ಬಾಯ್‌ಫ್ರೆಂಡ್ ಸಿಲುಕಿಸಲು ಸಂಚು; ಬೆಂಗಳೂರು ಸೇರಿದಂತೆ ಹಲವೆಡೆ ಶಾಲೆಗಳಿಗೆ ಬೆದರಿಕೆ ಹಾಕಿದ ಮಹಿಳಾ ಟೆಕ್ಕಿ ಅರೆಸ್ಟ್
x

ಬೆಂಗಳೂರು ಸೇರಿದಂತೆ ಹಲವೆಡೆ ಶಾಲೆಗಳಿಗೆ ಬೆದರಿಕೆ ಹಾಕಿದ ಮಹಿಳಾ ಟೆಕ್ಕಿ ಅರೆಸ್ಟ್.

ಬಾಯ್‌ಫ್ರೆಂಡ್ ಸಿಲುಕಿಸಲು ಸಂಚು; ಬೆಂಗಳೂರು ಸೇರಿದಂತೆ ಹಲವೆಡೆ ಶಾಲೆಗಳಿಗೆ ಬೆದರಿಕೆ ಹಾಕಿದ ಮಹಿಳಾ ಟೆಕ್ಕಿ ಅರೆಸ್ಟ್

ಪೊಲೀಸರ ತನಿಖೆಯ ಪ್ರಕಾರ, ಮಹಿಳೆಯು ತಾನು ಪ್ರೀತಿಸುತ್ತಿದ್ದ ಯುವಕನೊಬ್ಬ ತನ್ನ ಪ್ರೀತಿಯನ್ನು ನಿರಾಕರಿಸಿದ್ದ ಕಾರಣ, ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದಳು ಎಂದು ಹೇಳಲಾಗಿದೆ.


Click the Play button to hear this message in audio format

ಬೆಂಗಳೂರಿನ ಹಲವು ಪ್ರತಿಷ್ಠಿತ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಒಡ್ಡಿ ಆತಂಕ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಗುಜರಾತ್ ಮೂಲದ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ರೆನೆ ಜೋಶಿಲ್ದಾ ಎಂಬುವವರನ್ನು ಬಂಧಿಸಿದ್ದಾರೆ. ಪ್ರೀತಿಯನ್ನು ನಿರಾಕರಿಸಿದ ಯುವಕನ ಮೇಲೆ ಸೇಡು ತೀರಿಸಿಕೊಳ್ಳಲು ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸುವ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಪೊಲೀಸರ ತನಿಖೆಯ ಪ್ರಕಾರ, ಆರೋಪಿ ರೆನೆ ಜೋಶಿಲ್ದಾ ಪ್ರಿಯತಮ ಪ್ರೀತಿಯನ್ನು ನಿರಾಕರಿಸಿದ್ದ. ಇದರಿಂದ ಕುಪಿತಗೊಂಡ ಆಕೆ, ಆತನನ್ನು ಬಾಂಬ್ ಬೆದರಿಕೆ ಪ್ರಕರಣದಲ್ಲಿ ಸಿಲುಕಿಸಿ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದಳು. ಈ ಉದ್ದೇಶದಿಂದಲೇ ಶಾಲೆಗಳಿಗೆ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿ, ಆ ಮೂಲಕ ಆ ಯುವಕನನ್ನು ಆರೋಪಿಯನ್ನಾಗಿ ಬಿಂಬಿಸಲು ಯತ್ನಿಸಿದ್ದಳು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಜೋಶಿಲ್ದಾ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (VPN) ಬಳಸಿ ಇ-ಮೇಲ್ ಕಳುಹಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಷ್ಟೇ ಅಲ್ಲದೆ, 'ಗೇಟ್ ಕೋಡ್' ಎಂಬ ಅಪ್ಲಿಕೇಷನ್ ಮೂಲಕ ವರ್ಚುವಲ್ ಮೊಬೈಲ್ ಸಂಖ್ಯೆಯನ್ನು ಪಡೆದು, ಅದರ ಮೂಲಕ ಏಳು ವಾಟ್ಸ್​ಆ್ಯಪ್ ಖಾತೆಗಳನ್ನು ನಿರ್ವಹಿಸುತ್ತಿದ್ದಳು ಎಂಬ ಆಘಾತಕಾರಿ ಮಾಹಿತಿ ಕೂಡ ಬೆಳಕಿಗೆ ಬಂದಿದೆ.

ಹಿಂದೆಯೂ ಬಂಧನಕ್ಕೊಳಗಾಗಿದ್ದ ಆರೋಪಿ

ರೆನೆ ಜೋಶಿಲ್ದಾ ಅಪರಾಧ ಹಿನ್ನೆಲೆ ಹೊಂದಿರುವ ಮಹಿಳೆಯಾಗಿದ್ದು, ಈ ಹಿಂದೆ ಇದೇ ರೀತಿಯ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಚೆನ್ನೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಳು. ಆಕೆಯ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.

ಪ್ರಕರಣದ ಹಿನ್ನೆಲೆ

ಕೆಲವು ವಾರಗಳ ಹಿಂದೆ ಬೆಂಗಳೂರಿನ ಏಳು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಬಂದಿತ್ತು. ಇದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಸಿಬ್ಬಂದಿಯಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ, ಶಾಲಾ ಆವರಣದಲ್ಲಿ ವ್ಯಾಪಕ ಶೋಧ ನಡೆಸಿ ಯಾವುದೇ ಸ್ಫೋಟಕ ವಸ್ತುಗಳಿಲ್ಲ ಎಂದು ಖಚಿತಪಡಿಸಿದ್ದರು. ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇ-ಮೇಲ್ ಮೂಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಮಾತ್ರವಲ್ಲದೆ, ಚೆನ್ನೈ, ಹೈದರಾಬಾದ್ ಮತ್ತು ಗುಜರಾತ್‌ನ ಶಾಲೆಗಳಿಗೂ ಇದೇ ರೀತಿ ಬೆದರಿಕೆ ಹಾಕಲಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.

Read More
Next Story