
ಅಪಘಾತಕ್ಕೀಡಾಗಿದ್ದ ಬೈಕ್
ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಪ್ಪಿಗೆ ಅಪ್ಪನಿಗೆ ಒಂದು ದಿನ ಜೈಲು ಶಿಕ್ಷೆ
ತುಮಕೂರು ಜಿಲ್ಲೆಯ ಗುಬ್ಬಿ ಜೆಎಂಎಫ್‌ಸಿ ನ್ಯಾಯಾಲಯ ಅಪ್ರಾಪ್ತ ಬಾಲಕನ ತಂದೆಗೆ ಒಂದು ದಿನ ಜೈಲು ಶಿಕ್ಷೆ ಹಾಗೂ 30,000 ರೂ ದಂಡ ವಿಧಿಸಿ ಆದೇಶಿಸಿದೆ. ತಂದೆ ರವಿಕುಮಾರ್ ಕೋರ್ಟ್ ಹಾಲ್‌ನಲ್ಲಿರುವ ಸೆಲ್‌ನಲ್ಲೇ ಒಂದು ದಿನದ ಜೈಲು ವಾಸ ಅನುಭವಿಸಿದ್ದಾರೆ.
ಅಪ್ರಾಪ್ತರ ಕೈಗೆ ವಾಹನ ಕೊಡುವ ಮುನ್ನ ಪೋಷಕರು ಒಮ್ಮೆ ಯೋಚಿಸುವುದು ಒಳಿತು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜೆಎಂಎಫ್‌ಸಿ ನ್ಯಾಯಾಲಯವು ಅಪ್ರಾಪ್ತ ಮಗನಿಗೆ ಬೈಕ್ ಕೊಟ್ಟ ತಂದೆಗೆ ಒಂದು ದಿನ ಜೈಲು ಶಿಕ್ಷೆ ವಿಧಿಸಿದೆ. ಅಪ್ರಾಪ್ತರಿಗೆ ಬೈಕ್ ನೀಡದಂತೆ ಪೊಲೀಸರು ಸಾಕಷ್ಟು ಜಾಗೃತಿ ಮೂಡಿಸಿದರೂ ಪಾಠ ಕಲಿಯದ ಪೋಷಕರಿಗೆ ನ್ಯಾಯಾಲಯವೇ ಕಠಿಣ ಸಂದೇಶ ರವಾನಿಸಿದೆ.
ಅಪ್ರಾಪ್ತ ಬಾಲಕನಿಂದ ಆದ ಬೈಕ್ ಅಪಘಾತ ಪ್ರಕರಣದಲ್ಲಿ ರವಿಕುಮಾರ್ ಎಂಬುವರಿಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಆರು ತಿಂಗಳಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಡಿ. ಅನುಪಮ ಅವರು ಅಂತಿಮವಾಗಿ ಅಪ್ರಾಪ್ತ ಬಾಲಕನ ತಂದೆ ರವಿಕುಮಾರ್ ಅವರಿಗೆ ಕೋರ್ಟ್ ಹಾಲ್‌ನಲ್ಲಿರುವ ಸೆಲ್‌ನಲ್ಲೇ ಒಂದು ದಿನದ ಜೈಲು ವಾಸ ವಿಧಿಸಿದೆ.
ಏನಿದು ಪ್ರಕರಣ?
2024 ಅಕ್ಟೋಬರ್ 31 ರಂದು ರವಿಕುಮಾರ್ ಅವರು ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ನೀಡಿದ್ದರು. ಆತ ತುಮಕೂರಿನಿಂದ ಚಾಲನೆ ಮಾಡಿಕೊಂಡು ಬರುವಾಗ ಗುಬ್ಬಿ ಬೈಪಾಸ್‌ನ ಸಿಐಟಿ ಕಾಲೇಜು ಹಿಂಭಾಗದಲ್ಲಿದ್ದ ಮಣ್ಣಿನ ಗುಡ್ಡಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗಿದ್ದ. ಈ ಸಂಬಂಧ ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಲಾಗಿತ್ತು.
ಇತ್ತೀಚೆಗೆ ಕಲಬುರಗಿ, ರಾಣೆಬೆನ್ನೂರು, ತೀರ್ಥಹಳ್ಳಿ, ಮೈಸೂರಿನಲ್ಲಿಯೂ ಅಪ್ರಾಪ್ತ ಬಾಲಕರು ಬೈಕ್ ಚಲಾಯಿಸಿದ್ದರ ಪರಿಣಾಮ ನ್ಯಾಯಾಲಯಗಳಲ್ಲಿ ದಂಡ ಪಾವತಿಸಿದ ಪ್ರಕರಣಗಳು ದಾಖಲಾಗಿದ್ದವು. ಇದೀಗ ಗುಬ್ಬಿಯಲ್ಲಿ ನಡೆದ ಪ್ರಕರಣ ಪೋಷಕರಿಗೆ ಎಚ್ಚರಿಕೆ ಗಂಟೆಯಾಗಿದೆ.