ಸಾಕು ಪ್ರಾಣಿಗಳಿಗಿವೆ ಐದು ಸ್ವಾತಂತ್ರ್ಯ!  ಬೀದಿನಾಯಿ ಲಾಲನೆಗೆ, ಸಾಕುನಾಯಿ ಪಾಲನೆಗೆ ಬಂತು ಬಿಬಿಎಂಪಿ ನಿಯಮ
x
ಬೀದಿನಾಯಿಗಳಿಗೆ ಊಟ ಹಾಕುವುದನ್ನು ನಿಷೇಧಿಸುವಂತಿಲ್ಲ.

ಸಾಕು ಪ್ರಾಣಿಗಳಿಗಿವೆ ಐದು ಸ್ವಾತಂತ್ರ್ಯ! ಬೀದಿನಾಯಿ ಲಾಲನೆಗೆ, ಸಾಕುನಾಯಿ ಪಾಲನೆಗೆ ಬಂತು ಬಿಬಿಎಂಪಿ ನಿಯಮ

ಜನವರಿ 15, 2025ರ ಬಳಿಕ ಬಿಬಿಎಂಪಿ ಪಶುಸಂಗೋಪನಾ ಇಲಾಖೆ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿವೆ. ಈ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ವಿಫಲವಾದ ಸಂಘ ಸಂಸ್ಥೆಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ.


Click the Play button to hear this message in audio format

ಪ್ರಾಣಿ - ಪಕ್ಷಿಗಳಿಗೂ ಮನುಷ್ಯರಂತೆ ಆಹಾರ, ಆಶ್ರಯ, ಔಷಧ, ಸುರಕ್ಷಿತ ಸ್ಥಳಗಳು ಅಗತ್ಯವಿದೆ. ಪ್ರಾಣಿಗಳಿಗೂ ದಾಹ, ಹಸಿವು, ಅಪೌಷ್ಟಿಕತೆ ಹೊಂದಿರದ, ಅಸ್ವಸ್ಥತೆ ಹೊಂದಿರದ, ನೋವು, ಗಾಯ, ರೋಗಗಳನ್ನು ಹೊಂದಿರದ, ಭಯ, ಸಂಕಟ ಹೊಂದಿರದ, ಸಾಮಾನ್ಯ ನಡವಳಿಕೆಯನ್ನು ವ್ಯಕ್ತಪಡಿಸುವ ಐದು ಸ್ವಾತಂತ್ರ್ಯಗಳಿವೆ!

ಹೀಗೆ ಹೇಳಿರುವುದು ಬೆಂಗಳೂರು ಮಹಾ ನಗರಪಾಲಿಕೆ ( ಬಿಬಿಎಂಪಿ). ಬಿಬಿಎಂಪಿ ಸಮೀಕ್ಷೆ ಪ್ರಕಾರ ಬಿಬಿಎಂ ವ್ಯಾಪ್ತಿಯಲ್ಲಿ2,79,335ಬೀದಿನಾಯಿಗಳಿದ್ದು, 1, 65, 341 ಗಂಡು, 82, 757ಹೆಣ್ಣು ಹಾಗೂ 31, 237 ಲಿಂಗ ಪತ್ತೆಯಾಗದ ಬೀದಿನಾಯಿಗಳಿವೆ.

ಹಾಗಾಗಿ ಪ್ರಮುಖವಾಗಿ ಬೀದಿ ನಾಯಿಗಳಿಗೆ ನಿಗದಿತ ಪ್ರದೇಶದಲ್ಲಿ ಆಹಾರ ಹಾಕುವುದನ್ನು ನಿಷೇಧಿಸುವಂತಿಲ್ಲ, ವಿರೋಧಿಸುವಂತಿಲ್ಲ. ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕು ಪ್ರಾಣಿಗಳಿಗೆ ಸೌಲಭ್ಯ ಕಲ್ಪಿಸಬೇಕು. ಸಮುದಾಯ ಪ್ರಾಣಿಗಳನ್ನು ಹೊಡೆದರೆ ಅಥವಾ ಹಿಂಸಿಸಿದರೆ ದಂಡ ಅಥವಾ ಜೈಲು ಶಿಕ್ಷೆಯಾಗುತ್ತದೆ ಎಂದು ಮಾರ್ಗಸೂಚಿಯನ್ನು ಅದು ಹೊರಡಿಸಿದೆ. ಜನವರಿ 15ರಿಂದ ಈ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಪ್ರಕರಣ ಕೂಡ ದಾಖಲಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.

ಹೈಕೋರ್ಟ್‌ ಸೂಚನೆಯೇನು?

ಇತ್ತೀಚೆಗೆ ತಮ್ಮ ಸಾಕುಪ್ರಾಣಿಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ವಿಫಲರಾದ ಸಾಕುಪ್ರಾಣಿ ಮಾಲೀಕರಿಗೆ ದಂಡ ಸೇರಿದಂತೆ ಬೆಂಗಳೂರಿನ ಉದ್ಯಾನವನಗಳಲ್ಲಿ ಸ್ವಚ್ಛತೆ ಮತ್ತು ಮೇಲ್ವಿಚಾರಣೆಯನ್ನು ಕಾಪಾಡಿಕೊಳ್ಳಲು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿತ್ತು. ಸಾರ್ವಜನಿಕ ಉದ್ಯಾನಗಳಿಗೆ ಸಾಕುನಾಯಿ ಕರೆತರುವ ಸಾರ್ವಜನಿಕರು ಅವುಗಳ ಮಲದ ತ್ಯಾಜ್ಯ ವಿಲೇವಾರಿಗೆ ಕೈ ಚೀಲಗಳನ್ನು ತೆಗೆದುಕೊಂಡು ಬರಬೇಕು ಎಂದು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ನಾಯಿಗಳ ಉಪಟಳದಿಂದ ಉದ್ಯಾನಕ್ಕೆ ಭೇಟಿ ನೀಡುವವರಿಗೆ ರಕ್ಷಣೆ ನೀಡಬೇಕಾಗಿದ್ದು, ಸಾರ್ವಜನಿಕ ಉದ್ಯಾನಗಳಲ್ಲಿ ಎಲ್ಲ ರೀತಿಯ ಸ್ವಚ್ಛತೆ ಕಾಯ್ದುಕೊಳ್ಳುವುದು ಕಡ್ಡಾಯವಾಗಬೇಕು ಎಂದು ಆದೇಶಿಸಿತ್ತು.

ಸ್ವಚ್ಛತೆ ಕಾಯ್ದಕೊಳ್ಳುವುದು ಮತ್ತು ಇತರೆ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸಲಾಗುವ ದಂಡಕ್ಕಿಂತಲೂ, ಮಲವಿಸರ್ಜನೆಗೆ ಕಾರಣವಾಗುವ ನಾಯಿಗಳನ್ನು ಸಾಕಿರುವ ಮಾಲೀಕರಿಗೆ ವಿಧಿಸುವ ದಂಡ ಹೆಚ್ಚಿನ ಪ್ರಮಾಣದ್ದಾಗಿರಬೇಕು. ಕರ್ನಾಟಕ ಉದ್ಯಾನಗಳು, ಆಟದ ಮೈದಾನಗಳು ಮತ್ತು ಮುಕ್ತ ಸ್ಥಳಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ-1985 ಅನ್ನು ಬಿಬಿಎಂಪಿ ಅಧಿಕಾರಿಗಳು ಅಕ್ಷರಶಃ ಜಾರಿಗೆ ತರಬೇಕು. ಉದ್ಯಾನಗಳೂ ಸೇರಿ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016 ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ ಮಾಡಿತ್ತು.

ಬಿಬಿಎಂಪಿ ಮಾರ್ಗಸೂಚಿಯಲ್ಲಿ ಏನಿದೆ?

* ಸಾಕುಪ್ರಾಣಿಗಳ ನಿರ್ವಹಣೆ, ಸಮುದಾಯದ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳ ನಿಯೋಜನೆ, ಪ್ರಾಣಿಗಳ ಕಾನೂನುಗಳು ಮತ್ತು ಪ್ರಾಣಿಗಳ ಹಕ್ಕುಗಳ ಬಗ್ಗೆ ಮತ್ತು ನಾಯಿ ಕಡಿತ ನಿರ್ವಹಣೆ ಬಗ್ಗೆ ನಿವಾಸಿಗಳಿಗೆ ಶಿಕ್ಷಣ ನೀಡುವುದು.

* ಕೆಲವು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು/ಅಪಾರ್ಟ್‌ಮೆಂಟ್‌ ಓನರ್ಸ್ ಅಸೋಸಿಯೇಷನ್‌ಗಳು ಮತ್ತು ಸಂಸ್ಥೆಗಳು ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಬೇಕು. ಕಟ್ಟುನಿಟ್ಟಾಗಿ ಸಾಕು ಪ್ರಾಣಿ ನಿಯಮಗಳು ಮತ್ತು ನಾಯಿ ಕಡಿತ ನಿರ್ವಹಣೆಗಾಗಿ ಇತ್ತೀಚಿನ ಹೈಕೋರ್ಟ್ ಆದೇಶವು ಈ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಅಗತ್ಯವನ್ನು ಹೇಳಿದೆ.

* ಸಮುದಾಯದ ನಾಯಿಗಳು ಮತ್ತು ಬೆಕ್ಕುಗಳನ್ನು ಸ್ಥಳಾಂತರಿಸುವುದು, ಸಾಕು ಪ್ರಾಣಿಗಳನ್ನು ನಿಷೇಧಿಸುವುದು, ಸಮುದಾಯದ ಫೀಡರ್‌ಗಳಿಗೆ ಕಿರುಕುಳ ನೀಡುವ ಮೂಲಕ ಪ್ರಾಣಿಗಳ ಆಹಾರ ಮತ್ತು ನೀರನ್ನು ಕಸಿದುಕೊಳ್ಳುವುದು, ಸುಳ್ಳು ನಾಯಿ ಕಡಿತದ ಪ್ರಕರಣಗಳನ್ನು ದಾಖಲಿಸುವುದು, ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಮಾರ್ಗಸೂಚಿಗಳ ಹೊರತಾಗಿಯೂ ಪ್ರಾಣಿ ಕೌರ್ಯ ಸಂಬಂಧಿಸಿದ ವಿರಳ ಸಮಸ್ಯೆಗಳ ಮೇಲೆ ಬಿಬಿಎಂಪಿ ಹೆಚ್ಚು ಗಮನವರಿಸುತ್ತಿದೆ.ಮೇಲಿನ ಅಂಶಗಳ ಆಧಾರದ ಮೇಲೆ, ಎಲ್ಲಾ ಸಂಸ್ಥೆಗಳು [ಸಾರ್ವಜನಿಕ/ಖಾಸಗಿ ಕಚೇರಿಗಳು / ಟೆಕ್ ಪಾರ್ಕ್‌ಗಳು / ಶಾಲೆಗಳು ಮತ್ತು ಕಾಲೇಜುಗಳು / ಉದ್ಯಾನವನಗಳು / ಶಾಪಿಂಗ್ ಮಾಲ್‌ಗಳು / ವಸತಿ ಕಲ್ಯಾಣ ಸಂಘಗಳು ಮತ್ತು ಅಪಾರ್ಟ್‌ಮೆಂಟ್‌ ಮಾಲೀಕರ ಸಂಘಗಳು] ಜುಲೈ 2024 ದಿನಾಂಕದ ಪಾಲಿಕೆ ಸಮುದಾಯ ಪ್ರಾಣಿಗಳ ಮಾರ್ಗಸೂಚಿಗಳನ್ನು 15ನೇ ಜನವರಿ 2025 ರೊಳಗೆ ಜಾರಿಗೆ ತರಲು ಆದೇಶಿಸಲಾಗಿದೆ

ಬೀದಿ ನಾಯಿಗಳಿಗೆ ಆಹಾರ ನಿಯಮಗಳು

*ಪ್ರತಿದಿನ ಆಹಾರ ನೀಡಲು ಆರ್ಥಿಕವಾಗಿ ಸಬಲರಾಗಿದ್ದರೆ, ದೈಹಿಕವಾಗಿ ಸಮರ್ಥರಾಗಿದ್ದರೆ ಮಾತ್ರ ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯ ಪ್ರಾರಂಭಿಸಬೇಕು.

*ಬೀದಿ ನಾಯಿಗಳಿಗೆ ರಾತ್ರಿ 11.30ರಿಂದ ಬೆಳಿಗ್ಗೆ 5ರವರೆಗೆ ಆಹಾರ ನೀಡುವಂತಿಲ್ಲ.

*ಪೊದೆಗಳು ಸೇರಿದಂತೆ ದೂರದ ಪ್ರದೇಶದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ನೀಡಲು ಹೋಗಬಾರದು. ಬೇರೆಯವರ ಮನೆ ಮುಂದೆ, ಆಸ್ತಿಯಲ್ಲಿ, ಪಾರ್ಕಿಂಗ್ ಪ್ರದೇಶದಲ್ಲಿ ಆಹಾರ ಹಾಕಬಾರದು.

*ಮರುಬಳಸುವ ತಟ್ಟೆಗಳನ್ನು ಬಳಸಿ ಆಹಾರ ನೀಡಬೇಕು. ಬೀದಿ ನಾಯಿಗಳು ತಿಂದು ಉಳಿದ ಆಹಾರವನ್ನು ಅಲ್ಲೇ ಬಿಡದೆ ಸ್ವಚ್ಛಗೊಳಿಸಬೇಕು.

*ಹೆಚ್ಚು ನಾಗರಿಕರು ಓಡಾಡುವ ಪ್ರದೇಶದಲ್ಲಿ ಆಹಾರವನ್ನುಹಾಕಬಾರದು.

*ಸಂಸ್ಥೆ, ಟೆಕ್ ಪಾರ್ಕ್ ಅಥವಾ ಯಾವುದೇ ಸಂಘ- ಸಂಸ್ಥೆಗಳ ಪ್ರದೇಶದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ನೀಡುವ ಮೊದಲು ಸಮ್ಮತಿ ಪಡೆದುಕೊಳ್ಳಬೇಕು.

ಅಪಾರ್ಟ್‌ಮೆಂಟ್‌ ಮಾಲೀಕರ ಸಂಘಗಳಿಗೆ ಸೂಚನೆ

* ಸಂಘ ಅಸೋಸಿಯೇಷನ್‌ಗಳ ಬೈ-ಲಾದಲ್ಲಿ ಸಾಕುಪ್ರಾಣಿಗಳ ಪಾಲನೆಗೆ ವಿರುದ್ಧ ಅಥವಾ ನಿಷೇಧಿಸುವ ಯಾವುದೇ ನಿಯಮ ರೂಪಿಸುವಂತಿಲ್ಲ

* ಎಲ್ಲರೂ ಉಪಯೋಗಿಸುವ ಸ್ಥಳದಲ್ಲಿ ಸಾಕುಪ್ರಾಣಿಗೆ ಅವಕಾಶವಿರಬೇಕು. ಲಿಫ್ಟ್‌ನಲ್ಲಿ ಸಾಕುಪ್ರಾಣಿಯನ್ನು ಕೊಂಡೊಯ್ಯಲು ಅನುಮತಿಸಬೇಕು

* ಮನುಷ್ಯರು ಮಾತನಾಡುವಂತೆ ನಾಯಿಗಳು ಬೊಗಳುವುದು ಭಾವನಾತ್ಮಕ ಪ್ರಕ್ರಿಯೆ. ಅದನ್ನು ತಡೆಯುವಂತೆ ಸಾಕುಪ್ರಾಣಿ ಮಾಲೀಕರನ್ನು ಒತ್ತಾಯಿಸುವಂತಿಲ್ಲ

* ಸಂಘ ಸಂಸ್ಥೆಗಳು ಸಾಕು ಪ್ರಾಣಿಗಳ ಅಗತ್ಯ ವ್ಯಾಯಾಮಕ್ಕೆ ಅವುಗಳು ಓಡಾಡಲು, ಆಟವಾಡಲು ಬೆಳಿಗ್ಗೆ ಹಾಗೂ ಸಂಜೆ ಸಮಯವನ್ನು ಪ್ರತ್ಯೇಕವಾಗಿ ನಿಗದಿಪಡಿಸಬೇಕು

* ಸಾಕು ನಾಯಿಗಳಿಗೆ ಯಾವುದೇ ರೀತಿಯ ಪಂಜರದಲ್ಲಿ ಇರಿಸುವಂತಿಲ್ಲ. ಸಾಕು ನಾಯಿಗಳ ಬಾಯಿಗೆ ಕವಚ ಧರಿಸಬೇಕು ಎಂದು ಸೂಚಿಸುವಂತಿಲ್ಲ.

ಬಿಬಿಎಂಪಿ ಶ್ವಾನ ಮಾಲಿಕರಿಗೆ ಹೊರಡಿಸಿರುವ ಮಾರ್ಗಸೂಚಿಯಲ್ಲೇನಿದೆ?

* ಸಾಕು ನಾಯಿಗೆ ಅಗತ್ಯ ಲಸಿಕೆ ಕೊಡಿಸಬೇಕು. ನೆರೆಯವರಿಗೆ ಸಮಸ್ಯೆಯಾಗದ ರೀತಿಯಲ್ಲಿ ಮನೆ, ಬಾಲ್ಕನಿ, ಟೆರೇಸ್‌ನಲ್ಲಿ ಯಾವಾಗಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು

* ಸಾಕು ನಾಯಿಗೆ ಸ್ವಚ್ಛ ಸ್ಥಳ ಹಾಗೂ ಸೂಕ್ತ ಹಾಸಿಗೆ ಒದಗಿಸಬೇಕು. ಯಾವುದೇ ರೀತಿಯ ಚಾವಣಿ ಇಲ್ಲದ ಪ್ರದೇಶದಲ್ಲಿ ಸಾಕು ನಾಯಿಯನ್ನು ಬಿಟ್ಟಿರಬಾರದು

* 18 ವಾಕಿಂಗ್‌ಗೆ ಕರೆದುಕೊಂಡು ಹೋಗುವಂತಿಲ್ಲ. ಸಾಕು ನಾಯಿಯ ಉತ್ತಮ ನಡವಳಿಕೆಗೆ ತರಬೇತಿ ನೀಡಬೇಕು

* ಸಾಕು ನಾಯಿಗಳು ರಸ್ತೆ, ಪಾದಚಾರಿ ಮಾರ್ಗದಲ್ಲಿ ಮಲಮೂತ್ರ ಮಾಡಿದರೆ, ಇತರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮಾಲೀಕರೇ ಸ್ವಚ್ಛ ಮಾಡಬೇಕು

ಎಂದು ಬಿಬಿಎಂ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಸಂಸ್ಥೆಗಳು ಏನೆಲ್ಲ ಮಾಡಬೇಕು?

* ಸಮುದಾಯ ಪ್ರಾಣಿಗಳಿಗೆ (ನಾಯಿ, ಬೆಕ್ಕು) ಲಸಿಕೆ ನೀಡಬಹುದು ಮತ್ತು ಆಹಾರ ನೀಡಬಹುದು. ಆದರೆ, ಅವುಗಳ ಮೂಲ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸುವಂತಿಲ್ಲ

* ಸಮುದಾಯ ಪ್ರಾಣಿಗಳಿಗೆ ಆಹಾರ, ಸ್ವಚ್ಛ ನೀರು ಸಿಗುವಂತೆ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಸಂಚರಿಸದ ಪ್ರದೇಶದಲ್ಲಿ ಅವುಗಳಿಗೆ ನೆಲೆ ಕಲ್ಪಿಸಬೇಕು

* ಸಮುದಾಯ ಪ್ರಾಣಿಗಳಿಗೆ ಆಹಾರ ನೀಡಲು ವಿದ್ಯಾರ್ಥಿಗಳು, ಸಿಬ್ಬಂದಿ ಅಥವಾ ನಾಗರಿಕರಿಗೆ ಪ್ರತ್ಯೇಕ ಸ್ಥಳವನ್ನು ಪಾಲಿಕೆಯೊಂದಿಗೆ ಚರ್ಚಿಸಿ ನಿಗದಿಪಡಿಸಬೇಕು

* ಬೀದಿ ನಾಯಿಗಳನ್ನು ಓಡಿಸಿಕೊಂಡು ಹೋಗುವುದು, ಕಲ್ಲು, ಕಡ್ಡಿಯಿಂದ ಹೊಡೆಯುವುದು ಕಾನೂನುಬಾಹಿರ. ಬೀದಿ ನಾಯಿಗಳ ನಿರ್ವಹಣೆಗೆ ಭದ್ರತಾ ಸಿಬ್ಬಂದಿಗೆ ತರಬೇತಿ ಕೊಡಿಸಬೇಕು

* ಸಂಸ್ಥೆಗಳ ಆವರಣದಲ್ಲಿ ಸಮುದಾಯ ಪ್ರಾಣಿಗಳಿದ್ದಾಗ ಅವುಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಅಗತ್ಯ ಫಲಕಗಳನ್ನು ಹಾಕಬೇಕು

ಜನವರಿ 15, 2025ರ ಬಳಿಕ ಬಿಬಿಎಂಪಿ ಪಶುಸಂಗೋಪನಾ ಇಲಾಖೆ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿವೆ. ಈ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ವಿಫಲವಾದ ಸಂಘ ಸಂಸ್ಥೆಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಶಿಕ್ಷೆಯೇನು?

* ಸಮುದಾಯ ಪ್ರಾಣಿಗಳನ್ನು ಸಾಯಿಸಿದರೆ 75 ಸಾವಿರದವರೆಗೆ ದಂಡದ ಜೊತೆಗೆ ಮೂರು ವರ್ಷಗಳಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ

* ಪ್ರಾಣಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದರೆ ₹50 ಸಾವಿರ ದಂಡ, ಒಂದು ವರ್ಷದಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ

* ಪ್ರಾಣಿಗಳ ಜನನಾಂಗಕ್ಕೆ ಯಾವುದೇ ರೀತಿಯಲ್ಲಿ ಹಲ್ಲೆ ನಡೆಸಿದರೆ ₹1 ಸಾವಿರದ ವರೆಗೆ ದಂಡ ಹಾಗೂ ಎರಡು ವರ್ಷದವರೆಗೆ ಜೈಲು ಶಿಕ್ಷೆ

* ಪ್ರಾಣಿಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ- 1960 ರಂತೆ ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೆ ₹ 50 ದಂಡ ಹಾಗೂ ಮೂರು ತಿಂಗಳವರೆಗೆ ಜೈಲು ಶಿಕ್ಷೆ .

Read More
Next Story