Farmers demand inclusion of agriculture sector in GST zero-rating
x

ಸಾಂದರ್ಭಿಕ ಚಿತ್ರ

ಜಿಎಸ್‌ಟಿ ಸುಧಾರಣೆ: ಕರ್ನಾಟಕ ರೈತರಿಗೆ ಖುಷಿಯಿಲ್ಲ, ಶೂನ್ಯ ತೆರಿಗೆಗೆ ಒತ್ತಾಯ

ಕೃಷಿ ಪ್ರಧಾನವಾದ ರಾಷ್ಟ್ರದಲ್ಲಿಯೇ ಕೃಷಿ ವಲಯ ಅಪಾಯದಲ್ಲಿದೆ. ಎಲ್ಲಾ ಉದ್ಯೋಗಗಳಿಗೂ ಭದ್ರತೆ ಇದೆ. ರಾಷ್ಟ್ರದ ಜನತೆಗೆ ರೈತರು ಆಹಾರ ಭದ್ರತೆ ನೀಡುತ್ತಾರೆ. ಆದರೆ ರೈತರಿಗೆ ಭದ್ರತೆ ಇಲ್ಲದಂತಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.


Click the Play button to hear this message in audio format

ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತಗೊಳಿಸುವ ಮೂಲಕ ಜನರಿಗೆ ಸಿಹಿ ಸುದ್ದಿ ನೀಡಿದೆ. ಕೃಷಿ ಉಪಕರಣ ಹಾಗೂ ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲಾಗಿದೆ. ಆದರೆ, ಕೃಷಿ ವಲಯವನ್ನು ಶೂನ್ಯ ಜಿಎಸ್‌ಟಿಯಡಿಗೆ ತರಬೇಕೆಂದು ರೈತರು ಆಗ್ರಹಿಸಿದ್ದಾರೆ.

ಜತೆಗೆ ಕರ್ನಾಟಕ ಕರಾವಳಿಯ ಮೀನುಗಾರರಿಗೆ ಕೇಂದ್ರ ಸರ್ಕಾರದ ʼಕೊಡುಗೆʼಯಿಂದ ಅಷ್ಟೇನೂ ಸಮಾಧಾನವಿಲ್ಲ. ಬದಲಿಗೆ ರಾಜ್ಯ ಸರ್ಕಾರದ ನೀತಿಗಳ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ತಮ್ಮ ಬೋಟುಗಳಿಗೆ ಬಳಸುವ ಡೀಸೆಲ್‌ಗೆ ಸಬ್ಸಿಡಿ ನೀಡಿದರಷ್ಟೇ ಲಾಭ ಎಂಬ ಅಭಿಪ್ರಾಯ ಕೇಳಿಬಂದಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವರು ಕೃಷಿ ವಲಯವನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸಬೇಕೆಂಬ ಬೇಡಿಕೆ ರೈತರಿಂದ ಬಂದಿದೆ.

ಎಂಎಸ್‌ಪಿಗೆ ಶಾಸನಾತ್ಮಕ ಬೆಂಬಲ ಕೊಡಿ

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುತ್ತಪ್ಪ ಎಚ್‌. ಕೊಮಾರ್‌ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, "ಕೃಷಿ ಪ್ರಧಾನವಾದ ರಾಷ್ಟ್ರದಲ್ಲಿಯೇ ಕೃಷಿ ವಲಯ ಅಪಾಯದಲ್ಲಿದೆ. ಎಲ್ಲಾ ಉದ್ಯೋಗಗಳಿಗೂ ಭದ್ರತೆ ಇದೆ. ರಾಷ್ಟ್ರದ ಜನತೆಗೆ ರೈತರು ಆಹಾರ ಭದ್ರತೆ ನೀಡುತ್ತಾರೆ. ಆದರೆ ರೈತರಿಗೆ ಭದ್ರತೆ ಇಲ್ಲದಂತಾಗಿದೆ. ಅತೀವೃಷ್ಟಿ ಹಾಗೂ ಅನಾವೃಷ್ಟಿಗಳಾದ ಸಂದರ್ಭದಲ್ಲಿಯೂ ರೈತರು ಅಪಾರ ನಷ್ಟ ಅನುಭವಿಸುತ್ತಾರೆ. ಎಲ್ಲಾ ಉತ್ಪನ್ನಗಳಿಗೂ ಮಾಲೀಕರೇ ಎಂಆರ್‌ಪಿ ನಿಗದಿಪಡಿಸುತ್ತಾರೆ. ಆದರೆ ರೈತರು ತಮ್ಮ ಉತ್ಪನ್ನಗಳ ಮೇಲೆ ಬೆಲೆ ನಿಗದಿಪಡಿಸಲಾಗದ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ಬೆಳೆಗಳಿಗೆ ಎಂಎಸ್‌ಪಿ ನಿಗದಿಪಡಿಸುತ್ತದೆ. ಆದರೆ ಅದಕ್ಕೂ ಶಾಸನಾತ್ಮಕ ಬೆಂಬಲ ಇಲ್ಲ. ಸರ್ಕಾರ ಜಿಎಸ್‌ಟಿ ಕಡಿತಗೊಳಿಸಿರುವುದಕ್ಕೆ ಸ್ವಾಗತ. ಆದರೆ ಶೇ.12 ಹಗೂ ಶೇ.5 ನಿಗದಿಪಡಿಸದೆ. ಆದರೆ ರೈತರಿಗೆ ಅನುಕೂಲವಾಗವಾಗಬೇಕದರೆ ಕೃಷಿ ವಲಯವನ್ನು ಶೂನ್ಯ ಜಿಎಸ್‌ಟಿಯಡಿ ತರಬೇಕು. ಪ್ರಸ್ತುತವಿರುವ ಕೃಷಿ ನೀತಿ ಹಾಗೂ ಬೆಳೆಗಳಿಗೆ ನಿಗದಿಪಡಿಸಿರುವ ಬೆಲೆಗಳು ಅವೈಜ್ಞಾನಿಕವಾಗಿವೆ" ಎಂದು ತಿಳಿಸಿದರು.

ಉಪಕರಣಗಳಿಗೆ ರಿಯಾಯಿತಿ ನೀಡಲಿ

ಕೇಂದ್ರ ಸರ್ಕಾರ ಕೃಷಿ ವಲಯಕ್ಕೆ ಜಿಎಸ್‌ಟಿ ಕಡಿತಗೊಳಿಸಿರುವುದರಿಂದ ಕೋಟ್ಯಂತರ ರೈತರಿಗೆ ಅನುಕೂಲವಾಗಲಿದೆ. ಕೃಷಿ ಉಪಕರಣಗಳಿಗೆ ಶೇ.18 ಹಾಗೂ ಶೇ.12 ತೆರಿಗೆ ವಿಧಿಸುತ್ತಿದ್ದರಿಂದ ಟ್ರಾಕ್ಟರ್‌, ಉಳುಮೆ ಮಾಡುವ ಯಂತ್ರಗಳು, ಹನಿ ನೀರಾವರಿಗೆ ಬಳಸುವ ಪೈಪುಗಳು, ಗಿಡಗಳಿಗೆ ತಗುಲುವ ರೋಗಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಬಳಸುತ್ತಿದ್ದ ಕ್ರಿಮಿನಾಶಕಗಳು ಸೆ.22 ರಿಂದ ಅಗ್ಗದ ದರದಲ್ಲಿ ಸಿಗುವುದರಿಂದ ಕೃಷಿಕರಿಗೆ ಅನುಕೂಲವಾಗಲಿದ್ದು, ಆದಾಯವೂ ಹೆಚ್ಚಲಿದೆ. ಸರ್ಕಾರ ಕೃಷಿ ಉಪಕರಣಗಳ ಮೇಲೆ ಮತ್ತಷ್ಟು ರಿಯಾಯಿತಿ ನೀಡಬೇಕು ಎಂದು ಮಹದಾಯಿ ಹೋರಾಟಗಾರ ಮಲ್ಲೇಶ್‌ ಉಪ್ಪಾರ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಯಾವುದಕ್ಕೆ ಎಷ್ಟು ಜಿಎಸ್‌ಟಿ?

15HP ಮೀರದ ಡೀಸೆಲ್ ಎಂಜಿನ್‌ಗಳು, ಕೈ ಪಂಪ್‌ಗಳು, ಹನಿ ನೀರಾವರಿ ಉಪಕರಣಗಳು ಮತ್ತು ಸ್ಪ್ರಿಂಕ್ಲರ್‌ಗಳಿಗೆ ನಳಿಕೆಗಳು, ಮಣ್ಣು ತಯಾರಿಕೆಗಾಗಿ ಕೃಷಿ ಮತ್ತು ತೋಟಗಾರಿಕಾ ಯಂತ್ರೋಪಕರಣಗಳು, ಕೊಯ್ಲು ಮತ್ತು ಒಕ್ಕಣೆ ಯಂತ್ರಗಳು, ಕಾಂಪೋಸ್ಟಿಂಗ್ ಯಂತ್ರಗಳು ಮತ್ತು ಟ್ರ್ಯಾಕ್ಟರ್‌ಗಳು (1800 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಸೆಮಿ-ಟ್ರೇಲರ್‌ಗಳಿಗೆ ರಸ್ತೆ ಟ್ರಾಕ್ಟರ್‌ಗಳನ್ನು ಹೊರತುಪಡಿಸಿ) ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿಯನ್ನು ಶೇ. 12 ರಿಂದ ಶೇ. 5 ಕ್ಕೆ ಇಳಿಸಲಾಗಿದೆ. ಸ್ವಯಂ-ಲೋಡಿಂಗ್ ಕೃಷಿ ಟ್ರೇಲರ್‌ಗಳು ಮತ್ತು ಕೈ ಬಂಡಿಗಳಂತಹ ಕೈಯಿಂದ ಚಾಲಿತ ವಾಹನಗಳಿಗೂ ಕಡಿಮೆ ದರಗಳು ಅನ್ವಯಿಸುತ್ತವೆ.

ರಸಗೊಬ್ಬರ ಹಾಗೂ ಕ್ರಿಮಿನಾಶಕಗಳೂ ಅಗ್ಗ

ರಸಗೊಬ್ಬರಕ್ಕೆ ಬಳಕೆ ಮಾಡುವ ಸಲ್ಫ್ಯೂರಿಕ್ ಆಮ್ಲ, ನೈಟ್ರಿಕ್ ಆಮ್ಲ ಮತ್ತು ಅಮೋನಿಯಾ ಸೇರಿದಂತೆ ಪ್ರಮುಖ ರಸಗೊಬ್ಬರ ಮೇಲಿನ ಜಿಎಸ್‌ಟಿಯನ್ನು ಶೇ. 18 ರಿಂದ ಶೇ. 5 ಕ್ಕೆ ಇಳಿಸಲಾಗಿದೆ. ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ರೂಪಾಂತರಗಳು, ಟ್ರೈಕೋಡರ್ಮಾ ವಿರೈಡ್, ಟ್ರೈಕೋಡರ್ಮಾ ಹಾರ್ಜಿಯಾನಮ್, ಸ್ಯೂಡೋಮೊನಾಸ್ ಫ್ಲೋರೆಸೆನ್ಸ್, ಬ್ಯೂವೇರಿಯಾ ಬಾಸ್ಸಿಯಾನಾ, ಹೆಲಿಕೋವರ್ಪಾ ಆರ್ಮಿಗೆರಾದ NPV, ಸ್ಪೋಡೋಪ್ಟೆರಾ ಲಿಟುರಾದ NPV, ಬೇವು ಆಧಾರಿತ ಕೀಟನಾಶಕಗಳು ಮತ್ತು ಸಿಂಬೊಪೊಗನ್ ಸೇರಿದಂತೆ ವಿವಿಧ ಜೈವಿಕ ಕೀಟನಾಶಕಗಳ ಮೇಲಿನ ಜಿಎಸ್‌ಟಿಯನ್ನು ಶೇ. 5 ಕ್ಕೆ ಇಳಿಸಿದೆ. 1985 ರ ರಸಗೊಬ್ಬರ ನಿಯಂತ್ರಣ ಆದೇಶದಡಿ ಬರುವ ಸೂಕ್ಷ್ಮ ಪೋಷಕಾಂಶಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲಾಗಿದೆ.

ಟ್ರ್ಯಾಕ್ಟರ್ ಬಿಡಿಭಾಗಗಳಿಗೂ ಶೇ.5 ಜಿಎಸ್‌ಟಿ

ಟ್ರ್ಯಾಕ್ಟರ್ ಟೈರ್‌ಗಳು ಮತ್ತು ಟ್ಯೂಬ್‌ಗಳು, ಟ್ರ್ಯಾಕ್ಟರ್‌ಗಳಿಗೆ 250 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಕೃಷಿ ಡೀಸೆಲ್ ಎಂಜಿನ್‌ಗಳು, ಹೈಡ್ರಾಲಿಕ್ ಪಂಪ್‌ಗಳು ಮತ್ತು ರಿಯರ್ ವೀಲ್ ರಿಮ್, ಸೆಂಟರ್ ಹೌಸಿಂಗ್, ಟ್ರಾನ್ಸ್‌ಮಿಷನ್ ಹೌಸಿಂಗ್, ಫ್ರಂಟ್ ಆಕ್ಸಲ್ ಸಪೋರ್ಟ್, ಬಂಪರ್‌ಗಳು, ಬ್ರೇಕ್ ಅಸೆಂಬ್ಲಿ, ಗೇರ್ ಬಾಕ್ಸ್‌ಗಳು, ಟ್ರಾನ್ಸ್-ಆಕ್ಸಲ್‌ಗಳು, ರೇಡಿಯೇಟರ್ ಅಸೆಂಬ್ಲಿ ಮತ್ತು ಕೂಲಿಂಗ್ ಸಿಸ್ಟಮ್ ಭಾಗಗಳಂತಹ ಟ್ರ್ಯಾಕ್ಟರ್‌ನ ವಿವಿಧ ಭಾಗಗಳು ಸೇರಿದಂತೆ ಸಮಗ್ರ ಟ್ರ್ಯಾಕ್ಟರ್ ಘಟಕಗಳ ಮೇಲಿನ ಜಿಎಸ್‌ಟಿಯನ್ನು ಶೇ.18 ರಿಂದ ಶೇ.5 ಕ್ಕೆ ಇಳಿಕೆ ಮಾಡಿದೆ.

ಮೀನುಗಾರರಿಗೆ ಬಂಪರ್, ಆದರೆ...

ಹೊಸ ತೆರಿಗೆ ನೀತಿಯ ಅಡಿಯಲ್ಲಿ ದೋಣಿ ಎಂಜಿನ್, ಬಲೆಗಳು ಅಗ್ಗವಾಗಿದ್ದು ಕರ್ನಾಟಕದ ಕರಾವಳಿಗೆ ಹೊಸ ಚೈತನ್ಯ ನೀಡಿದೆ. ಮೀನುಗಾರಿಕೆಗೆ ಅತ್ಯಗತ್ಯವಾದ ದೋಣಿ ಎಂಜಿನ್‌ಗಳು ಮತ್ತು ಬಲೆಗಳಂತಹ ಉಪಕರಣಗಳ ಮೇಲಿನ ತೆರಿಗೆ ದರವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿರುವ ಈ ಬದಲಾವಣೆಯು ಮೀನುಗಾರರ ಬಂಡವಾಳ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಿ, ಅವರ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.

ರಾಜ್ಯದಂತೆ ಕೇಂದ್ರವೂ ಡೀಸೆಲ್‌ಗೆ ಸಬ್ಸಿಡಿ ನೀಡಲಿ

ದಕ್ಷಿಣ ಕನ್ನಡ ಜಿಲ್ಲಾ ಫರ್ಸಿನ್‌ ಬೋಟ್‌ ಸಂಘದ ಉಪಾಧ್ಯಕ್ಷ ಇಬ್ರಾಹಿಂ ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿ," ಮೀನುಗಾರರು ವರ್ಷಕ್ಕೆ ಒಂದು ಬಾರಿ ಮಾತ್ರ ಬಂಡವಾಳ ಹಾಕಿ ಬಲೆಯನ್ನು ಖರೀದಿಸುತ್ತಾರೆ. ಕೇಂದ್ರ ಸರ್ಕಾರ ಬಲೆಗಳಿಗೆ ಶೇ.12 ರಿಂದ ಶೇ.5 ಕ್ಕೆ ಇಳಿಸಿರುವುದರಿಂದ ಮೀನುಗಾರರಿಗೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಅದರ ಬದಲಾಗಿ ರಾಜ್ಯ ಸರ್ಕಾರ ಡೀಸೆಲ್‌ಗೆ ಶೇ.4 ಸಬ್ಸಿಡಿ ನೀಡುತ್ತಿದೆ. ರಾಜ್ಯದಂತೆ ಕೇಂದ್ರ ಸರ್ಕಾರವೂ ಡೀಸೆಲ್‌ಗೆ ಸಬ್ಸಿಡಿ ನೀಡಿದರೆ ಮೀನುಗಾರರಿಗೆ ಅನುಕೂಲವಾಗಲಿದೆ" ಎಂದು ತಿಳಿಸಿದರು.

ದೋಣಿ ಎಂಜಿನ್‌ಗಳ ಮೇಲಿನ ತೆರಿಗೆ ಭಾರೀ ಇಳಿಕೆ

ಈ ಹಿಂದೆ, ಮೀನುಗಾರಿಕಾ ದೋಣಿಗಳಿಗೆ ಅಳವಡಿಸುವ ಎಂಜಿನ್‌ಗಳ ಮೇಲೆ ಶೇ. 28ರಷ್ಟು ಅಧಿಕ ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದು ಹೊಸ ದೋಣಿ ಖರೀದಿಸಲು ಅಥವಾ ಹಳೆಯ ಎಂಜಿನ್ ಬದಲಾಯಿಸಲು ಮೀನುಗಾರರಿಗೆ ದೊಡ್ಡ ಆರ್ಥಿಕ ಹೊರೆಯಾಗಿತ್ತು. ಇದೀಗ ಶೇ. 28 ಸ್ಲ್ಯಾಬ್ ರದ್ದುಗೊಳಿಸಿ, ಎಂಜಿನ್‌ಗಳನ್ನು ಶೇ.18 ತೆರಿಗೆ ವ್ಯಾಪ್ತಿಗೆ ತಂದಿರುವುದರಿಂದ ಅವುಗಳ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ. ಇದು ಮೀನುಗಾರರಿಗೆ ದೊಡ್ಡ ಉಳಿತಾಯವನ್ನು ತಂದುಕೊಡಲಿದೆ.

ಮೀನುಗಾರಿಕಾ ಉಪಕರಣಗಳು ಅಗ್ಗ

ಮೀನುಗಾರರು ಪ್ರತಿನಿತ್ಯ ಬಳಸುವ ಬಲೆ, ಹಗ್ಗ, ಫ್ಲೋಟ್‌ಗಳು (ಬೀಸುಬಲೆ) ಮುಂತಾದವುಗಳ ಮೇಲೆ ಈ ಹಿಂದೆ ಶೇ.12 ತೆರಿಗೆ ಇತ್ತು. ಹೊಸ ನೀತಿಯಲ್ಲಿ ಶೇ.12 ಸ್ಲ್ಯಾಬ್ ಅನ್ನು ರದ್ದುಪಡಿಸಿ, ಈ ಎಲ್ಲಾ ಉಪಕರಣಗಳನ್ನು ಶೇ.5 ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದು ಮೀನುಗಾರರ ದೈನಂದಿನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ.

ತಾಜಾ ಮೀನಿನ ಮೇಲೆ ಶೂನ್ಯ ತೆರಿಗೆ ಮುಂದುವರಿಕೆ

ಮೊದಲಿನಂತೆಯೇ, ಸಂಸ್ಕರಿಸದ, ತಾಜಾ ಅಥವಾ ಶೈತ್ಯೀಕರಿಸಿದ ಮೀನಿನ ಮೇಲೆ ಯಾವುದೇ ಜಿಎಸ್‌ಟಿ ಇರುವುದಿಲ್ಲ (ಶೂನ್ಯ ತೆರಿಗೆ). ಇದು ಪ್ರಾಥಮಿಕ ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ದೊಡ್ಡ ವಿನಾಯಿತಿಯಾಗಿ ಮುಂದುವರಿದಿದೆ.


Read More
Next Story