
ರೈತ ಸಾಲ ಮನ್ನಾ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಹಕಾರ ಸಚಿವ ಕೆ ಎನ್ ರಾಜಣ್ಣ ಸ್ಪಷ್ಟನೆ
ಕಳೆದ ಬಾರಿಯ ತೀವ್ರ ಬರದ ಹಿನ್ನೆಲೆಯಲ್ಲಿ ರೈತ ಸಾಲ ಮನ್ನಾ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸಹಕಾರ ಸಚಿವರು ನಿರಾಶೆ ಮಾಡಿದ್ದಾರೆ.
ವಿಧಾನಪರಿಷತ್ನಲ್ಲಿ ಪ್ರತಿಪಕ್ಷ ಶಾಸಕರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಕೆ ಎನ್ ರಾಜಣ್ಣ, ರೈತ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯ ಹಿರಿಯ ನಾಯಕ, ಸಿ ಟಿ ರವಿ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಬರ, ನೆರೆ ಮತ್ತಿತರ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದ ಇತಿಹಾಸ ಇದೆ. ಹಲವು ಬಾರಿ ಕಾಂಗ್ರೆಸ್ ರೈತರ ಕೈಹಿಡಿದಿದೆ. ಆದರೆ, ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ರೈತರ ನೆರವಿಗೆ ಬಂದಿಲ್ಲ; ಒಂದೇ ಒಂದು ನಯಾಪೈಸೆ ಸಾಲ ಮನ್ನಾ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನೂ ತಮ್ಮದೇ ಕೇಂದ್ರ ಸರ್ಕಾರದಿಂದ ಮನ್ನಾ ಮಾಡಿಸಲು ಆಗದ ಬಿಜೆಪಿ ಸದಸ್ಯರು ಈಗ ಸಾಲ ಮನ್ನಾ ಹೆಸರಿನಲ್ಲಿ ರೈತರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ಧಾರೆ ಎಂದು ಟೀಕಿಸಿದ ಸಚಿವ ರಾಜಣ್ಣ, ರಾಜ್ಯದಲ್ಲಿ ಭೂಮಿ ಹೊಂದಿರುವ 63 ಲಕ್ಷ ರೈತರಲ್ಲಿ 35 ಲಕ್ಷ ರೈತರು ಸಹಕಾರ ಸಂಘಗಳ ಮೂಲಕ ಸಾಲ ಪಡೆದಿದ್ದಾರೆ. ಸಹಕಾರ ಸಂಘಗಳಲ್ಲಿ ಸದಸ್ಯರಾದವರಿಗೆ ಮಾತ್ರ ಸಾಲ ಸಿಗುತ್ತದೆ. ಇನ್ನುಳಿದ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದಿರುತ್ತಾರೆ. ಹಾಗಾಗಿ ಪ್ರತಿಪಕ್ಷ ಶಾಸಕರು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಿಸಲು ತಮ್ಮ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಹೇಳಿದರು.
ಇದೇ ವೇಳೆ, ಸಹಕಾರ ಸಂಘಗಳಲ್ಲಿ ಕಿಟಿಕಿ ವ್ಯವಹಾರ ನಡೆಯುತ್ತಿದೆ. ಅಲ್ಲಿ ಎಲ್ಲ ರೈತರಿಗೂ ಸಾಲ ಸೌಲಭ್ಯ ದೊರೆಯುತ್ತಿಲ್ಲ ಎಂಬ ಸಿ ಟಿ ರವಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಾಸಕರು ಆರೋಪಿಸಿದಂತೆ ಕಿಟಕಿ ವ್ಯವಹಾರವೇನೂ ನಡೆಯುತ್ತಿಲ್ಲ. ಸಂಘದ ಸದಸ್ಯರಾದವರಿಗೆ ಎಲ್ಲರಿಗೂ ಬೆಳೆ ಸಾಲ ಸಿಗುತ್ತದೆ. ಅಂತಹ ವ್ಯವಹಾರ ಅವರಿಗಷ್ಟೇ ಗೊತ್ತು ಎಂದರು.