
ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ |ಹೂವು, ತರಕಾರಿಗಳೊಂದಿಗೆ ಸಿಎಂ ನೇತೃತ್ವದ ಸಭೆಗೆ ಬಂದ ರೈತರು
ಚನ್ನರಾಯಪಟ್ಟಣ ಹೋಬಳಿಯಲ್ಲಿ ಏರೋಸ್ಪೇಸ್ ಪಾರ್ಕ್ ನಿರ್ಮಿಸಲು ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿದೆ. ಇದನ್ನು ವಿರೋಧಿಸಿ ರೈತರು ಕಳೆದ ಮೂರು ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಲ್ಲಿ ಕಳೆದ 1190 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ.
ಹೋರಾಟವನ್ನು ದೇವನಹಳ್ಳಿಯಿಂದ ಬೆಂಗಳೂರಿಗೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ರೈತ ಹೋರಾಟಗಾರರೊಂದಿಗೆ ಸಭೆ ಆರಂಭಿಸಿದ್ದಾರೆ.
ಚನ್ನರಾಯಪಟ್ಟಣ ಹೋಬಳಿಯಲ್ಲಿ ರೈತರ ಪ್ರಮುಖ ಕಸುಬಾಗಿರುವ ಕೃಷಿಯ ಮಹತ್ವ ವನ್ಯ ಸಾರಲು ಹಾಗೂ ಭೂಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಲು ರೈತರು ತಾವು ಬೆಳೆದ ಹೂವು, ಹಣ್ಣು ಹಾಗೂ ತರಕಾರಿಗಳೊಂದಿಗೆ ಸಭೆಗೆ ಆಗಮಿಸಿ ಗಮನ ಸೆಳೆದರು.
ಹೂವು, ತರಕಾರಿ ಹೊತ್ತು ದಿಬ್ಬಣದಂತೆ ಬಂದ ರೈತರನ್ನು ವಿಧಾನಸಭೆಯ ಸಭಾಂಗಣಕ್ಕೆ ಆಹ್ವಾನಿಸಲಾಯಿತು.
ಚನ್ನರಾಯಪಟ್ಟಣ ಹೋಬಳಿಯಲ್ಲಿ ಏರೋಸ್ಪೇಸ್ ಪಾರ್ಕ್ ನಿರ್ಮಿಸಲು ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿದೆ. ಇದನ್ನು ವಿರೋಧಿಸಿ ರೈತರು ಕಳೆದ ಮೂರು ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ.
ಕೈಗಾರಿಕಾ ಸಚಿವರ ಸಂಧಾನಕ್ಕೂ ಮಣಿಯದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರೈತರೊಂದಿಗೆ ಖುದ್ದು ಸಭೆ ನಡೆಸುತ್ತಿದ್ದಾರೆ.
ರೈತರ ನಿಯೋಗದಲ್ಲಿ ಸಿನಿಮಾ ನಟ ಪ್ರಕಾಶ್ ರಾಜ್ ಕೂಡ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇತ್ತೀಚೆಗೆ ದೇವನಹಳ್ಳಿ ಚಲೋ ಕೈಗೊಂಡಿದ್ದ ರೈತರನ್ನು ಪೊಲೀಸರು ಬಂಧಿಸಿದ್ದರು. ರೈತರ ಬಂಧನ ವಿರೋಧಿಸಿ ಕಳೆದ ಆರು ದಿನಗಳಿಂದ ರೈತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವದ ಬಳಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಈ ಹೋರಾಟಕ್ಕೆ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್, ಮಾಜಿ ಸಚಿವೆ ಬಿ.ಟಿ. ಲಲಿತ ನಾಯಕ್, ಸಿನಿಮಾ ನಟರಾದ ಪ್ರಕಾಶ್ ರೈ ಹಾಗೂ ಕಿಶೋರ್ ಪಾಲ್ಗೊಂಡು ಬೆಂಬಲ ಸೂಚಿಸಿದ್ದರು.
ಹೃದಯಾಘಾತದಿಂದ ರೈತ ಮುಖಂಡ ಸಾವು
ಬೆಂಗಳೂರಿನಲ್ಲಿ ಚನ್ನರಾಯಪಟ್ಟಣ ರೈತರು ನಡೆಸುತ್ತಿರುವ ಭೂ ಸ್ವಾಧೀನ ವಿರೋಧಿ ಸಮಾವೇಶಕ್ಕೆ ಆಗಮಿಸುತ್ತಿದ್ದ ರೈತ ನಾಯಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕುರಬರಹುಂಡಿ ಗ್ರಾಮದ ಈಶ್ವರಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ದೇವನಹಳ್ಳಿ ರೈತರ ಬಲವಂತದ ಭೂ ಸ್ವಾಧೀನ ರದ್ದುಪಡಿಸಲು ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಜಂಟಿಯಾಗಿ ಗುರುವಾರ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಾಡ ಉಳಿಸಿ ಸಮಾವೇಶ ಹಮ್ಮಿಕೊಂಡಿದ್ದರು. ಈ ಸಮಾವೇಶಕ್ಕೆ ಮೈಸೂರಿನಿಂದ ಆಗಮಿಸುತ್ತಿದ್ದಾಗ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಸಮೀಪ ಈಶ್ವರಪ್ಪ ಅವರಿಗೆ ಹೃದಯಾಘಾತ ಸಂಭವಿಸಿದೆ. ರಾಜ್ಯ ರೈತ ಸಂಘದ ನಾಯಕರು ರೈತ ನಾಯಕನ ಸಾವಿಗೆ ಕಂಬನಿ ಮಿಡಿದಿದ್ದಾರೆ.