ಮೋದಿ, ಶಾ ಬಳಿ ಕೇಳು ಸಂಕಷ್ಟ ಹೇಳಿಕೊಳ್ಳಲು ಬಂದ ರೈತನ ಮೇಲೆ ಖರ್ಗೆ ಸಿಡಿಮಿಡಿ; ಬಿಜೆಪಿ ಟೀಕೆ
x

"ಮೋದಿ, ಶಾ ಬಳಿ ಕೇಳು" ಸಂಕಷ್ಟ ಹೇಳಿಕೊಳ್ಳಲು ಬಂದ ರೈತನ ಮೇಲೆ ಖರ್ಗೆ ಸಿಡಿಮಿಡಿ; ಬಿಜೆಪಿ ಟೀಕೆ

ನಿನಗೆ ಏನಾದರೂ ಪರಿಹಾರ ಬೇಕಿದ್ದರೆ, ಹೋಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಳಿ ಕೇಳು," ಎಂದು ರೈತನ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ತಮಗಾಗಿರುವ ಬೆಳೆ ಹಾನಿಯ ಸಂಕಷ್ಟ ಹೇಳಿಕೊಳ್ಳಲು ಬಂದ ರೈತನೊಬ್ಬನ ಮೇಲೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಡಿಮಿಡಿಗೊಂಡ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಇದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಖರ್ಗೆಯವರ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಭಾನುವಾರ ಕಲಬುರಗಿಯ ತಮ್ಮ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕರನ್ನು ಭೇಟಿಯಾಗುತ್ತಿದ್ದಾಗ, ಯುವ ರೈತನೊಬ್ಬ ಅತಿವೃಷ್ಟಿಯಿಂದಾಗಿ ತನ್ನ ನಾಲ್ಕು ಎಕರೆ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಅಳಲು ತೋಡಿಕೊಂಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, "ನೀನು ಎಷ್ಟು ಎಕರೆ ಬೆಳೆದಿದ್ದೀಯಾ?" ಎಂದು ಪ್ರಶ್ನಿಸಿದ್ದಾರೆ. ರೈತ "ನಾಲ್ಕು ಎಕರೆ" ಎಂದು ಉತ್ತರಿಸಿದಾಗ, ಖರ್ಗೆ ಅವರು, "ನನ್ನದೇ 40 ಎಕರೆ ಹಾಳಾಗಿದೆ. ನಿನ್ನ ನಷ್ಟಕ್ಕಿಂತ ನನ್ನ ನಷ್ಟವೇ ದೊಡ್ಡದು," ಎಂದು ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಅವರು, "ನನ್ನ ತೊಗರಿ ಮಾತ್ರವಲ್ಲ, ಹೆಸರು, ಹತ್ತಿ, ಸೂರ್ಯಕಾಂತಿ ಎಲ್ಲವೂ ಹಾಳಾಗಿದೆ. ನಾನು ಯಾರಿಗೆ ಹೋಗಿ ಹೇಳಲಿ? ಇಲ್ಲಿ ಪ್ರಚಾರಕ್ಕಾಗಿ ಬರಬೇಡ. ನನಗೂ ಎಲ್ಲ ಗೊತ್ತಿದೆ. ನಿನಗೆ ಏನಾದರೂ ಪರಿಹಾರ ಬೇಕಿದ್ದರೆ, ಹೋಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಳಿ ಕೇಳು," ಎಂದು ರೈತನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅನಿರೀಕ್ಷಿತ ಪ್ರತಿಕ್ರಿಯೆಯಿಂದ ರೈತ ಕಂಗಾಲಾಗಿದ್ದು, ಈ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ.

ಬಿಜೆಪಿಯಿಂದ ಟೀಕೆ

ಈ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ಅಧ್ಯಕ್ಷರು ರೈತನಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು 'X' (ಹಿಂದಿನ ಟ್ವಿಟರ್) ನಲ್ಲಿ, "ಕಾಂಗ್ರೆಸ್ ರೈತರಿಗೆ ಅವಮಾನಿಸುತ್ತದೆ! ತಮ್ಮ ಸಂಕಷ್ಟ ಹೇಳಿಕೊಳ್ಳಲು ಬಂದ ರೈತನಿಗೆ, 'ಪ್ರಚಾರಕ್ಕಾಗಿ ನನ್ನ ಬಳಿ ಬರಬೇಡಿ' ಎಂದು ಹೇಳಿ ಕಳುಹಿಸಲಾಗಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ನಮ್ಮ ರೈತರನ್ನು ಇಷ್ಟೊಂದು ಏಕೆ ದ್ವೇಷಿಸುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.

ಖರ್ಗೆಯವರ ಮಾತುಗಳು ಅವರ ಅಹಂಕಾರ ಮತ್ತು ರೈತರ ಬಗೆಗಿನ ಕಾಳಜಿಯಿಲ್ಲದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಒಬ್ಬ ರಾಷ್ಟ್ರೀಯ ನಾಯಕರಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಬದಲು, ಅವರನ್ನು ಅವಮಾನಿಸಿ ಕಳುಹಿಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Read More
Next Story