
ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಗೆ ಸನ್ಮಾನ; ವಿಷಾದ ವ್ಯಕ್ತಪಡಿಸಿದ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ
ರಾಮನಗರ ಜಿಲ್ಲೆ ಸಾತನೂರು ಬಳಿ 2023 ರಲ್ಲಿ ನಡೆದ ಜಾನುವಾರು ವ್ಯಾಪಾರಿ ಇದ್ರೀಷ್ ಪಾಷಾ ಕೊಲೆ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಪ್ರಮುಖ ಆರೋಪಿಯಾಗಿದ್ದಾನೆ.
ಕೊಲೆ ಆರೋಪಿಯಾದ ಹಿಂದೂ ಕಾರ್ಯಕರ್ತ, ಸ್ವಯಂಘೋಷಿತ ಗೋರಕ್ಷಕ ಪುನೀತ್ ಕೆರೆಹಳ್ಳಿಗೆ ಖಾಸಗಿ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸನ್ಮಾನ ಮಾಡಿರುವ ಕ್ರಮ ವಿವಾದಕ್ಕೆ ಕಾರಣವಾಗಿದೆ.
ಪುನೀತ್ ಕೆರೆಹಳ್ಳಿ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ರಾಮನಗರ ಜಿಲ್ಲೆ ಸಾತನೂರು ಬಳಿ 2023 ರಲ್ಲಿ ನಡೆದ ಜಾನುವಾರು ವ್ಯಾಪಾರಿ ಇದ್ರೀಷ್ ಪಾಷಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಇಂತಹ ಕೊಲೆ ಆರೋಪ ಹೊತ್ತಿರುವ ವ್ಯಕ್ತಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸನ್ಮಾನ ಮಾಡಿರುವ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.
ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಸೇರಿ ಹಲವರಿಗೆ ನವೆಂಬರ್ 27ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸನ್ಮಾನ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಪುನೀತ್ ಕೆರೆಹಳ್ಳಿಗೆ ಸಂತೋಷ್ ಹೆಗ್ಡೆ ಅವರು ಶಾಲು ಪೇಟ ಹೊದಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದರು. ಕ್ರಿಮಿನಲ್ ಹಿನ್ನಲೆ ಹೊಂದಿರುವ ವ್ಯಕ್ತಿಗೆ ಸನ್ಮಾನ ಮಾಡಿದ್ದೀರಿ. ಆತನ ಹಿನ್ನೆಲೆ ಏನು ನಿಮಗೆ ಗೊತ್ತಿಲ್ಲವೇ, ನಿಮ್ಮ ನಿಲುವೇನು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ
ಸಂತೋಷ್ ಹೆಗ್ಡೆ ವಿಷಾದ
ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಗೆ ಸನ್ಮಾನ ಮಾಡಿದ್ದ ಸಂಗತಿ ಟೀಕೆಗೆ ಗುರಿಯಾಗುತ್ತಿದ್ದಂತೆ ಸಂತೋಷ್ ಹೆಗ್ಡೆಯವರು ಅಚಾತುರ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಪುನೀತ್ ಕೆರೆಹಳ್ಳಿ 2023ರಲ್ಲಿ ರಾಮನಗರದಲ್ಲಿ ನಡೆದ ಜಾನುವಾರು ವ್ಯಾಪಾರಿಯ ಕೊಲೆ ಪ್ರಕರಣದಲ್ಲಿ ಆರೋಪಿ ಎಂಬುದು ತನಗೆ ತಿಳಿದಿರಲಿಲ್ಲ. ಸನ್ಮಾನ ಮಾಡಿದ್ದಕ್ಕಾಗಿ ಬೇಸರವಾಗಿದೆ ಎಂದು ಹೇಳಿದ್ದಾರೆ. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.
2023ರಲ್ಲಿ ಆಗಸ್ಟ್ ತಿಂಗಳಲ್ಲಿ ಪುನೀತ್ ಕೆರೆಹಳ್ಳಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ಗೋ ಸಂರಕ್ಷಣೆ ಹೆಸರಿನಲ್ಲಿ ದೌರ್ಜನ್ಯ, ಬೆದರಿಕೆ, ಹಣದ ಬೇಡಿಕೆ ಇನ್ನಿತರ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

