
ಲೇಖಕಿ, ನಟಿ ಆಶಾ ರಘು ಇನ್ನಿಲ್ಲ
ಖ್ಯಾತ ಕಾದಂಬರಿಗಾರ್ತಿ, ಪ್ರಕಾಶಕಿ ಆಶಾ ರಘು ವಿಧಿವಶ; ಪತಿ ಅಗಲಿಕೆ ನೋವಿನಿಂದ ಆತ್ಮಹತ್ಯೆ?
ಕಳೆದ ಎರಡು ವರ್ಷಗಳ ಹಿಂದೆ ತಮ್ಮ ಪತಿ, ಖ್ಯಾತ ಆಹಾರ ತಜ್ಞ ಕೆ. ಸಿ. ರಘು ಅವರ ನಿಧನದ ನಂತರ ಆಶಾ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಕನ್ನಡದ ಖ್ಯಾತ ಕಾದಂಬರಿಗಾರ್ತಿ ಹಾಗೂ ಉಪಾಸನ ಪ್ರಕಾಶನದ ಮುಖ್ಯಸ್ಥೆ ಆಶಾ ರಘು (47) ಅವರು ಬೆಂಗಳೂರಿನ ಮಲ್ಲೇಶ್ವರದ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಗುರುತು ಮೂಡಿಸಿದ್ದ ಆಶಾ ರಘು ಅವರು ಕೇವಲ ಸಾಹಿತಿಯಾಗಿ ಮಾತ್ರವಲ್ಲದೆ, ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಯಾಗಿ, ಸಂಭಾಷಣೆಕಾರ್ತಿಯಾಗಿ ಹಾಗೂ ಸಹಾಯಕ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದರು.
ಇವರು 'ಆವರ್ತ', 'ಗತ', 'ವಕ್ಷಸ್ಥಳ', 'ಚಿತ್ತರಂಗ' ಸೇರಿದಂತೆ ಹಲವು ಜನಪ್ರಿಯ ಕಾದಂಬರಿಗಳನ್ನು ರಚಿಸಿದ್ದರು. ಅವರ 'ಗತ' ಕಾದಂಬರಿಯನ್ನು ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಅವರು ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ತಮ್ಮ ಪತಿ, ಖ್ಯಾತ ಆಹಾರ ತಜ್ಞ ಕೆ. ಸಿ. ರಘು ಅವರ ನಿಧನದ ನಂತರ ಆಶಾ ಅವರು ತೀವ್ರವಾದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗಷ್ಟೇ ಅವರು ತಮ್ಮ ಪತಿ ಕನಸಿನಲ್ಲಿ ಬಂದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದರಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಆಶಾ ರಘು ಅವರ ಅಕಾಲಿಕ ನಿಧನಕ್ಕೆ ಕನ್ನಡ ಸಾಹಿತ್ಯ ವಲಯ ಮತ್ತು ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆಶಾ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಆಶಾ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಮಹತ್ವದ ಲೇಖಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಇವರ ಬರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ತ್ರಿವೇಣಿ ದತ್ತಿನಿಧಿ ಪ್ರಶಸ್ತಿಗಳು ಬಂದಿವೆ. ಇನ್ನು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 2023 ರಲ್ಲಿ 'ಸಾಹಿತ್ಯಾಮೃತ ಸರಸ್ವತಿ' ಎಂಬ ಬಿರುದು ಕೂಡ ಸಿಕ್ಕಿದೆ.

