Valmiki Corporation Scam| ಇಡಿ ನೊಟೀಸ್ ಸುಳ್ಳೆಂದ ಸಿದ್ದರಾಮಯ್ಯ ಸಚಿವಾಲಯ
ವಾಲ್ಮೀಕಿ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೊಟೀಸ್ ನೀಡಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಲತಾಣಗಳಲ್ಲಿ ಮತ್ತು ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿಯೊಂದನ್ನು ಕಿಡಿಗೇಡಿಗಳು ಗುರುವಾರ ಬೆಳಿಗ್ಗೆಯಿಂದ ಹರಿಯಬಿಟ್ಟಿದ್ದರು. ಈ ಸಂಬಂಧ ಮುಖ್ಯಮಂತ್ರಿ ಆಪ್ತರಿಗೆ, ಮಾಧ್ಯಮ ವಿಭಾಗಕ್ಕೆ ಸ್ಪಷ್ಟನೆ ಕೋರಿ ಹಲವರು ಪ್ರಯತ್ನಿಸಿದ್ದರು. ಬಳಿಕ ಸಿಎಂ ಮಾಧ್ಯಮ ವಿಭಾಗದವರು "ಸ್ನೇಹಿತರೇ, ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಗೆ ED ನೋಟಿಸ್ ಕೊಟ್ಟಿದೆ ಎನ್ನುವ ಬ್ರೇಕಿಂಗ್ ಹರಿದಾಡುತ್ತಿದೆ, ಅದೊಂದು ಸುಳ್ಳು ಸುದ್ದಿ," ಎಂದು ಸ್ಪಷ್ಟನೆ ನೀಡಿದರು.
ಪ್ರಕರಣದ ಹಿನ್ನೆಲೆ
ಕಳೆದ ಮೇ ತಿಂಗಳಿನಲ್ಲಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಭಾರೀ ಮೊತ್ತದ ಹಣವನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ತಮ್ಮ ಪಾತ್ರವೇನೂ ಇಲ್ಲ. ಆದರೆ, ನಿಗಮದ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳೇ ಅದಕ್ಕೆ ಹೊಣೆ ಎಂದು ಡೆತ್ನೋಟ್ ಬರೆದಿಟ್ಟು ನಿಗಮದ ಅಧಿಕಾರಿ ಚಂದ್ರಶೇಖರನ್ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆ ಆತ್ಮಹತ್ಯೆಯ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.
ಆ ಬಳಿಕ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿಬಂದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿ ತನಿಖೆಗೆ ಎಸ್ಐಟಿ ರಚಿಸಿತ್ತು. ಅದರ ಬೆನ್ನಲ್ಲೇ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಬರೆದ ಪತ್ರದ ಹಿನ್ನೆಲೆಯಲ್ಲಿ ಸಿಬಿಐ ಕೂಡ ತನಿಖೆ ಕೈಗೆತ್ತಿಕೊಂಡಿತ್ತು. ಸಿಬಿಐಗೆ ಪ್ರಕರಣ ಹಸ್ತಾಂತರವಾದ ಬೆನ್ನಲ್ಲೇ ಸಚಿವ ಬಿ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೊತೆಗೆ ಜಾರಿ ನಿರ್ದೇಶನಾಲಯ(ಇಡಿ) ಕೂಡ ಮತ್ತೊಂದು ಕಡೆಯಿಂದ ತನಿಖೆ ನಡೆಸುತ್ತಿದೆ.