Two factions fighting for CM post, zero development in the state: R. Ashok
x
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

ಸಿಎಂ ಸ್ಥಾನಕ್ಕಾಗಿ ಎರಡು ಬಣಗಳ ಕಿತ್ತಾಟ, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ: ಆರ್‌. ಅಶೋಕ್‌

ಡಿ.ಕೆ. ಶಿವಕುಮಾರ್‌ನ್ನು ಸಿಎಂ ಸ್ಥಾನದಲ್ಲಿ ಕೂರಿಸಬೇಕು ಎಂದು ಅವರ ಪರ ಶಾಸಕರು ಹೋರಾಟ ಮಾಡುತ್ತಿದ್ದು, ಈ ಹೋರಾಟ ಅಂತಿಮ ಹಂತಕ್ಕೆ ಬಂದಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ತಿಳಿಸಿದರು.


Click the Play button to hear this message in audio format

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವೆ ನಡೆಯುತ್ತಿರುವ ಕಚ್ಚಾಟದಿಂದಾಗಿ ಆಡಳಿತ ಯಂತ್ರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದರು.

ಶನಿವಾರ(ನ.22) ಶಾಸಕರ ಕಚೇರಿ ಮುಂಭಾಗ ಆಯೋಜಿಸಿದ್ದ ʼ ವಂದೇ ಮಾತರಂ ಸಂಭ್ರಮಾಚರಣೆʼ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೂಡಲೇ ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿ ಯಾರು ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಡಿ.ಕೆ. ಶಿವಕುಮಾರ್‌ನ್ನು ಸಿಎಂ ಸ್ಥಾನದಲ್ಲಿ ಕೂರಿಸಬೇಕು ಎಂದು ಅವರ ಪರ ಶಾಸಕರು ಹೋರಾಟ ಮಾಡುತ್ತಿದ್ದು, ಈ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ನೀಡಿಲ್ಲವೆಂದರೆ ಸರ್ಕಾರ ನಡೆಯುವುದಿಲ್ಲ. ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ಆಡಳಿತಯಂತ್ರ ಕೋಮಾದಲ್ಲಿದೆ ಎಂದರು.

ಸಿಎಂ ಸ್ಥಾನಕ್ಕೆ ತಂತ್ರ - ಪ್ರತಿತಂತ್ರ

ಸಾರ್ವಜನಿಕರು, ರೈತ ಸಮುದಾಯ, ವಿದ್ಯಾರ್ಥಿಗಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕಾಳಜಿ ಕಾಂಗ್ರೆಸ್‌ ಹೈಕಮಾಂಡ್‌ಗಿಲ್ಲ. ಸಿಎಂ ಸಿದ್ದರಾಮಯ್ಯನನ್ನು ಉಳಿಸಲು ಒಂದು ಗುಂಪು ಹಾಗೂ ಇಳಿಸಲು ಮತ್ತೊಂದು ಗುಂಪು ಕೆಲಸ ಮಾಡುತ್ತಿದೆ. ಡಿ.ಕೆ. ಶಿವಕುಮಾರ್‌ನ್ನು ಸಿಎಂ ಮಾಡಬೇಕು ಎಂದು ಒಂದು ತಂಡ, ಆಗಬಾರದೆಂದು ಮತ್ತೊಂದು ತಂಡ ತಂತ್ರ- ಕುತಂತ್ರ ಮಾಡುತ್ತಿವೆ. ಆದರೆ ರಾಜ್ಯದ ಅಭಿವೃದ್ಧಿ ಬಗ್ಗೆ ಯಾವ ಸಚಿವರು ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಹೈಕಮಾಂಡ್‌ ಉತ್ತರಿಸಲಿ

ರಾಜ್ಯದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿವೆ. ಹಲವೆಡೆ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜಕೀಯ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಇಲ್ಲಿ ಯಾರು ಮುಖ್ಯಮಂತ್ರಿ ಎಂದು ತಿಳಿಯುತ್ತಿಲ್ಲ. ರಾಹುಲ್‌ ಗಾಂಧಿ ದುರ್ಬಲ ನಾಯಕರಾಗಿದ್ದು, ಇಡೀ ರಾಜ್ಯದಲ್ಲಿ ದುರ್ಬಲ ನಾಯಕತ್ವ ಎದ್ದು ಕಾಣುತ್ತಿದೆ. ಕಾಂಗ್ರೆಸ್‌ನ ಬಣ ರಾಜಕಾರಣದಿಂದ ರಾಜ್ಯದ ಜನರು ಪರಿತಪಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಕಾಂಗ್ರೆಸ್‌ ಹೈಕಮಾಂಡ್‌ ಸಿಎಂ ಬಗ್ಗೆ ತನ್ನ ತೀರ್ಮಾನ ತಿಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಸಮರ್ಥ ವಿರೋಧ ಪಕ್ಷ

ಕಾಂಗ್ರೆಸ್‌ನ ಇಬ್ಬರು ಶಾಸಕರು ಜೈಲಿನಲ್ಲಿರುವುದರಿಂದ ಅವರ ಬೆಂಬಲ ಪಡೆಯಲು ಡಿಕೆಶಿ ಜೈಲಿಗೆ ಹೋಗಿದ್ದಾರೆ. ಕಾಂಗ್ರೆಸ್‌ಗೆ ಇಂತಹ ಪಾಡು ಬಂದಿರುವುದು ಶೋಚನೀಯ. 136 ಶಾಸಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿರೋಧ ಪಕ್ಷದ ಕಾಟ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಹೇಳುವುದಾದರೆ, ನಮ್ಮ ವಿರೋಧ ಪಕ್ಷ ಬಲವಾಗಿದೆ ಎಂದರ್ಥ. ಸರ್ಕಾರಕ್ಕೆ ಅಂಕುಶ ಹಾಕಲು ನಾವಿದ್ದೇವೆ. ನಾವು ಅದನ್ನು ಸಮರ್ಥವಾಗಿ ಮಾಡುತ್ತಿದ್ದೇವೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಒತ್ತಡಕ್ಕೊಳಗಾಗಿ ಮಾತನಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ವಚನಭ್ರಷ್ಟರು ಎಂದು ಅವರೇ ಪರೋಕ್ಷವಾಗಿ ಹೇಳುತ್ತಿದ್ದಾರೆ. ಅವರಿಗೆ ಶೀಘ್ರವೇ ವಚನಭ್ರಷ್ಟ ಎಂಬ ಹಣೆಪಟ್ಟಿ ಸಿಗಲಿದೆ ಎಂದು ಹೇಳಿದರು.

Read More
Next Story