ರೈತ ನಾಯಕ ಜಿ ಸಿ ಬಯ್ಯಾ ರೆಡ್ಡಿ ನಿಧನ: ಸಿ.ಎಂ ಸಂತಾಪ
ರೈತ ನಾಯಕ ಜಿ ಸಿ ಬಯ್ಯಾರೆಡ್ಡಿ ಅವರು ಐಕ್ಯ ಹೋರಾಟಗಳನ್ನು ರೂಪಿಸಿ ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆ ಮೂಲಕ ರಾಜ್ಯದ ಬಹುತೇಕ ರೈತ ಸಂಘಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ದೇವನಹಳ್ಳಿ ಭೂಸ್ವಾಧೀನ ಹೋರಾಟದ ಮುಂಚೂಣಿಯಲ್ಲಿದ್ದರು.
ರೈತ ಹಾಗೂ ಕಾರ್ಮಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ ಪ್ರಾಂತ ರೈತ ಸಂಘದ(ಕೆಪಿಆರ್‌ಎಸ್) ರಾಜ್ಯಾಧ್ಯಕ್ಷ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ.ಬಯ್ಯಾರೆಡ್ಡಿ ನಿಧನರಾಗಿದ್ದಾರೆ.
ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಮುಂಜಾನೆ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚೇಳೂರು ಗ್ರಾಮದ ಬಯ್ಯಾರೆಡ್ಡಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.
ತುಮಕೂರಿನಲ್ಲಿ ಇತ್ತೀಚೆಗೆ ನಡೆದ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಬಯ್ಯಾರೆಡ್ಡಿ ಅವರನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ರಾಜ್ಯದಾದ್ಯಂತ ರೈತ, ಕಾರ್ಮಿಕ ಹೋರಾಟಗಳನ್ನು ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದರು. ದೇವನಹಳ್ಳಿ ತಾಲೂಕಿನಲ್ಲಿ ಮೂರು ವರ್ಷಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ನೇತೃತ್ವ ವಹಿಸಿದ್ದರು. ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕೆಐಎಡಿಬಿ ಕ್ರಮವನ್ನು ವಿರೋಧಿಸಿ ಹೋರಾಟ ಸಂಘಟಿಸಿದ್ದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಹಲವು ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರು. 1999ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಬಯ್ಯಾರೆಡ್ಡಿ ಸ್ಪರ್ಧಿಸಿದ್ದರು.
ಸೈದ್ಧಾಂತಿಕ ನಿಷ್ಠೆಯ ಕಾಮ್ರೆಡ್
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ರೈತ ಚಳವಳಿ ಕಟ್ಟಲು ಬಯ್ಯಾರೆಡ್ಡಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 2000ನೇ ಇಸವಿಯಲ್ಲಿ ಗುಲ್ಬರ್ಗದಲ್ಲಿ ನಡೆದ ಹನ್ನೆರಡನೇ ರಾಜ್ಯ ಮಟ್ಟದ ರೈತ ಸಮ್ಮೇಳನದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಗೊಂಡು ಇಡೀ ರಾಜ್ಯದಾದ್ಯಂತ ಹೋರಾಟಗಳನ್ನು ಸಂಘಟಿಸಿದ್ದರು. 2017 ರಲ್ಲಿ ಹುಬ್ಬಳ್ಳಿ ಯಲ್ಲಿ ನಡೆದ 16 ನೇ ರಾಜ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಂದಿನಿಂದ ರೈತ ಹಾಗೂ ಕಾರ್ಮಿಕ ಹೋರಾಟದಲ್ಲಿ ತಮ್ಮ ಬದ್ದತೆ ಹಾಗೂ ಸೈದ್ಧಾಂತಿಕ ನಿಷ್ಠೆಗಾಗಿ ಹೆಸರಾಗಿದ್ದರು.
ರೈತ ಸಮುದಾಯಕ್ಕಾಗಿ ಹೋರಾಟ
ಬಗರ್ ಹುಕುಂ ಸಾಗುವಳಿ ರೈತರ ಹೋರಾಟ, ರೈತರ ಕೃಷಿ ಪಂಪ ಸೆಟ್ ಗಳಿಗೆ ಮೀಟರ್ ಅಳವಡಿಕೆ ವಿರುದ್ಧ ನಡೆದ ಹೋರಾಟ, ರೇಷ್ಮೆ, ಹಾಲು, ಕಬ್ಬು, ತೆಂಗು ,ತೊಗರಿ, ಹತ್ತಿ ಮುಂತಾದ ಬೆಳೆಗಾರರ ಹೋರಾಟ, ಕೋಳಿ ಸಾಕಾಣಿಕೆದಾರರ ಪರವಾದ ಹೋರಾಟ, ಅರಣ್ಯ ಸಾಗುವಳಿ ರೈತರ ಪರ ಹೋರಾಟ, ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ನಡೆದ ಹೋರಾಟ, ಎಂಎಸ್ ಪಿ ಕಾನೂನು, ಋಣಮುಕ್ತಿ ಕಾನೂನು ಜಾರಿಗಾಗಿ ನಡೆದ ಹೋರಾಟ ಸೇರಿದಂತೆ ನೂರಾರು ಹೋರಾಟಗಳಲ್ಲಿ ಜಿ.ಸಿ. ಬಯ್ಯಾರೆಡ್ಡಿ ಮುಂದಾಳತ್ವ ವಹಿಸಿದ್ದರು. ಹೀಗೆ ಸುದೀರ್ಘ ನಲವತ್ತು ವರ್ಷಗಳಿಂದ ರೈತ ಹಾಗೂ ಕಾರ್ಮಿಕರ ಪರವಾದ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು.
ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ
ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಐತಿಹಾಸಿಕ ದೆಹಲಿ ರೈತ ಚಳವಳಿ ಪ್ರಾರಂಭವಾದ ಸಂದರ್ಭದಲ್ಲಿ ಕರ್ನಾಟಕದಿಂದಲೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಯ್ಯಾರೆಡ್ಡಿ ನೋಡಿಕೊಂಡಿದ್ದರು. ಜೊತೆಗೆ ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆ ರೂಪಿಸಿ ರಾಜ್ಯದ ಹಲವು ರೈತ ಸಂಘಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಸಿ.ಎಂ ಸಿದ್ದರಾಮಯ್ಯ ಸಂತಾಪ
ಜಿ.ಸಿ. ಬಯ್ಯಾರೆಡ್ಡಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಸಿಪಿಐ(ಎಂ) ನಾಯಕ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ನಿಧನದಿಂದ ದುಃಖಿತನಾಗಿದ್ದೇನೆ. ಆತ್ಮೀಯ ಸ್ನೇಹಿತರಾಗಿದ್ದ ಬಯ್ಯಾರೆಡ್ಡಿಯವರು ಭೇಟಿಯಾದಾಗೆಲ್ಲ ದೇಶದ ರೈತರು ಮತ್ತು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದರು. ಈ ಸಮುದಾಯಗಳಿಗೆ ನ್ಯಾಯ ಕೊಡಿಸಲು ತಮ್ಮ ಬದುಕನ್ನು ಅರ್ಪಿಸಿಕೊಂಡಿದ್ದರು. ದಣಿವರಿಯದ ಜನಪರ ಹೋರಾಟಗಾರ. ಅವರ ಕುಟುಂಬ ವರ್ಗ ಮತ್ತು ಹಿತೈಷಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಚಿವ ಎಂ ಬಿ ಪಾಟೀಲ ಸಂತಾಪ
ರೈತ ನಾಯಕ ಜಿ ಸಿ ಬಯ್ಯಾರೆಡ್ಡಿ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ ಎಂ.ಬಿ ಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ. ಬಯ್ಯಾರೆಡ್ಡಿ ಅವರು ಎಡಪಂಥೀಯ ಹಾದಿಯಲ್ಲಿ ರೈತರು ಮತ್ತು ಕಾರ್ಮಿಕರ ಹೋರಾಟಗಳನ್ನು ಸಂಘಟಿಸುತ್ತಿದ್ದರು. ದೇವನಹಳ್ಳಿ ಭೂ ಸ್ವಾಧೀನ ಸಂಬಂಧ ಇತ್ತೀಚೆಗೆ ಮುಖ್ಯಮಂತ್ರಿ ಕರೆದಿದ್ದ ಸಭೆಗೂ ಬಂದಿದ್ದರು. ಅವರ ನಿಧನದಿಂದ ಕೃಷಿಕ ಸಮುದಾಯವು ಒಬ್ಬ ಪ್ರಾಮಾಣಿಕ ನೇತಾರನನ್ನು ಕಳೆದುಕೊಂಡಿದೆ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಅಂತಿಮ ದರ್ಶನ
ಜಿ.ಸಿ.ಬಯ್ಯಾರೆಡ್ಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಸಂಜೆ 4ರವರೆಗೆ ಬೆಂಗಳೂರಿನಲ್ಲಿರುವ ಕೆಪಿಆರ್‌ಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆ ವಿಚಾರಗಳ ಬಗ್ಗೆ ಕುಟುಂಬದ ಜೊತೆ ಚರ್ಚಿಸಲಾಗುವುದು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ. ಮುನಿವೆಂಕಟಪ್ಪ ತಿಳಿಸಿದ್ದಾರೆ.
ಬಯ್ಯಾರೆಡ್ಡಿ ನಿಧನಕ್ಕೆ ಎಚ್‌ಡಿಕೆ ಸಂತಾಪ
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ನಿಧನಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ರೈತ ನಾಯಕನ ಅಗಲಿಕೆ ಸುದ್ದಿ ಕೇಳಿ ದುಃಖಿತನಾಗಿದ್ದೇನೆ. ರಾಜ್ಯದಲ್ಲಿ ರೈತ, ಕಾರ್ಮಿಕ ಹೋರಾಟ ಸೇರಿದಂತೆ ಅನೇಕ ಜನಪರ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನನ್ನೊಂದಿಗೂ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಅವರ ಅಗಲಿಕೆ ನನಗೆ ಬಹಳ ನೋವುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.