
ರೈತ ಹೋರಾಟ: ಫೆ.16ರಂದು ಭಾರತ್ ಬಂದ್‌ಗೆ ಕರೆ, ಏನಿರುತ್ತೆ? ಏನಿರಲ್ಲ?
ಕನಿಷ್ಟ ಬೆಂಬಲ ಬೆಲೆ(ಎಂಎಸ್ಪಿ)ಗೆ ಕಾನೂನು ಖಾತರಿ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರೈತ ಸಂಘಟನೆಗಳು ನಡೆಸುತ್ತಿರುವ ʼಚಲೋ ದಿಲ್ಲಿʼ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಹೋರಾಟದ ಮುಂದಿನ ಭಾಗವಾಗಿ ರೈತ ಸಂಘಟನೆಗಳು ಫೆ.16ರಂದು ಶುಕ್ರವಾರ ಭಾರತ್ ಬಂದ್ ಕರೆ ನೀಡಿವೆ.
ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆಎಂ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ(ಕಿಎಂಎಂ) ಜಂಟಿಯಾಗಿ ಭಾರತ್ ಬಂದ್ ಗೆ ಕರೆ ನೀಡಿವೆ. 2020ರ ರೈತ ಹೋರಾಟದ ವೇಳೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಪೊಳ್ಳು ಭರವಸೆಗಳನ್ನು ನೀಡಿ ರೈತರನ್ನು ಸರ್ಕಾರ ದಿಕ್ಕುತಪ್ಪಿಸಿದೆ. ಕೊಟ್ಟ ಮಾತಿನಂತೆ ನಡೆದು ರೈತರ ಬೇಡಿಕೆಗಳನ್ನು ಈಡೇರಿಸುವ ಬದಲು, ಅನ್ನದಾತರನ್ನು ವಂಚಿಸುವ ಅಡ್ಡದಾರಿಗಳನ್ನು ಹಿಡಿದಿರುವ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಮತ್ತೆ ಹೋರಾಟವನ್ನು ಕೈಗೆತ್ತಿಕೊಂಡಿರುವುದಾಗಿ ರೈತ ಸಂಘಟನೆಗಳು ಹೇಳಿವೆ.
ಶಾಂತಿಯುತ ಪ್ರತಿಭಟನಾಕಾರರ ಮೇಲೆ ಸರ್ಕಾರ ದಮನಕಾರಿ ಕ್ರಮಗಳನ್ನು ಕೈಗೊಂಡಿದೆ. ಅಶ್ರುವಾಯು, ರಬ್ಬರ್ ಪ್ಯಾಲೇಟ್ ಸಿಡಿಸುವ ಮೂಲಕ ಮತ್ತು ದೆಹಲಿ ಗಡಿಗಳನ್ನು ಅಂತಾರಾಷ್ಟ್ರೀಯ ಗಡಿಗಳಂತೆ ಮುಚ್ಚುವ ಮೂಲಕ ಪ್ರಜಾಸತ್ತಾತ್ಮಕ ಹೋರಾಟವನ್ನು ದಮನ ಮಾಡುತ್ತಿದೆ. ಹಾಗಾಗಿ ಸರ್ಕಾರದ ದಮನ ಕ್ರಮಗಳ ವಿರುದ್ಧ ಭಾರತ್ ಬಂದ್ ಗೆ ಕರೆ ನೀಡಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.
ಈಗಾಗಲೇ ಪಂಜಾಬ್ ಮತ್ತು ಹರ್ಯಾಣದಲ್ಲಿ ರೈಲು ತಡೆ ಮಾಡುವ ಮೂಲಕ ರೈಲು ಸಂಚಾರವನ್ನು ಅಸ್ತವ್ಯಸ್ಥಗೊಳಿಸಿರುವ ರೈತರು, ಶುಕ್ರವಾರದ ರಾಷ್ಟ್ರವ್ಯಾಪಿ ಬಂದ್ ಮೂಲಕ ಇಡೀ ದೇಶದ ಉದ್ದಗಲಕ್ಕೆ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದಾಗಿ ಗುಡುಗಿದ್ದಾರೆ.
ಭಾರತ್ ಬಂದ್ ಯಾವಾಗ? ಎಲ್ಲಿ? ಏನು?
ಫೆ.೧೬ರಂದು ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ ಭಾರತ್ ಬಂದ್ ನಡೆಸುವುದಾಗಿ ಸಂಘಟನೆಗಳು ಹೇಳಿವೆ. ಈ ಅವಧಿಯಲ್ಲಿ ದೇಶದ ಗ್ರಾಮೀಣ ಭಾಗಗಳಲ್ಲಿ ರೈತ ಸಂಘಟನೆಗಳು ರಸ್ತೆ ತಡೆ ನಡೆಸಲಿವೆ. ಆ ಮೂಲಕ ನಗರ ಪ್ರದೇಶಗಳಿಗೆ ಜನ ಮತ್ತು ವಾಹನಗಳು ಬರದಂತೆ ತಡೆಯುವ ಮೂಲಕ ಬಂದ್ ಯಶಸ್ವಿಗೊಳಿಸುವ ತಂತ್ರ ಮಾಡಲಾಗಿದೆ. ಅಂಗಡಿಮುಂಗಟ್ಟುಗಳು, ಎಪಿಎಂಸಿ, ತರಕಾರಿ ಮಂಡಿಗಳು, ಸರ್ಕಾರಿ ಕಚೇರಿ, ಸಾರಿಗೆ ವಾಹನಗಳು ಕೂಡ ಸ್ಥಗಿತಗೊಳ್ಳಲಿವೆ. ಹಾಲು, ಔಷಧದಂತಹ ತುರ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಂದ್ ಆಗಲಿದೆ ಎಂದು ಹೇಳಲಾಗಿದೆ.
ಹರ್ಯಾಣ ಮತ್ತು ಪಂಜಾಬ್ ಸೇರಿದಂತೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈಗಾಗಲೇ ರೈತರು ಕರೆ ನೀಡಿರುವ ಬಂದ್ ಗೆ ಸರ್ಕಾರಿ ನೌಕರ ಸಂಘಟನೆಗಳು ಮತ್ತು ಸಾರಿಗೆ ನೌಕರರ ಸಂಘಟನೆಗಳು ಕೂಡ ಬೆಂಬಲ ಘೋಷಿಸಿವೆ. ಅಲ್ಲದೆ, ವಿವಿಧ ಕಾರ್ಮಿಕ ಸಂಘಟನೆಗಳು ಕೂಡ ಬೆಂಬಲ ಘೋಷಿಸಿರುವುದರಿಂದ ಆ ಭಾಗದಲ್ಲಿ ಬಂದ್ ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಬಂದ್ ಗೆ ಯಾರೆಲ್ಲಾ ಬೆಂಬಲಿಸಿದ್ದಾರೆ?
ಪಂಜಾಬ್ ಮತ್ತು ಇತರೆ ಕೆಲವು ಉತ್ತರ ಭಾರತದ ರಾಜ್ಯಗಳಲ್ಲಿ ರೈತ ಸಂಘಟನೆಗಳ ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಾರ್ಮಿಕ ಸಂಘಟನೆಗಳು, ಸರ್ಕಾರಿ ನೌಕರರ ಸಂಘಟನೆಗಳು ಕೂಡ ಬಂದ್ ಗೆ ತಮ್ಮದೇ ಆದ ಬೇಡಿಕೆಗಳನ್ನು ಮುಂದಿಟ್ಟು ಬೆಂಬಲ ಘೋಷಿಸಿವೆ. ಹರ್ಯಾಣದ ಸಾರಿಗೆ ಸಂಸ್ಥೆ ನೌಕರರು ಕೂಡ ಸಾರಿಗೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಬಂದ್ ಗೆ ಬೆಂಬಲ ಘೋಷಿಸಿದ್ದಾರೆ.
ಭಾರತ್ ಬಂದ್ ಕರೆಗೆ ಕಾರಣವೇನು?
ವಾಸ್ತವವಾಗಿ ಭಾರತ್ ಬಂದ್ ಕರೆ ನೀಡುವ ಯೋಜನೆ ಈ ಬಾರಿಯ ರೈತ ಸಂಘಟನೆಗಳ ಹೋರಾಟದ ಅಜೆಂಡಾದಲ್ಲಿ ಇರಲೇ ಇಲ್ಲ. ಆದರೆ, ಪಂಜಾಬ್ ಮತ್ತು ಹರ್ಯಾಣದ ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಸರ್ಕಾರ ಬಳಸಿದ ಪ್ರಜಾಸತ್ತಾತ್ಮಕ ಹೋರಾಟದ ದಮನ ಕ್ರಮಗಳು ರೈತರನ್ನು ಕೆರಳಿಸಿವೆ.
ರೈತರು ರಾಷ್ಟ್ರರಾಜಧಾನಿಗೆ ಪ್ರವೇಶಿಸುವುದನ್ನೇ ತಡೆಯಲು ಸರ್ಕಾರ ಗಡಿಗಳಲ್ಲಿ ಬೃಹತ್ ಮೊಳೆ ನೆಟ್ಟು, ಮುಳ್ಳುತಂತಿ ಬೇಲಿ ಹಾಕಿ, ಕಾಂಕ್ರೀಟ್ ಮತ್ತು ಕಂಟೇನರ್ ಗೋಡೆ ನಿರ್ಮಿಸಿದೆ. ಜೊತೆಗೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಡ್ರೋನ್ ಬಳಸಿ ಅಶ್ರುವಾಯು ಮತ್ತು ಪ್ಲಾಸ್ಟಿಕ್ ಗುಂಡು ಹಾರಿಸಿದೆ. ಈ ಮೂಲಕ ಸರ್ಕಾರ ರೈತರ ಪ್ರತಿಭಟನೆಯ ಹಕ್ಕನ್ನು ದಮನ ಮಾಡುವುದೇ ಅಲ್ಲದೆ, ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದೆ. ಹಾಗಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಭಾರತ್ ಬಂದ್ ಕರೆ ಕೊಡುವುದು ಅನಿವಾರ್ಯವಾಗಿದೆ ಎಂಬುದು ರೈತ ನಾಯಕರ ವಾದ.
ಕರ್ನಾಟಕದಲ್ಲಿ ಬಂದ್ ಹೇಗೆ?
ರಾಜ್ಯದ ಮಟ್ಟಿಗೆ ಬಂದ್ ಅವಧಿಯಲ್ಲಿ ಬದಲಾವಣೆ ಘೋಷಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಬೆಳಿಗ್ಗೆ ೬ರಿಂದ ಬಂದ್ ನಡೆಸುವುದಾಗಿ ಸಂಘಟನೆಗಳು ಹೇಳಿದ್ದರೂ, ರಾಜ್ಯದ ರೈತ ಸಂಘಟನೆಗಳ ಒಕ್ಕೂಟವು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ರಸ್ತೆ ತಡೆ ಮಾಡುವ ಮೂಲಕ ಬಂದ್ ನಡೆಸಲು ನಿರ್ಧರಿಸಿವೆ.
ಪ್ರಮುಖವಾಗಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ರಸ್ತೆ ನಡೆಸುವ ಮೂಲಕ, ಸಂಪರ್ಕ ರಸ್ತೆಗಳನ್ನು ತಡೆಯುವ ಮೂಲಕ ಬಂದ್ ನಡೆಸುವುದಾಗಿ ರಾಜ್ಯ ರೈತ ಸಂಘದ ನಾಯಕರು ಘೋಷಿಸಿದ್ದಾರೆ. ರಾಜ್ಯದಲ್ಲಿ ಕೂಡ ವಿವಿಧ ಕಾರ್ಮಿಕ ಸಂಘಟನೆಗಳು ಬಂದ್ ಗೆ ಬೆಂಬಲ ಘೋಷಿಸಿವೆ. ಆದಾಗ್ಯೂ ಸರ್ಕಾರಿ ಕಚೇರಿಗಳು ಮತ್ತು ಶಾಲಾ- ಕಾಲೇಜುಗಳು ಎಂದಿನಂತೆ ನಡೆಯುವ ಸಾಧ್ಯತೆ ಇದೆ.
ರೈತರ ಬೇಡಿಕೆಗಳೇನು?
ಮುಖ್ಯವಾಗಿ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವಾಗ ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟು ಅಧಿಕ ಬೆಲೆಯನ್ನು ನಿಗದಿ ಮಾಡಬೇಕು ಎಂಬ ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸನ್ನು ಜಾರಿಗೆ ತರಬೇಕು ಮತ್ತು ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಗೆ ಪ್ರತ್ಯೇಕ ಕಾಯ್ದೆಯ ಮೂಲಕ ಕಾನೂನು ಬಲ ನೀಡಬೇಕು ಎಂಬುದು ರೈತರ ಬೇಡಿಕೆ.
ಸರ್ಕಾರ ಪ್ರತಿವರ್ಷ ೨೦ಕ್ಕೂ ಹೆಚ್ಚು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದರೂ ಖರೀದಿ ಏಜೆನ್ಸಿಗಳು ಕೇವಲ ಒಂದೆರಡು ಬೆಳೆಗಳನ್ನು ಮಾತ್ರ ಖರೀದಿಸುತ್ತವೆ, ಅದರಲ್ಲೂ ಸಕಾಲದಲ್ಲಿ ಕಟಾವಿನ ವೇಳೆಗೆ ಸರಿಯಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯದೆ, ಸಕಾಲದಲ್ಲಿ ಪಾವತಿ ಮಾಡದೆ ರೈತರು ಬೆಂಬಲ ಬೆಲೆ ಖರೀದಿಯ ಪ್ರಯೋಜನ ಪಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ಹಾಗಾಗಿ ಎಂಎಸ್ಪಿಯ ಪ್ರಯೋಜನ ಪಡೆಯುವುದು ಕೇವಲ ಶೇ.೭ರಷ್ಟು ಮಂದಿ ರೈತರು ಮಾತ್ರ. ಆದ್ದರಿಂದ ಇಂತಹ ಕಣ್ಣೊರೆಸುವ ತಂತ್ರಗಳನ್ನು ಬಿಟ್ಟು ಶಾಸನದ ಬಲ ನೀಡುವ ಮೂಲಕ ಎಲ್ಲವನ್ನೂ ಕಾನೂನು ಚೌಕಟ್ಟಿನಡಿ ತರಬೇಕು ಎಂಬುದು ಪ್ರಮುಖ ಬೇಡಿಕೆ.
ಜೊತೆಗೆ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು, ನರೇಗಾ ಕೂಲಿ ದಿನ ಮತ್ತು ದರವನ್ನು ಹೆಚ್ಚಿಸಬೇಕು, ಭೂಸ್ವಾಧೀನ ಮಸೂದೆ ತಿದ್ದುಪಡಿಯನ್ನು ರದ್ಧುಪಡಿಸಬೇಕು, ರೈತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ರೈತರ ಸರ್ಕಾರದ ಮುಂದಿಟ್ಟಿದ್ದಾರೆ.
ಬೇಡಿಕೆ ಕುರಿತು ಸರ್ಕಾರದ ವಾದವೇನು?
ರೈತರು ಕೆಲವರು ಕುಮ್ಮಕ್ಕಿನಿಂದ ಪದೇಪದೆ ಹೋರಾಟಕ್ಕೆ ಇಳಿಯುತ್ತಿದ್ದಾರೆ. ತಮ್ಮ ಬೇಡಿಕೆಯ ಪಟ್ಟಿಯನ್ನು ಬೆಳೆಸುತ್ತಲೇ ಇದ್ದಾರೆ. ರೈತರು ಅನಗತ್ಯ ಮೊಂಡುತನ ಬಿಟ್ಟು ಮಾತುಕತೆಗೆ ಬಂದರೆ ಸಮಸ್ಯೆ ಬಗೆಹರಿಯಲಿದೆ ಎಂಬುದು ಸರ್ಕಾರದ ವಾದ. ಜೊತೆಗೆ ಎಂಎಸ್ಪಿ ವಿಷಯದಲ್ಲಿ ಏಕಾಏಕಿ ನಿರ್ಧಾರ ಕೈಗೊಳ್ಳಲಾಗದು. ಅದಕ್ಕೆ ಕಾನೂನು ರೂಪಿಸಲು ಆ ಸಂಬಂಧಿತ ಎಲ್ಲಾ ವಲಯದವರೊಂದಿಗೆ ಸಮಾಲೋಚನೆ ನಡೆಸಿ ಕಾನೂನು ರೂಪಿಸಬೇಕಿದೆ. ಆದರೆ, ರೈತರು ಆಹೋರಾತ್ರಿ ಎಲ್ಲವೂ ಆಗಬೇಕೆಂದು ಹಠಕ್ಕೆ ಬಿದ್ದರೆ ಏನು ಮಾಡುವುದು? ಎಂಬುದು ಕೃಷಿ ಸಚಿವ ಅರ್ಜುನ್ ಮುಂಡಾ ಹೇಳಿಕೆ.
ಸರ್ಕಾರದ ವಾದದಲ್ಲಿ ಹುರುಳಿಲ್ಲ. ನಾವು ಈ ಬೇಡಿಕೆಗಳನ್ನು ಯಾವುದನ್ನೂ ಹೊಸದಾಗಿ ಸೇರಿಸಿಲ್ಲ, ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆಸಿದ ಹೋರಾಟವನ್ನು ಹಿಂತೆಗೆದುಕೊಳ್ಳುವಾಗ ಪ್ರಧಾನಮಂತ್ರಿಗಳೇ ಈ ಬೇಡಿಕೆ ಈಡೇರಿಸುವ ಮಾತುಕೊಟ್ಟಿದ್ದರು. ಆಗ ಅವರು ಕೊಟ್ಟ ಗಡುವು ಮುಗಿದು ಎರಡೂವರೆ ವರ್ಷ ಕಳೆದಿದೆ ಎಂದು ರೈತ ನಾಯಕರು ಹೇಳುತ್ತಾರೆ.