ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಜೈಕಾರ ಹಾಕಿದ ದರ್ಶನ್‌ ಅಭಿಮಾನಿಗಳಿಗೆ ಲಾಠಿ ಏಟು
x

ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಜೈಕಾರ ಹಾಕಿದ ದರ್ಶನ್‌ ಅಭಿಮಾನಿಗಳಿಗೆ ಲಾಠಿ ಏಟು


ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌, ಆತನ ಗೆಳತಿ ಪವಿತ್ರಾ ಗೌಡ ಮತ್ತು ಇತರೆ 11 ಮಂದಿಯನ್ನು ಕೊಲೆ ನಡೆದ ಮತ್ತು ಮೃತ ದೇಹ ಬಿಸಾಕಿದ ಜಾಗಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಡುವೆ, ಪೊಲೀಸ್‌ ಠಾಣೆಯ ಎದುರು ಗುಂಪುಗೂಡಿ ನಟ ದರ್ಶನ್‌ ಪರ ಘೋಷಣೆ ಕೂಗುತ್ತಿದ್ದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಚದುರಿಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಚಿತ್ರದುರ್ಗದ ದರ್ಶನ್‌ ಅಭಿಮಾನಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಶೆಡ್‌ನಲ್ಲಿ ಕೂಡಿಹಾಕಿ ಪೈಶಾಚಿಕ ರೀತಿಯಲ್ಲಿ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿ ಮೋರಿಗೆ ಎಸೆದ ಹೇಯ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಆತನ ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಮಂದಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮಂಗಳವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಿಚಾರಣೆಗಾಗಿ ಆರು ದಿನಗಳ ಅವಧಿಗೆ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿತ್ತು. ಬುಧವಾರ ಬೆಳಿಗ್ಗೆ ಅವರನ್ನು ಸ್ಥಳ ಮಹಜರಿಗಾಗಿ ಕರೆದೊಯ್ಯುವ ತಯಾರಿ ಮಾಡಿಕೊಂಡಿದ್ದು, ಆ ವೇಳೆ ವಿಷಯ ತಿಳಿದ ದರ್ಶನ್‌ ಅಭಿಮಾನಿಗಳು ಅನ್ನಪೂಣೇಶ್ವರಿ ನಗರ ಪೊಲೀಸ್‌ ಠಾಣೆಯ ಎದುರು ಜಮಾಯಿಸಿ ನಟನ ಪರ ಜೈಕಾರ ಹಾಕುತ್ತಾ ಪೊಲೀಸರ ಮೇಲೆ ಒತ್ತಡ ತರುವ ಯತ್ನ ಮಾಡಿದರು. ಸ್ಥಳದಲ್ಲಿದ್ದ ಬೆಂಗಳೂರು ಪೊಲೀಸ್‌ ಕಮೀಷನರ್‌ ಬಿ ದಯಾನಂದ್‌ ಅವರು ಅಭಿಮಾನಿಗಳ ಗುಂಪು ಗಮನಿಸಿ, ಕೂಡಲೇ ಅವರನ್ನು ಚದುರಿಸಲು ಸೂಚಿಸಿದರು.

ಆ ಹಿನ್ನೆಲೆಯಲ್ಲಿ ಪೊಲೀಸರು ಶಾಂತಿಯುತವಾಗಿ ಅಭಿಮಾನಿಗಳ ಗುಂಪು ಚದುರಿಸಲು ಯತ್ನಿಸಿದರೂ, ಅಭಿಮಾನಿಗಳು ಘೋಷಣೆ ಕೂಗುತ್ತಾ ಪೊಲೀಸರ ಮೇಲೆ ಒತ್ತಡ ಹೇರುವ ತಂತ್ರ ಮಾಡಿದ್ದರಿಂದ, ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ರುಚಿ ತೋರಿಸಿದರು.

Read More
Next Story