ಭೂ ಸ್ವಾಧೀನಕ್ಕೆ ವಿರೋಧ | ಸರ್ವೆಗೆ ಬಂದವರ ಡ್ರೋನ್, ಲ್ಯಾಪ್‌ಟಾಪ್‌ ಸುಟ್ಟು ರೈತರ ಆಕ್ರೋಶ
x
ಕೆಐಎಡಿಬಿ ಸರ್ವೆಗೆ ಬಂದವರ ಡ್ರೋನ್, ಲ್ಯಾಪ್‌ಟಾಪ್‌ಗಳನ್ನು ಸುಟ್ಟು ಹಾಕಿದ ರೈತರು

ಭೂ ಸ್ವಾಧೀನಕ್ಕೆ ವಿರೋಧ | ಸರ್ವೆಗೆ ಬಂದವರ ಡ್ರೋನ್, ಲ್ಯಾಪ್‌ಟಾಪ್‌ ಸುಟ್ಟು ರೈತರ ಆಕ್ರೋಶ

ನಮ್ಮ ಭೂಮಿಯನ್ನು ನಾವೇ ರಕ್ಷಣೆ ಮಾಡಿಕೊಳ್ಳುತ್ತೇವೆ. ಭೂಮಿಯ ಉಳಿವಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಾಗಿದ್ದೇವೆ. ಯಾವುದೇ ಕಾರಣಕ್ಕೂ ರಾಜಕಾರಣಿಗಳ ಇಲ್ಲವೇ ರಾಜಕೀಯ ಪಕ್ಷಗಳ ಬಳಿ ಹೋಗಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ


Click the Play button to hear this message in audio format

ಕೆಐಎಡಿಬಿಯ ಭೂ ಸ್ವಾಧೀನ ವಿರೋಧಿಸಿ ರೈತರು, ಸರ್ವೆ ತಂಡದ ಡ್ರೋನ್‌ ಮತ್ತು ಲ್ಯಾಪ್‌ಟಾಪ್‌ ಗಳನ್ನು ಕಿತ್ತು ಹಚ್ಚಿದ ಘಟನೆ ಆನೇಕಲ್‌ ತಾಲೂಕಿನ ಹಂದೇನಹಳ್ಳಿಯಲ್ಲಿ ನಡೆದಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿರ್ಮಿಸಲು ಉದ್ದೇಶಿಸಿರುವ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಾದ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಸರ್ವೆ ಮಾಡಲು ಖಾಸಗಿ ಸಂಸ್ಥೆಯ ಪ್ರತಿನಿಧಿಗಳು ಬಂದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಡ್ರೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕಿತ್ತುಕೊಂಡು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಹಂದೇನಹಳ್ಳಿ ಮತ್ತು ಮೇಡಹಳ್ಳಿ ಗ್ರಾಮಗಳ 700 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕೈಗಾರಿಕ ಪ್ರದೇಶ ಸ್ಥಾಪನೆಗೆ ಕೆಐಎಡಿಬಿ ಇತ್ತೀಚೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಕೃಷಿ ಜಮೀನುಗಳ ಸರ್ವೇಗೆ ಖಾಸಗಿ ಸಂಸ್ಥೆಯ ಪ್ರತಿನಿಧಿಗಳು ಡ್ರೋನ್‌ ಮತ್ತು ಲ್ಯಾಪ್‌ಟಾಪ್ ಜೊತೆ ಬಂದಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪ್ರವೇಶಿಸದಂತೆ ತಡೆಯೊಡ್ಡಿದ ರೈತರು, ಅವರಿಂದ ಡ್ರೋನ್‌ ಮತ್ತು ಲ್ಯಾಪ್‌ಟ್ಯಾಪ್ ಕಿತ್ತುಕೊಂಡು ಬೆಂಕಿ ಹಚ್ಚಿದರು. ನಂತರ ಬಡಿಗೆ ಮತ್ತು ದೊಣ್ಣೆ ಹಿಡಿದು ಸರ್ವೆ ಮಾಡದಂತೆ ತಡೆದು ವಾಪಸ್ ಕಳಿಸಿದ್ದಾರೆ.

'ನಮ್ಮ ಭೂಮಿಯನ್ನು ನಾವೇ ರಕ್ಷಣೆ ಮಾಡಿಕೊಳ್ಳುತ್ತೇವೆ. ಭೂಮಿಯ ಉಳಿವಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ದರಾಗಿದ್ದೇವೆ. ಯಾವುದೇ ಕಾರಣಕ್ಕೂ ರಾಜಕಾರಣಿಗಳ ಇಲ್ಲವೇ ರಾಜಕೀಯ ಪಕ್ಷಗಳ ಬಳಿ ಹೋಗಲ್ಲ. ರಕ್ತ ಮತ್ತು ಪ್ರಾಣ ನೀಡುತ್ತೇವೆ. ಒಂದಿಂಚು ಭೂಮಿಯನ್ನೂ ಬಿಟ್ಟು ಕೊಡುವುದಿಲ್ಲ. ನಮ್ಮ ಆಯ್ಕೆ ಸ್ಪಷ್ಟವಾಗಿದೆ' ಎಂದು ರೈತರು ಹೇಳಿದ್ದಾರೆ.

'ರೈತರ ಕಣ್ಣು ತಪ್ಪಿಸಿ ಸರ್ವೆ ಮಾಡಲು ಕೆಐಎಡಿಬಿ ಸಿದ್ಧತೆ ನಡೆಸಿದೆ. ಸರ್ವೆಗಾಗಿ ಯಾರಾದರೂ ನಮ್ಮ ಭೂಮಿಗಳಿಗೆ ಕಾಲಿಟ್ಟರೆ ಎಲ್ಲದ್ದಕ್ಕೂ ರೈತರು ಸಿದ್ದರಾಗಿದ್ದೇವೆ. ಬಂಗಾರದಂತಹ ಭೂಮಿಯನ್ನು ಹಾಳು ಮಾಡಲು ಕೆಐಎಡಿಬಿ ಸಿದ್ಧತೆ ನಡೆಸಿದೆ' ಎಂದು ರೈತ ಮುಖಂಡ ಚಂದ್ರಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ʼಯಾವೊಬ್ಬ ರಾಜಕಾರಣಿ ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ರಾಜಕಾರಣಿಗಳು ರೈತರ ಮುಂದೆ ಮೊಸಳೆ ಕಣ್ಣೀರು ಸುರಿಸುವ ರಾಜಕೀಯ ನಾಟಕ ನಿಲ್ಲಿಸಬೇಕುʼ ಎಂದು ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಕೇಶವ ರೆಡ್ಡಿ, ನಾಗೇಶ್, ಅಂಬರೀಷ್, ಮುನಿಯಲ್ಲಪ್ಪ, ಶ್ರೀನಿವಾಸ ರೆಡ್ಡಿ, ವೇಣು ಮೊದಲಾದವರು ಭಾಗವಹಿಸಿದ್ದರು.

Read More
Next Story