
ಆರ್‌ಟಿಐ ದಾಖಲೆ ಪಡೆಯಲು ಹಸು ಮಾರಿದ ರೈತ; ಅರಕಲಗೂಡು ತಾಲೂಕಿನಲ್ಲಿ ರೈತನ ವ್ಯಥೆ
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ರೈತರೊಬ್ಬರು ಗ್ರಾಮ ಪಂಚಾಯ್ತಿ ಕಾಮಗಾರಿಗಳ ದಾಖಲೆ ಪಡೆಯಲು ಹಸು ಮಾರಿದ್ದಲ್ಲದೇ ಎತ್ತಿನ ಗಾಡಿಯಲ್ಲಿ ದಾಖಲೆಗಳನ್ನು ಕೊಂಡೊಯ್ದ ಪ್ರಕರಣ ಬೆಳಕಿಗೆ ಬಂದಿದೆ.
ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕಾಯ್ದುಕೊಂಡು ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲು 2005 ರಲ್ಲಿ ಜಾರಿಗೆ ತಂದ ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶವೇ ಹಳಿ ತಪ್ಪಿದೆ. ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ ಬಗ್ಗೆ ದೂರುಗಳ ಕೇಳಿ ಬರುತ್ತಿರುವ ಬೆನ್ನಲ್ಲೇ ಹಲವರು ಪ್ರಾಮಾಣಿಕವಾಗಿ ಆಡಳಿತವನ್ನು ಎಚ್ಚರಿಸುವ, ಭ್ರಷ್ಟಾಚಾರ ಬಯಲಿಗೆ ಎಳೆಯುವ ಕಾರ್ಯಕ್ಕಾಗಿ ಆರ್‌ಟಿಐ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ರೈತರೊಬ್ಬರು ಗ್ರಾಮ ಪಂಚಾಯ್ತಿ ಕಾಮಗಾರಿಗಳ ದಾಖಲೆ ಪಡೆಯಲು ಹಸು ಮಾರಿದ್ದಲ್ಲದೇ ಎತ್ತಿನ ಗಾಡಿಯಲ್ಲಿ ದಾಖಲೆಗಳನ್ನು ಕೊಂಡೊಯ್ದ ಪ್ರಕರಣ ಬೆಳಕಿಗೆ ಬಂದಿದೆ.
ರಾಮನಾಥಪುರ ಹೋಬಳಿ ಕಾಳೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ರೈತ ರವಿ ಎಂಬುವರು ಪಂಚಾಯ್ತಿಯ 15ನೇ ಹಣಕಾಸು ಆಯೋಗದಲ್ಲಿ ೨೦೨೦ ರಿಂದ 2025 ರವರೆಗೆ ಕೈಗೊಂಡಿರುವ ಕಾಮಗಾರಿಗಳ ವಿವರ ಕೋರಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಂಚಾಯ್ತಿ ಅಧಿಕಾರಿಗಳು 16,370 ಪುಟಗಳ ದಾಖಲೆ ಇದೆ. ಇದಕ್ಕಾಗಿ 32,340 ರೂ. ಶುಲ್ಕ ಪಾವತಿಸುವಂತೆ ಹಿಂಬರಹ ನೀಡಿದ್ದರು. ಆದರೆ, ಬಡ ರೈತರಾಗಿರುವ ರವಿ ಅವರಿಗೆ ಅಷ್ಟು ಹಣ ನೀಡಲು ದಾಖಲೆ ಪಡೆಯಲು ಸಾಧ್ಯವಾಗಿರಲಿಲ್ಲ. ಆಗ ಜೀವನಾಧಾರಕ್ಕಾಗಿ ಇದ್ದ ಹಸುವನ್ನು 25 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಸ್ನೇಹಿತರಿಂದ ಮತ್ತಷ್ಟು ಹಣ ಸಾಲ ಮಾಡಿ ಪ್ರತಿ ಅರ್ಜಿಗೆ 2ರೂ.ಗಳಂತೆ ಒಟ್ಟು 32,340 ರೂ. ಶುಲ್ಕ ಪಾವತಿಸಿದ್ದಾರೆ.
ಎತ್ತಿನಗಾಡಿಯಲ್ಲಿ ದಾಖಲೆ ರವಾನೆ
ಸರ್ಕಾರಿ ಕಚೇರಿಯಿಂದ ಅಂಚೆ ಮೂಲಕ ಕಳುಹಿಸಲಾದ ದಾಖಲೆಗಳನ್ನು ಕೊಂಡೊಯ್ಯಲು ರವಿ ಅವರು ಎತ್ತಿನಗಾಡಿಯಲ್ಲಿ ತುಂಬಿಕೊಂಡೇ ಮನೆಗೆ ತಂದಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸತ್ಯಕ್ಕಾಗಿ ಒಬ್ಬ ಸಾಮಾನ್ಯ ರೈತ ನೀಡಬೇಕಾದ ಬೆಲೆ ಇದು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ನೀಡಿದ ರೈತ ರವಿ ಅವರು, ನಮ್ಮ ಗ್ರಾಮವು ಸ್ವಾತಂತ್ರ್ಯ ಪೂರ್ವದಲ್ಲಿ ಯಾವ ರೀತಿ ಇತ್ತೋ ಹಾಗೆಯೇ ಇದೆ. ಸಾಕಷ್ಟು ಕಾಮಗಾರಿಗಳನ್ನು ಬರೀ ದಾಖಲೆಗಳಲ್ಲಿ ತೋರಿಸಲಾಗಿದೆ. ಯಾವುದೋ ಕಾಮಗಾರಿಗೆ ಬೇರೆ ಯತಾವುದೇ ಪೋಟೊ ಅಪ್‌ಲೋಡ್ ಮಾಡಲಾಗಿದೆ. ಇದರಿಂದ ಬೇಸತ್ತು ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದೆ. ಈಗ ಪಂಚಾಯ್ತಿ ಅಧಿಕಾರಿಗಳು ದಾಖಲೆ ಒದಗಿಸಿದ್ದು, ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತೇನೆ. ಅಕ್ರಮ ಕಂಡುಬಂದರೆ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ. ಇಷ್ಟೊಂದು ದಾಖಲೆ ಪಡೆಯಲು ಹಸುವನ್ನು ಮಾರಾಟ ಮಾಡಿದ್ದೇನೆ. ಪಂಚಾಯ್ತಿಯವರು ನೀಡಿರುವ ದಾಖಲೆಗಳು ಕೂಡ ಸರಿಯಿಲ್ಲ. ಈ ಬಗ್ಗೆ ಮಂಗಳವಾರ ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದರು.
ಅರ್ಜಿ ಹಿಂಪಡೆಯಲು ಒತ್ತಡ
ಕಾಳೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಐದು ವರ್ಷಗಳಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರ ಆಗಿರುವ ಬಗ್ಗೆ ಗಮನಕ್ಕೆ ಬಂತು. ಹಾಗಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆ ಕೋರಿ ಅರ್ಜಿ ಸಲ್ಲಿಸಿದೆ. ಕೆಲವರು ಅರ್ಜಿ ಹಿಂತೆಗೆದುಕೊಳ್ಳುವಂತೆ ಒತ್ತಡ, ಆಮಿಷವೊಡ್ಡಿದರು. ನನ್ನ ಮೇಲೆ ಸುಳ್ಳು ದೂರುಗಳನ್ನೂ ದಾಖಲಿಸಿದ್ದರು ಎಂದು ಆರೋಪಿಸಿದರು.
ಕಾಮಗಾರಿಗಳು ಹಾಗೂ ಸರ್ಕಾರದ ಸವಲತ್ತುಗಳ ಬಗ್ಗೆ ಕೇಳಿದರೆ ಉತ್ತರಿಸಲು ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರೈತರಿಗೆ ಯಾವುದೇ ಅನುಕೂಲ ಮಾಡಿಕೊಡುತ್ತಿರಲಿಲ್ಲ. ಆರ್‌ಟಿಐ ಕಾಯ್ದೆಯಡಿ ಮಾಹಿತಿ ಕೇಳಿದರೆ ವಿನಾಕಾರಣ ಅಲೆದಾಡಿಸುತ್ತಿದ್ದರು. ಅಧಿಕಾರಿಗಳ ಈ ನಿರ್ಲಕ್ಷ್ಯ ಖಂಡಿಸಿ ಹೋರಾಟಕ್ಕೆ ಮುಂದಾಗಿದ್ದೇನೆ, ನನ್ನ ಹೋರಾಟದಿಂದ ಹಲವರಿಗೆ ಅನುಕೂಲವಾದರೆ ಅಷ್ಟೇ ಸಾಕು ಎಂದು ರವಿ ತಿಳಿಸಿದರು.
ಒಬ್ಬ ರೈತ ಸತ್ಯ ತಿಳಿಯಲು ಹಸುವನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾಳೇನಹಳ್ಳಿ ಪಂಚಾಯ್ತಿಯಲ್ಲಿ 14 ಗ್ರಾಮಗಳಿದ್ದು, 14 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪಾರದರ್ಶಕತೆ ಕೊರತೆ ಕಂಡು ಬಂದರೆ ಗ್ರಾಮಗಳ ಅಭಿವೃದ್ಧಿ ಹೇಗೆ ಆಗಲಿದೆ ಎಂದು ಪ್ರಶ್ನಿಸಿದರು.
ರೈತ ರವಿ ಅವರ ಜತೆ ನಡೆಸಿದ ಸಂದರ್ಶನ ಇಲ್ಲಿದೆ.

