
ಲೋಕಾಯುಕ್ತ ದಾಳಿ
ನಕಲಿ ಬೋನಾಫೈಡ್ ಹಗರಣ; ಕೋಲಾರದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದ ಬೃಹತ್ ಜಾಲ
ಈ ಬೃಹತ್ ಹಗರಣದಲ್ಲಿ, ಸುಮಾರು 1,387 ನಕಲಿ ದಾಖಲೆಗಳನ್ನು ಬಳಸಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು 2 ಕೋಟಿ ರೂಪಾಯಿ ನಷ್ಟ ಉಂಟುಮಾಡಲಾಗಿದೆ ಎಂದು ತಿಳಿದುಬಂದಿದೆ.
ರೈತರ ಹೆಸರಿನಲ್ಲಿ ನಕಲಿ ಬೋನಾಫೈಡ್ ಪ್ರಮಾಣಪತ್ರಗಳನ್ನು ಸೃಷ್ಟಿಸಿ, ಟ್ರ್ಯಾಕ್ಟರ್ ನೋಂದಣಿಯ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಜಾಲವನ್ನು ಕೋಲಾರ ಜಿಲ್ಲಾ ಲೋಕಾಯುಕ್ತ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ, ಮಂಗಳವಾರ ಬೆಳಿಗ್ಗೆ ಕೋಲಾರ ಮತ್ತು ಚಿಂತಾಮಣಿಯ ಆರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬೃಹತ್ ಹಗರಣದಲ್ಲಿ, ಸುಮಾರು 1,387 ನಕಲಿ ದಾಖಲೆಗಳನ್ನು ಬಳಸಿ ಸರ್ಕಾರದ ಬೊಕ್ಕಸಕ್ಕೆ ಅಂದಾಜು 2 ಕೋಟಿ ರೂಪಾಯಿ ನಷ್ಟ ಉಂಟುಮಾಡಲಾಗಿದೆ ಎಂದು ತಿಳಿದುಬಂದಿದೆ. ಲೋಕಾಯುಕ್ತ ಎಸ್.ಪಿ. ಆ್ಯಂಟನಿ ಜಾನ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ನರಸಾಪುರ ನಾಡ ಕಚೇರಿಯ ಉಪ ತಹಶೀಲ್ದಾರ್ ನಾರಾಯಣಸ್ವಾಮಿ, ಹೊರಗುತ್ತಿಗೆ ನೌಕರರಾದ ಅಂಬುಜಾ, ಮಧ್ಯವರ್ತಿ ಮಂಜುನಾಥ್, ಚಿಂತಾಮಣಿಯ ಟ್ರ್ಯಾಕ್ಟರ್ ಷೋರೂಂನ ಸೇಲ್ಸ್ ಮ್ಯಾನ್ ಗೋಕುಲ್ ರೆಡ್ಡಿ, ವ್ಯವಸ್ಥಾಪಕ ಆಂಜನೇಯರೆಡ್ಡಿ ಹಾಗೂ ಆರ್‌ಟಿಒ ಮಧ್ಯವರ್ತಿ ಅಶ್ವತ್ಥನಾರಾಯಣ ಅವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಸಂಬಂಧವಿಲ್ಲದ ರೈತರ ಕೃಷಿ ಜಮೀನುಗಳ ದಾಖಲೆಗಳನ್ನು ಬಳಸಿ, ನಕಲಿ ಬೋನಾಫೈಡ್ ಪ್ರಮಾಣಪತ್ರಗಳನ್ನು ಸೃಷ್ಟಿಸಿ, ಈ ಮೂಲಕ ಟ್ರ್ಯಾಕ್ಟರ್‌ಗಳನ್ನು ನೋಂದಣಿ ಮಾಡಿಸಿ, ತೆರಿಗೆ ವಂಚನೆ ಮಾಡಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಪ್ರಸ್ತುತ, ದಾಳಿ ನಡೆದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಹಗರಣದ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ.

