ʼಗೃಹಲಕ್ಷ್ಮಿʼ ಸುಳ್ಳು ಜಾಹೀರಾತು: ಪ್ರಧಾನಿ ಕ್ಷಮೆಯಾಚನೆಗೆ ಸಿಎಂ ಒತ್ತಾಯ
x
ಸಿದ್ದರಾಮಯ್ಯ

ʼಗೃಹಲಕ್ಷ್ಮಿʼ ಸುಳ್ಳು ಜಾಹೀರಾತು: ಪ್ರಧಾನಿ ಕ್ಷಮೆಯಾಚನೆಗೆ ಸಿಎಂ ಒತ್ತಾಯ


‘‘ಸುಳ್ಳೇ ಬಿಜೆಪಿಯ ಮನೆ ದೇವರು’’ ಎಂದು ನಾವು ಹೇಳುತ್ತಿರುವುದು ಸುಳ್ಳಲ್ಲ. ಮಹಾರಾಷ್ಟ್ರದ ಬಿಜೆಪಿ ನಮ್ಮ ಯಶಸ್ವಿ ಗ್ಯಾರಂಟಿ ಯೋಜನೆಯಾಗಿರುವ ʼಗೃಹಲಕ್ಷ್ಮಿʼ ಬಗ್ಗೆ ಒಂದು ಅಪ್ಪಟ ಸುಳ್ಳನ್ನು ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಿ ಸಿಕ್ಕಿ ಹಾಕಿಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳು ಜಾಹೀರಾತು ನಮಗೆ ಆಶ್ಚರ್ಯ ಉಂಟುಮಾಡಿಲ್ಲ. ಮನೆ ಒಡೆಯನ ಬುದ್ದಿ ಮನೆಯವರಿಗೆಲ್ಲ ಬಂದಿದೆ. ಹೋದಲ್ಲಿ ಬಂದಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಉದುರಿಸುವ ನಿಮ್ಮಿಂದಲೇ ಪ್ರೇರಣೆ ಪಡೆದು ಮಹಾರಾಷ್ಟ್ರ ಬಿಜೆಪಿ ಇಷ್ಟೊಂದು ನಿರ್ಲಜ್ಜತನದಿಂದ ಈ ಹಸಿಸುಳ್ಳು ಪ್ರಕಟಿಸಿದೆ ಎನ್ನುವುದು ನಿಸ್ಸಂಶಯ ಎಂದು ಪ್ರಧಾನಿ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ.


ಗೃಹಲಕ್ಷ್ಮಿ ಯೋಜನೆಯಡಿ 2023ರ ಆಗಸ್ಟ್ ತಿಂಗಳಿನಿಂದ ಈವರೆಗೆ 1.22 ಕೋಟಿ ಮನೆಯೊಡತಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ಸಂದಾಯವಾಗುತ್ತಿದೆ. ಈ ರೀತಿ ಒಟ್ಟು ₹30,285 ಕೋಟಿ ವರ್ಗಾವಣೆ ಮಾಡಲಾಗಿದೆ. ಅನುಮಾನ ಇದ್ದವರು ಈ 1.22 ಕೋಟಿ ಮನೆ ಒಡತಿಯರನ್ನೇ ಕೇಳಿ ಪರಾಂಬರಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೇ, ಇದು ನಿಮ್ಮ ಸುಳ್ಳಿನಿಂದಲೇ ಪ್ರೇರಣೆ ಪಡೆದು ಹೇಳಿರುವ ಸುಳ್ಳಾಗಿದೆ. ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಹಾರಾಷ್ಟ್ರ ಬಿಜೆಪಿ ಹೇಳಿರುವ ಸುಳ್ಳಿಗಾಗಿ ದೇಶದ ಜನತೆಯ ಕ್ಷಮೆ ಯಾಚಿಸಿ, ಸತ್ಯಸಂಗತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ತಾನು ಪ್ರಕಟಿಸಿರುವ ಸುಳ್ಳಿನ ಜಾಹೀರಾತಿನಷ್ಟೇ ಗಾತ್ರದ ಜಾಹೀರಾತಿನಲ್ಲಿ ಸತ್ಯ ಸಂಗತಿಯನ್ನು ತಿಳಿಸಿ ಅಲ್ಲಿನ ಎಲ್ಲ ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ನೋಡಿಕೊಳ್ಳಬೇಕು. ಇದಕ್ಕೆ ತಪ್ಪಿದ್ದಲ್ಲಿ ನಮ್ಮ ಸರ್ಕಾರ ಮುಂದಿನ ಕ್ರಮದ ಬಗ್ಗೆ ಯೋಚನೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Read More
Next Story