Farmer Suicide Numbers Raised in Karnataka Council
x

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಮೂರು ವರ್ಷಗಳಲ್ಲಿ 2,847 ಅನ್ನದಾತರ ಆತ್ಮಹತ್ಯೆ: ಸಚಿವ ಲಾಡ್ ಸ್ಪಷ್ಟನೆ

ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ವಿತರಣೆಯ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. "ರಾಜ್ಯದಲ್ಲಿ ವರದಿಯಾದ ಒಟ್ಟು 2,847 ಪ್ರಕರಣಗಳ ಪೈಕಿ ಈವರೆಗೆ 2,160 ಕುಟುಂಬಗಳಿಗೆ ಮಾತ್ರ ಪರಿಹಾರ ತಲುಪಿದೆ.


Click the Play button to hear this message in audio format

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರಗಾಲ, ಸಾಲಬಾಧೆ ಹಾಗೂ ಬೆಲೆ ಕುಸಿತದಂತಹ ಕಾರಣಗಳಿಂದ ಒಟ್ಟು 2,847 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆಘಾತಕಾರಿ ಅಂಕಿ-ಸಂಖ್ಯೆ ವಿಧಾನ ಪರಿಷತ್‌ನಲ್ಲಿ ಬಹಿರಂಗವಾಗಿದೆ. ನಿಯಮ 68ರ ಅಡಿಯಲ್ಲಿ ನಡೆದ ಚರ್ಚೆಯ ವೇಳೆ ಬಿಜೆಪಿ ಸದಸ್ಯ ಕೇಶವ್ ಪ್ರಸಾದ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಅನ್ನದಾತರ ಸಂಕಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆದರು.

ಸದನದಲ್ಲಿ ವಿಷಯ ಮಂಡಿಸಿದ ಕೇಶವ್ ಪ್ರಸಾದ್, ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ವಿತರಣೆಯ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. "ರಾಜ್ಯದಲ್ಲಿ ವರದಿಯಾದ ಒಟ್ಟು 2,847 ಪ್ರಕರಣಗಳ ಪೈಕಿ ಈವರೆಗೆ 2,160 ಕುಟುಂಬಗಳಿಗೆ ಮಾತ್ರ ಪರಿಹಾರ ತಲುಪಿದೆ. ಇನ್ನುಳಿದ 697 ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ. ಪ್ರಮುಖವಾಗಿ 2024-25ನೇ ಸಾಲಿನ 126 ಮತ್ತು ಪ್ರಸಕ್ತ 2025-26ನೇ ಸಾಲಿನ 112 ಅರ್ಹ ಪ್ರಕರಣಗಳು ಇನ್ನೂ ಪರಿಹಾರದ ನಿರೀಕ್ಷೆಯಲ್ಲಿವೆ," ಎಂದು ಅಂಕಿ-ಸಂಖ್ಯೆ ಸಮೇತ ಸದನಕ್ಕೆ ವಿವರಿಸಿದರು.

ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣ

ಆತ್ಮಹತ್ಯೆ ಪ್ರಕರಣಗಳ ಜಿಲ್ಲಾವಾರು ವಿವರಗಳನ್ನು ನೀಡಿದ ಅವರು, ಹಾವೇರಿ ಜಿಲ್ಲೆ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಬೆಳಗಾವಿ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯನ್ನು ಉಲ್ಲೇಖಿಸಿದ ಅವರು, ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 10,371 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆತಂಕಕಾರಿ ವಿಷಯವನ್ನು ಪ್ರಸ್ತಾಪಿಸಿದರು.

ಬೇರೆ ರಾಜ್ಯಗಳ ಮಾದರಿ ಅಧ್ಯಯನಕ್ಕೆ ಆಗ್ರಹ

ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಶೂನ್ಯ ಅಥವಾ ತೀರಾ ಕಡಿಮೆ ಎಂದು ವರದಿಯಾಗಿರುವುದನ್ನು ಕೇಶವ್ ಪ್ರಸಾದ್ ಉಲ್ಲೇಖಿಸಿದರು. "ಆ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ತಡೆಗೆ ಕೈಗೊಂಡಿರುವ ಕ್ರಮಗಳೇನು ಎಂಬ ಬಗ್ಗೆ ಅಧ್ಯಯನ ನಡೆಸಬೇಕು ಮತ್ತು ಆ ಮಾದರಿಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಂಡು ರೈತರ ಪ್ರಾಣ ಉಳಿಸಲು ಸರ್ಕಾರ ಮುಂದಾಗಬೇಕು," ಎಂದು ಅವರು ಆಗ್ರಹಿಸಿದರು.

ದಾಖಲಾತಿ ವ್ಯವಸ್ಥೆಯ ವ್ಯತ್ಯಾಸ: ಸಚಿವ ಲಾಡ್ ಸಮರ್ಥನೆ

ವಿರೋಧ ಪಕ್ಷದ ಆರೋಪಗಳಿಗೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ರಾಜ್ಯದ ಪಾರದರ್ಶಕ ವರದಿಗಾರಿಕೆ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರು. "ಕರ್ನಾಟಕದಲ್ಲಿ ಪ್ರತಿಯೊಂದು ಸಣ್ಣ ಅಪರಾಧ ಪ್ರಕರಣವೂ ದಾಖಲಾಗುತ್ತದೆ. ಆದರೆ, ಬಿಹಾರ ಮತ್ತಿತರ ಉತ್ತರ ಭಾರತದ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗುವ ಪ್ರಮಾಣ ಕಡಿಮೆ. ದಾಖಲೆಗಳಲ್ಲಿ ಇಲ್ಲ ಎಂದ ಮಾತ್ರಕ್ಕೆ ಅಲ್ಲಿ ರೈತರ ಆತ್ಮಹತ್ಯೆ ನಡೆಯುತ್ತಿಲ್ಲ ಎಂದರ್ಥವಲ್ಲ. ನಮ್ಮಲ್ಲಿ ವ್ಯವಸ್ಥಿತವಾಗಿ ಅಂಕಿ-ಸಂಖ್ಯೆಗಳನ್ನು ನಿರ್ವಹಿಸಲಾಗುತ್ತಿದೆ," ಎಂದು ಸ್ಪಷ್ಟನೆ ನೀಡಿದರು.

Read More
Next Story