ಚಲೋ ದಿಲ್ಲಿ | ರಾಷ್ಟ್ರ ರಾಜಧಾನಿಯಲ್ಲಿ ಮೊಳಗಲಿದೆ ಕನ್ನಡತನ ಅಸ್ಮಿತೆಯ ‘ನನ್ನ ತೆರಿಗೆ ನನ್ನ ಹಕ್ಕು’ ಆಂದೋಲನ
x
ದೆಹಲಿಯಲ್ಲಿ ನಡೆಯಲಿರುವ ಸಾಂಕೇತಿಕ ಧರಣಿಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಶಾಸಕರು, ಸಂಸದರಿಗೆ ಕರೆ ಕೊಟ್ಟಿದ್ದಾರೆ.

ಚಲೋ ದಿಲ್ಲಿ | ರಾಷ್ಟ್ರ ರಾಜಧಾನಿಯಲ್ಲಿ ಮೊಳಗಲಿದೆ ಕನ್ನಡತನ ಅಸ್ಮಿತೆಯ ‘ನನ್ನ ತೆರಿಗೆ ನನ್ನ ಹಕ್ಕು’ ಆಂದೋಲನ

ಕರ್ನಾಟಕದ ಮತ್ತು ಕನ್ನಡಿಗರ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ಆರ್ಥಿಕ, ಸಾಮಾಜಿಕ ದೌರ್ಜನ್ಯ ನಡೆಸುತ್ತಿದೆ ಎಂದು ಟೀಕಿಸಿರುವ ರಾಜ್ಯ ಸರ್ಕಾರ, ದೆಹಲಿಯ ಅಂಗಳದಲ್ಲಿ ತನ್ನ ಹಕ್ಕಿಗಾಗಿ ʼಚಲೋ ದಿಲ್ಲಿʼ ಹೋರಾಟ ಆರಂಭಿಸಲಿದೆ.


ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಭಾರತೀಯ ಜನತಾ ಪಕ್ಷದ ಹಿಂದುತ್ವ ಮತ್ತು ರಾಷ್ಟೀಯತೆ ಕಾರ್ಯಸೂಚಿಯನ್ನು ಎದುರಿಸಲು ರಾಜ್ಯ ಕಾಂಗ್ರೆಸ್ ಕರ್ನಾಟಕದ ಅಸ್ಮಿತೆ, ಪ್ರಾದೇಶಿಕತೆ ಹಾಗೂ ಕನ್ನಡಿಗರ ಆತ್ಮಾಭಿಮಾನವನ್ನು ಪ್ರತ್ಯಸ್ತ್ರವಾಗಿ ಬಳಸಲು ಸಜ್ಜಾಗಿದೆ.

ಸದ್ಯಕ್ಕೆ ಈ ಕಾರ್ಯತಂತ್ರದ ಮೊದಲ ಹಂತವಾಗಿ, ರಾಜ್ಯ ಕಾಂಗ್ರೆಸ್ಸಿಗರು ಹೇಳುತ್ತಿರುವಂತೆ ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಕೇಂದ್ರ ಸರ್ಕಾರದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ‘ದೌರ್ಜನ್ಯ’ವನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಪ್ರತಿಭಟಿವುದಕ್ಕಿಂತ ರಾಷ್ಟ್ರ ರಾಜಧಾನಿಯಲ್ಲಿ ʼಚಲೋ ದಿಲ್ಲಿʼ ನಡೆಸುವ ಮೂಲಕ ತಮ್ಮ ಪ್ರತಿಭಟನೆಯನ್ನು ರಾಷ್ಟ್ರ ಮಟ್ಟದಲ್ಲಿ ಒಂದು ಘಟನಾವಳಿಯಾಗಿ ಬಿಂಬಿಸಲು ರಾಜ್ಯ ಸರ್ಕಾರ ತಂತ್ರ ಹೂಡಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ನಾಳೆ(ಫೆ.7) ‘ನನ್ನ ತೆರಿಗೆ ನನ್ನ ಹಕ್ಕು’ ಆಂದೋಲನ ನಡೆಯಲಿದೆ. ಅನುದಾನ ನೀಡಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ, ಸೌಲಭ್ಯ ನೀಡುವಲ್ಲಿ ಕನ್ನಡಿಗರಿಗೆ ಅನ್ಯಾಯ ಎಂಬ ಕನ್ನಡದ ಧ್ವನಿ ಜಂತರ್-ಮಂತರ್‌ನಲ್ಲಿ ಕೇಳಿಸಲಿದೆ.

“ಏಮ್ಸ್, ಮಹದಾಯಿ ಯೋಜನೆಗೆ ಕೇಂದ್ರ ಮನ್ನಣೆ ನೀಡಿಲ್ಲ. ದಶಕಗಳ ಈ ಕನಸು ಇನ್ನೂ ನನಸಾಗಿಯೇ ಉಳಿದಿದೆ. ಭದ್ರಾ ಯೋಜನೆಗೆ ದಿವ್ಯ ನಿರ್ಲಕ್ಷ್ಯ ತೋರಿದೆ. 2023-24ರ ಬಜೆಟ್ ನಲ್ಲಿ 5,300-ಕೋಟಿ ರೂ. ಘೋಷಿಸಿದ್ದರೂ ಕೇಂದ್ರ ಸರ್ಕಾರ ನೀಡಿರುವುದು ಶೂನ್ಯ. ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ತಳೆದ ಕಾರಣ, ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕಾಗಿರುವ ನಷ್ಟ 1,87,000 ಕೋಟಿ ರೂ. ಬರ ಪರಿಹಾರಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ 18,177 ಕೋಟಿ ರೂ. ಕೇಳಿದ್ದರೂ, ಕೇಂದ್ರ ಸರ್ಕಾರ ಇದವರೆಗೆ ಒಂದು ಪೈಸೆ ಕೂಡ ನೀಡಿಲ್ಲ. ತೆರಿಗೆ ಪಾಲಿನಲ್ಲಿ ಕೂಡ ತಾರತಮ್ಯ ಮಾಡಲಾಗಿದೆ. ರಾಜ್ಯ ಸರ್ಕಾರದ ಪಾಲಾದ ಶೇ. 4.72 ನ್ನು ಶೇ 3.64ಕ್ಕೆ ಇಳಿಸಿದೆ. ಇದರಿಂದ ಕರ್ನಾಟಕ ಕಳೆದುಕೊಂಡದ್ದೆಷ್ಟು ಗೊತ್ತೆ? 62,098 ಕೋಟಿ ರೂಪಾಯಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಹಭಾಗಿತ್ವ ಯೋಜನೆಗಳಿಗೆ ಅನುದಾನ ಕಡಿತ ಮಾಡಿದ್ದರಿಂದ ಕರ್ನಾಟಕ ಕಳೆದುಕೊಂಡದ್ದು 33,000 ಕೋಟಿ. ಕೇಂದ್ರದ ವಿಶೇಷ ಅನುದಾನ ಯೋಜನೆ ಕೂಡ ಮರೀಚಿಕೆಯಾಗಿದೆ. ಹದಿನೈದನೇ ಹಣಕಾಸು ಆಯೋಗ 5,495 ಕೋಟಿ ರೂ. ನೀಡಬೇಕೆಂದು ಹೇಳಿದರೂ, ಕೇಂದ್ರ ಸರ್ಕಾರ ಇದುವರೆಗೆ ಬಿಡಿಗಾಸೂ ಕೊಟ್ಟಿಲ್ಲ, ಎಂದು ರಾಜ್ಯದ ಹಣಕಾಸಿನ ಮಂತ್ರಿಯೂ ಆಗಿರುವ ಸಿದ್ದರಾಮಯ್ಯ ಕೆಂಡಮಂಡಲವಾಗಿದ್ದಾರೆ. “ರಾಜ್ಯದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮನ್ನು ಆಯ್ಕೆ ಮಾಡಿದ ಜನರನ್ನೇ ಮರೆತಿದ್ದಾರೆ. ಕನ್ನಡಿಗರ ನೆರವಿಗಾಗಿ ಏನನ್ನೂ ಮಾಡುತ್ತಿಲ್ಲ” ಎಂದು ಸಿದ್ದರಾಮಯ್ಯ ಟೀಕಿಸಿ, ಬಿಜೆಪಿ ನಾಯಕರಿಗೆ ಮುಜುಗರ ಉಂಟುಮಾಡುತ್ತಿದ್ದಾರೆ.

“ಮೋದಿ ಸೂಕ್ಷ್ಮ ಮನಸ್ಸಿನ ಪ್ರಧಾನಿ. ಹಾಗಾಗಿ ನಮ್ಮ ಪ್ರತಿಭಟನೆಯ ಬಳಿಕವಾದರೂ ರಾಜ್ಯದ ಪಾಲಿನ ಹಣ ನೀಡುತ್ತಾರೆ ಎಂಬ ನಂಬಿಕೆ ನನಗಿದೆ. ಹಾಗಾಗಿ ಪಕ್ಷಬೇಧ ಮರೆತು ನಾಡಿನ ಉಳಿವಿಗಾಗಿ ಮೂರು ರಾಜಕೀಯ ಪಕ್ಷಗಳ ಶಾಸಕರು, ಸಂಸದರು ಹಾಗೂ ನಾಯಕರು ಕೈಗೂಡಿಸಿ” ಎಂದು ರಾಜ್ಯದ ಸಂಸದರು, ಶಾಸಕರಿಗೆ ಕರೆ ನೀಡಿರುವ ಸಿದ್ದರಾಮಯ್ಯ ವರಸಗೆ ಬಿಜೆಪಿಗರು ಒಂದು ರೀತಿ ಮೂಕವಿಸ್ಮಿತರಾಗಿದ್ದಾರೆಂದರೆ ತಪ್ಪಾಗಲಾರದು.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ, ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸೋತಿರುವುದಕ್ಕೆ ಸೇಡು ತೀರಿಸಿಕೊಳ್ಳುತ್ತಿರುವ ಪರಿ ಇದು. ಬಿಜೆಪಿ ತನ್ನ ಹೈಮಾಂಡ್ ಅನ್ನು ಓಲೈಸುವ ಪ್ರಯತ್ನದಲ್ಲಿ ಕನ್ನಡಿಗರ, ಕರ್ನಾಟಕದ ಜನರ ಕತ್ತು ಕೊಯ್ಯುತ್ತಿದೆ ಎನ್ನುತ್ತಾರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.

ಕೇವಲ ಕರ್ನಾಟಕ ಮಾತ್ರವಲ್ಲ. ಬಿಜೆಪಿಯೇತರ ಸರ್ಕಾರವಿರುವ ದಕ್ಷಿಣದ ಇತರ ರಾಜ್ಯಗಳಿಗೂ ಕೇಂದ್ರ ಸರ್ಕಾರ ಇದೇ ಧೋರಣೆಯನ್ನು ತೋರುತ್ತಿದೆ. ರಾಜ್ಯಕ್ಕಾಗಿರುವ ಅನ್ಯಾಯ ಕುರಿತು ಸಂಸತ್ ನ ಹೊರಗೆ ಧ್ವನಿ ಎತ್ತಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ “ಪರಿಸ್ಥಿತಿ ಹೀಗೇ ಮುಂದುವರಿದರೆ, ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ದೇಶ ಕೇಳಬೇಕಾದೀತು” ಎಂದಿರುವುದು ವಿಪರೀತ ಅರ್ಥಗಳಿಗೆ ಕಾರಣವಾಗಿದೆ. ಅವರು ಹತಾಶೆಯಲ್ಲಿ ಹೇಳಿರುವ ಮಾತು ‘ದೇಶ ವಿಭಜಕ’ ಎಂಬ ವ್ಯಾಖ್ಯಾನಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಯಿಂದ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಕಾಂಗ್ರೆಸ್ ತನ್ನ ಹಕ್ಕೊತ್ತಾಯ ಮಂಡಿಸಲು ಇಡೀ ಸರ್ಕಾರವನ್ನೇ ದೆಹಲಿಯ ಅಂಗಳಕ್ಕೆ ಕೊಂಡೊಯ್ಯಲಿದೆ. “ಬನ್ನಿ ದೆಹಲಿಗೆ ಹೋಗೋಣ, ನ್ಯಾಯ ಕೇಳೋಣ” ಎಂದು ವಿರೋಧ ಪಕ್ಷ ಬಿಜೆಪಿಯನ್ನು ಕರೆದು ಇಕ್ಕಟ್ಟಿಗೆ ಸಿಲುಕಿಸಿದೆ. “ಆದರೆ ಈ ಅನ್ಯಾಯವನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳಲೂ ಆಗದೆ ಕನ್ನಡಿಗರ ಮತವನ್ನು ಕಳೆದುಕೊಳ್ಳುವ ಭಯದಲ್ಲಿ ರಾಜ್ಯ ಬಿಜೆಪಿ ಕಂಗಾಲಾಗಿದೆ. ಕೇಂದ್ರ ಸರ್ಕಾರದ ಪರ ವಕೀಲಿಕಿ ಮಾಡುತ್ತಾ, ಪ್ರಧಾನಿ ಮೋದಿ ಅವರ ಮೇಲೆ ಭಾರ ಹಾಕಿ ಕೂತಿದೆ.

ಇದೇ ರೀತಿ ದಲಿತ ಸಮುದಾಯದ ಒಳ ಮೀಸಲಾತಿ ಸಮಸ್ಯೆಯನ್ನು ಕೇಂದ್ರದ ಅಂಗಳಕ್ಕೆ ಎಸೆದು, ಬಿಜೆಪಿ ಸರ್ಕಾರವನ್ನು ಇಕ್ಕಟ್ಡಿಗೆ ಸಿಲುಕಿಸಿರುವ ರಾಜ್ಯ ಕಾಂಗ್ರೆಸ್ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯೂ ಸೇರಿದ ಹಾಗೆ ನೆಲ, ಜಲ ಕುರಿತ ಎಲ್ಲ ಪ್ರಶ್ನೆಗಳನ್ನೆತ್ತಿ ಬಿಜೆಪಿ ಕನ್ನಡನಾಡು, ನುಡಿ ವಿರೋಧಿ ಎಂಬ ಆಂದೋಲನವನ್ನು ಹಮ್ಮಿಕೊಂಡಂತೆ ತೋರುತ್ತಿದೆ.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ಇದೇ ರೀತಿ ಪ್ರಾಂತೀಯ ಪ್ರಶ್ನೆಯನ್ನು ಮುಂದಿಕ್ಕಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದನ್ನು ಕನ್ನಡಿಗರಂತೂ ಮರೆಯಲು ಸಾಧ್ಯವಿಲ್ಲ. ಆಗ ಕಾಂಗ್ರೆಸ್ ಸರ್ಕಾರ ಮುನ್ನೆಲೆಗೆ ತಂದಿದ್ದು, ಕರ್ನಾಟಕಕ್ಕೆ ಪ್ರತ್ಯೇದ ಧ್ವಜದ ವಿಷಯ.

ಕರ್ನಾಟಕದ ಹಳದಿ-ಕೆಂಪು ದ್ವಿವರ್ಣದ ಧ್ವಜವನ್ನು ಕನ್ನಡತನದ ಅಸ್ಮಿತೆಯಾಗಿ ಬಳಸಿದ ಕಾಂಗ್ರೆಸ್ ಆ ರೀತಿಯ ಧ್ವಜವೊಂದನ್ನು ರೂಪಿಸಿ, ಅದನ್ನು ಕಾನೂನು ಬದ್ಧವಾಗಿ ಸಕ್ರಮಗೊಳಿಸಿ, ಅದಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವಂತೆ 2017ರಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಅಂದಿನ ಸಿದ್ದರಾಮಯ್ಯ ಸರ್ಕಾರ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಿತು. ಸಂವಿಧಾನದ ಚೌಕಟ್ಟಿನಲ್ಲಿ ನೋಡುವುದಾದರೆ, ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಹೊಂದುವ ಅವಕಾಶವಿಲ್ಲ. ಆದರೆ ಕೇಂದ್ರ ಸರ್ಕಾರದ ಈ ನಡೆಯನ್ನು ಕರ್ನಾಟಕ ಕನ್ನಡ-ಕನ್ನಡಿಗರ ವಿರೋಧಿ ನಡೆ ಎಂದೇ ಕಾಂಗ್ರೆಸ್‌ ಬಿಂಬಿಸಿತು. ಇಂದಿಗೂ ಕರ್ನಾಟಕ ತನ್ನ ಧ್ವಜದ ಪ್ರಶ್ನೆಯನ್ನು ಜೀವಂತವಾಗಿಯೇ ಉಳಿಸಿಕೊಂಡಿದೆ.

ಕೇಂದ್ರದ ಹಿಂದಿ ಹೇರಿಕೆ, ಮತ್ತು, ಕನ್ನಡದ ನಾಮಫಲಕಗಳಿಗೆ ಸಂಬಂಧಿಸಿದ ಆದೇಶವನ್ನು ರಾಜ್ಯಪಾಲರು ತಿರಸ್ಕರಿಸಿರುವುದೂ ಸೇರಿದಂತೆ ಬಿಜೆಪಿಯನ್ನು ಚುನಾವಣೆಯ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಿಸಿರುವ ರಾಜ್ಯ ಕಾಂಗ್ರೆಸ್ ಈಗ ಒಟ್ಟಾಗಿ, ಬಿಜೆಪಿಯ ಹಿಂದುತ್ವದ ಸಂಕಥನಕ್ಕೆ ಆರ್ಥಿಕ, ಸಾಂಸ್ಕೃತಿಕ ಪ್ರಶ್ನೆಗಳನ್ನೆತ್ತಿ ಪ್ರತಿತಂತ್ರ ಹೂಡಿದೆ.

Read More
Next Story