Metro Feeder service | ಮೆಟ್ರೋ ನಿಲ್ದಾಣದಲ್ಲಿ ಫೀಡರ್‌ ಸೇವೆ; ಕಿರಿಕಿರಿ ತಪ್ಪಿಸಲು ಮಾರ್ಗ ವಿಸ್ತರಣೆ
x
ಮೆಟ್ರೋ ಫೀಡರ್‌ ಸೇವೆ

Metro Feeder service | ಮೆಟ್ರೋ ನಿಲ್ದಾಣದಲ್ಲಿ ಫೀಡರ್‌ ಸೇವೆ; ಕಿರಿಕಿರಿ ತಪ್ಪಿಸಲು ಮಾರ್ಗ ವಿಸ್ತರಣೆ

ಮೆಟ್ರೋದಿಂದ ಇಳಿದ ಬಳಿಕ ಪ್ರಯಾಣಿಕರು ವಾಹನಗಳ ದಟ್ಟಣೆ ಹಾಗೂ ದೂರದಲ್ಲಿರುವ ಬಸ್‌ ನಿಲ್ದಾಣಗಳಿಗೆ ತೆರಳಲು ಪ್ರಯಾಸ ಪಡಬೇಕಾಗಿದೆ. ಇದನ್ನು ತಪ್ಪಿಸಲು ಮೆಟ್ರೋ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.


ʼನಮ್ಮ ಮೆಟ್ರೋʼ ಪ್ರಯಾಣದ ನಂತರ ಒಳ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ಅಡೆತಡೆರಹಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಬಿಎಂಟಿಸಿಯು ಮೆಟ್ರೋ ಫೀಡರ್ ಸೇವೆ ಆರಂಭಿಸಿದೆ. ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಬಿಎಂಟಿಸಿ ಜೊತೆಗೆ ಕೈಜೋಡಿಸಿರುವ ʼನಮ್ಮ ಮೆಟ್ರೋʼ ಸಂಸ್ಥೆ ಇದೀಗ ಪ್ರಯಾಣಿಕರ ವಾಸಸ್ಥಳದ ಕುರಿತು ಮಾಹಿತಿ ಸಂಗ್ರಹಿಸಲು ಮುಂದಾಗಿದೆ.

ಮೆಟ್ರೋ ಪ್ರಯಾಣ ದರ ಏರಿಕೆಯಿಂದ ಈಗಾಗಲೇ ಜನರು ಬೇಸತ್ತಿದ್ದಾರೆ. ಮೆಟ್ರೋದಿಂದ ಇಳಿದ ಬಳಿಕ ವಾಹನಗಳ ದಟ್ಟಣೆ ಹಾಗೂ ದೂರದಲ್ಲಿರುವ ಬಸ್‌ ನಿಲ್ದಾಣಗಳಿಗೆ ತೆರಳಲು ಪ್ರಯಾಸ ಪಡಬೇಕಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಮೆಟ್ರೋ ಫೀಡರ್ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ಮಾದಾವರ, ಚಿಕ್ಕಬಿದರಕಲ್ಲು, ದಾಸರಹಳ್ಳಿ, ಯಶವಂತಪುರ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಮೆಟ್ರೋ ಫೀಡರ್ ಬಸ್‌ಗಳನ್ನು ಓಡಿಸಲು ಅನುಕೂಲವಾಗುವಂತೆ ಪ್ರಯಾಣಿಕರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೆಟ್ರೋದಲ್ಲಿ ಸಂಚರಿಸಲು ಯಾವ ಪ್ರದೇಶದಿಂದ ಹೆಚ್ಚು ಜನರು ಬರುತ್ತಾರೆ ಎಂಬ ದತ್ತಾಂಶ ದೊರೆತ ಬಳಿಕ ಅಂತಹ ಪ್ರದೇಶಗಳಿಗೆ ಮೆಟ್ರೋ ಫೀಡರ್ ಸೇವೆ ವಿಸ್ತರಿಸಲು ಬಿಎಂಟಿಸಿ ಸಿದ್ಧತೆ ನಡೆಸಿದೆ.

ಗುರುವಾರ ಬೆಂಗಳೂರಿನ ದಾಸರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಂದ ಮಾಹಿತಿ ಸಂಗ್ರಹಿಸಿದರು. ಈ ಕುರಿತು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ಹೆಸರು ಹೇಳಲಿಚ್ಛಿಸದ ಮೆಟ್ರೋ ಸಿಬ್ಬಂದಿ, "ಹಲವು ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ಫೀಡರ್ ಬಸ್‌ಗಳು ಕಾರ್ಯಾಚರಿಸುತ್ತಿವೆ. ಈ ಮಾರ್ಗಗಳನ್ನು ವಿಸ್ತರಿಸುವ ಸಲುವಾಗಿ ಪ್ರಯಾಣಿಕರ ವಾಸಸ್ಥಳದ ಮಾಹಿತಿ ಸಂಗ್ರಹಿಸಲಾಗುತ್ತಿದೆ” ಎಂದು ಹೇಳಿದರು.

ಈ ಕುರಿತು ಬಿಎಂಟಿಸಿ ಮುಖ್ಯ ಸಂಚಾರ ನಿಯಂತ್ರಕ (ಕಾರ್ಯಾಚರಣೆ) ವಿಶ್ವನಾಥ್‌ ಅವರು ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿ, "ಹಸಿರು ಹಾಗೂ ನೇರಳೆ ಮಾರ್ಗದ ಮೆಟ್ರೋ ಮಾರ್ಗಗಳಲ್ಲಿ ಸಂಚರಿಸಲು ದೂರದ ಹಾಗೂ ಒಳಗಿನ ಪ್ರದೇಶಗಳಿಂದ ಪ್ರಯಾಣಿಕರು ಬರುತ್ತಿದ್ದಾರೆ. ಸಾರಿಗೆ ಸಮಸ್ಯೆ ತಪ್ಪಿಸುವ ಸಲುವಾಗಿ ಮೆಟ್ರೋ ಫಿಡರ್ ಬಸ್ ಸೇವೆ ಒದಗಿಸಲಾಗಿದೆ. ಈಗಾಗಲೇ 6 ಮಾರ್ಗಗಳಲ್ಲಿ ಮೆಟ್ರೋ ಫಿಡರ್ ಬಸ್ ಸೇವೆ ಆರಂಭಿಸಲಾಗಿದೆ. ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣದಿಂದ ಆಚಾರ್ಯ ಇನ್ಸ್ಟಿಟ್ಯೂಟ್, ತೋಟದ ಗುಡ್ಡದಹಳ್ಳಿ, ತಮ್ಮೇನಹಳ್ಳಿ, ಕುದುರೆಗೆರೆ ಕಾಲೋನಿ, ಮಾದನಾಯಕನಹಳ್ಳಿಗೆ ಫೀಡರ್ ಸೇವೆ ಒದಗಿಸಲಾಗಿದೆ. ಫೀಡರ್ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬಸ್‌ಗಳು ಪ್ರತಿ ದಿನ 26 ಟ್ರಿಪ್‌ಗಳಲ್ಲಿ ಸಂಚರಿಸಲಿವೆ ಎಂದು ತಿಳಿಸಿದರು.

ಹೊಸ ವರ್ಷದ ಆರಂಭದಿಂದ ಮೆಟ್ರೋ ಮಾರ್ಗಗಳಲ್ಲಿ ಫೀಡರ್‌ ಸೇವೆ ಆರಂಭಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದರು. ಅದರಂತೆ ಫೆ.10 ರಿಂದ ಪ್ರಾಯೋಗಿಕವಾಗಿ ಕೆಲ ಮೆಟ್ರೋ ನಿಲ್ದಾಣಗಳಿಂದ ಫೀಡರ್‌ ಸೇವೆಗೆ ಚಾಲನೆ ನೀಡಲಾಗಿತ್ತು. ಮೆಟ್ರೋ ಫೀಡರ್‌ ಸೇವೆಗಳ ಕುರಿತು ಬಿಎಂಟಿಸಿ ಬಸ್‌ ಸಂಖ್ಯೆ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಿತ್ತು.

ಬಿಎಂಟಿಸಿಯತ್ತ ಪ್ರಯಾಣಿಕರ ಒಲವು

"ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಮೆಟ್ರೋದಿಂದ ವಿಮುಖರಾದವರು ಸ್ವಂತ ವಾಹನಗಳ ಜೊತೆಗೆ ಬಿಎಂಟಿಸಿ ಬಸ್‌ಗಳನ್ನೂ ಅವಲಂಬಿಸಿದ್ದಾರೆ. ಹಾಗಂತ ಎಲ್ಲ ಪ್ರಯಾಣಿಕರು ಬಿಎಂಟಿಸಿಗೆ ಬರುತ್ತಿಲ್ಲ. ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಇರುವುದರಿಂದ ನಿಖರ ಅಂಕಿ-ಅಂಶ ತಿಳಿದು ಬಂದಿಲ್ಲ. ಆದರೆ, ಪ್ರಯಾಣಿಕರು ಹೆಚ್ಚಿದ್ದಾರೆ ಎಂದಷ್ಟೇ ಹೇಳಬಹುದು" ಎಂದು ವಿಶ್ವನಾಥ್‌ ತಿಳಿಸಿದರು.

Read More
Next Story