ನಕಲಿ ನಂದಿನಿ ತುಪ್ಪ ದಂಧೆ: ಪ್ರಮುಖ ಸೂತ್ರಧಾರಿ ದಂಪತಿ ಬಂಧನ
x

ನಕಲಿ ನಂದಿನಿ ತುಪ್ಪ ದಂಧೆ: ಪ್ರಮುಖ ಸೂತ್ರಧಾರಿ ದಂಪತಿ ಬಂಧನ

ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳು ನಡೆಸಿದ ದಾಳಿಯ ವೇಳೆ, ನಕಲಿ ನಂದಿನಿ ತುಪ್ಪ ತಯಾರಿಸಲು ಬಳಸುತ್ತಿದ್ದ ಅತ್ಯಾಧುನಿಕ ಕೈಗಾರಿಕಾ ಯಂತ್ರೋಪಕರಣಗಳು ಪತ್ತೆಯಾಗಿವೆ.


Click the Play button to hear this message in audio format

ಕೆಎಂಎಫ್‌ಗೆ ಸೇರಿದ ‘ನಂದಿನಿ’ ಬ್ರಾಂಡ್ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲದ ಪ್ರಮುಖ ಆರೋಪಿಗಳಾದ ದಂಪತಿಯನ್ನು ಸಿಸಿಬಿ ಪೊಲೀಸರು ಬುಧವಾರ (ನ.26) ಬಂಧಿಸಿದ್ದಾರೆ. ಬಂಧಿತರನ್ನು ಶಿವಕುಮಾರ್ ಮತ್ತು ರಮ್ಯಾ ಎಂದು ಗುರುತಿಸಲಾಗಿದೆ. ಇವರು ನಕಲಿ ತುಪ್ಪ ತಯಾರಿಕಾ ಘಟಕವನ್ನು ನಡೆಸುತ್ತಿದ್ದರು ಎಂಬುದು ತನಿಖೆಯಿಂದ ದೃಢಪಟ್ಟಿದೆ.

ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳು ನಡೆಸಿದ ದಾಳಿಯ ವೇಳೆ, ನಕಲಿ ನಂದಿನಿ ತುಪ್ಪ ತಯಾರಿಸಲು ಬಳಸುತ್ತಿದ್ದ ಅತ್ಯಾಧುನಿಕ ಕೈಗಾರಿಕಾ ಯಂತ್ರೋಪಕರಣಗಳು ಪತ್ತೆಯಾಗಿವೆ. ಆರೋಪಿಗಳು ಬೃಹತ್ ಪ್ರಮಾಣದಲ್ಲಿ ನಕಲಿ ತುಪ್ಪವನ್ನು ತಯಾರಿಸಿ, ಅಸಲಿ ನಂದಿನಿ ತುಪ್ಪದಂತೆಯೇ ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದರು. ಈ ಕೃತ್ಯಕ್ಕೆ ಬಳಸಲಾದ ಯಂತ್ರೋಪಕರಣಗಳನ್ನು ಪೊಲೀಸರು ಈಗಾಗಲೇ ಜಪ್ತಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಹೇಂದ್ರ, ದೀಪಕ್, ಮುನಿರಾಜ್ ಮತ್ತು ಅಭಿಯರಸು ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.

ಅನುಮಾನಾಸ್ಪದ ಸರಬರಾಜು ಮತ್ತು ಕಾರ್ಯಾಚರಣೆ

ನಂದಿನಿ ತುಪ್ಪಕ್ಕೆ ಮಾರುಕಟ್ಟೆಯಲ್ಲಿರುವ ಅತೀವ ಬೇಡಿಕೆಯನ್ನು ಬಂಡವಾಳವಾಗಿಸಿಕೊಂಡ ಆರೋಪಿಗಳು, ನಕಲಿ ತುಪ್ಪವನ್ನು ಅಸಲಿ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದರು. ಸರಬರಾಜು ಮಾದರಿಯಲ್ಲಿ ಕಂಡುಬಂದ ವ್ಯತ್ಯಾಸ ಮತ್ತು ಅನುಮಾನಾಸ್ಪದ ಚಟುವಟಿಕೆಗಳ ಹಿನ್ನೆಲೆಯಲ್ಲಿ ಆಂತರಿಕ ತಪಾಸಣೆ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ.

ನವೆಂಬರ್ 14 ರಂದು ಸಿಸಿಬಿ ವಿಶೇಷ ತನಿಖಾ ದಳ ಮತ್ತು ಕೆಎಂಎಫ್ ಜಾಗೃತ ದಳದ ಜಂಟಿ ಕಾರ್ಯಾಚರಣೆಯಲ್ಲಿ, ಖಚಿತ ಮಾಹಿತಿಯ ಮೇರೆಗೆ ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣ ಎಂಟರ್‌ಪ್ರೈಸಸ್‌ಗೆ ಸೇರಿದ ಗೋದಾಮುಗಳು ಮತ್ತು ಮಳಿಗೆಗಳ ಮೇಲೆ ದಾಳಿ ನಡೆಸಲಾಯಿತು.

1.26 ಕೋಟಿ ರೂ. ಮೌಲ್ಯದ ಸ್ವತ್ತು ವಶ

ಕಾರ್ಯಾಚರಣೆಯ ಭಾಗವಾಗಿ ತಮಿಳುನಾಡಿನಿಂದ ಕಲಬೆರಕೆ ತುಪ್ಪವನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ದಾಳಿಯ ವೇಳೆ 1.26 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 56.95 ಲಕ್ಷ ರೂ. ಮೌಲ್ಯದ 8,136 ಲೀಟರ್ ಕಲಬೆರಕೆ ತುಪ್ಪ, ತಯಾರಿಕೆಗೆ ಬಳಸುತ್ತಿದ್ದ ಯಂತ್ರಗಳು, ಮಿಶ್ರಣ ಮಾಡಲು ಸಂಗ್ರಹಿಸಿದ್ದ ಕೊಬ್ಬರಿ ಮತ್ತು ತಾಳೆ ಎಣ್ಣೆ, ಐದು ಮೊಬೈಲ್ ಫೋನ್‌ಗಳು, 1.19 ಲಕ್ಷ ರೂ. ನಗದು ಮತ್ತು 60 ಲಕ್ಷ ರೂ. ಮೌಲ್ಯದ ನಾಲ್ಕು ಬೊಲೆರೊ ಗೂಡ್ಸ್ ವಾಹನಗಳು ಸೇರಿವೆ.

ಈ ನಕಲಿ ತುಪ್ಪ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ವಶಪಡಿಸಿಕೊಂಡಿರುವ ಕಡಿಮೆ ಗುಣಮಟ್ಟದ ತಾಳೆ ಮತ್ತು ಕೊಬ್ಬರಿ ಎಣ್ಣೆಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Read More
Next Story