥೆಗಳು ಉತ್ತರ ನೀಡಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ವಿಚಾರಣೆಯನ್ನು ಜೂನ್‌ 5ಕ್ಕೆ ಮುಂದೂಡಲಾಗಿದೆ.

Read More
Next Story