
ಸಿಎಂ ಆಕ್ಷೇಪದ ಬಳಿಕ ಸ್ವಯಂ ಅನುವಾದ ದೋಷದ ಬಗ್ಗೆ ಕ್ಷಮೆಯಾಚಿಸಿದ ಫೇಸ್‌ಬುಕ್
ಕನ್ನಡ ವಿಷಯದ ತಪ್ಪು ಸ್ವಯಂಚಾಲಿತ ಅನುವಾದವು ಸತ್ಯಾಂಶಗಳನ್ನು ವಿರೂಪಗೊಳಿಸುತ್ತಿದೆ ಮತ್ತು ಬಳಕೆದಾರರನ್ನು ದಾರಿತಪ್ಪಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದರು.
ಫೇಸ್‌ಬುಕ್ ಸೇರಿದಂತೆ ಹಲವು ವೇದಿಕೆಗಳನ್ನು ಹೊಂದಿರುವ ಸಾಮಾಜಿಕ ಜಾಲತಾಣ ದೈತ್ಯ ಮೆಟಾ ಗುರುವಾರ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿನ ಕನ್ನಡ ಅನುವಾದದಲ್ಲಿನ ತಪ್ಪಿಗೆ ಕ್ಷಮೆಯಾಚಿಸಿದ್ದು, ಈ ಸಮಸ್ಯೆಯನ್ನು ಈಗಾಗಲೇ ಸರಿಪಡಿಸಲಾಗಿದೆ ಎಂದು ತಿಳಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಮೆಟಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಸ್ವಯಂ ಅನುವಾದದಲ್ಲಿ ಆಗುತ್ತಿದ್ದ ದೋಷಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಕನ್ನಡ ವಿಷಯದ ಸ್ವಯಂ ಅನುವಾದವು ತಪ್ಪಾಗಿರುತ್ತವೆ ಹಾಗೂ ಸತ್ಯಾಂಶಗಳನ್ನು ವಿರೂಪಗೊಳಿಸುತ್ತಿದೆ ಮತ್ತು ಬಳಕೆದಾರರನ್ನು ದಾರಿತಪ್ಪಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. "ಇದು ವಿಶೇಷವಾಗಿ ಅಧಿಕೃತ ಸಂವಹನದ ವಿಷಯದಲ್ಲಿ ಅಪಾಯಕಾರಿ. ನನ್ನ ಮಾಧ್ಯಮ ಸಲಹೆಗಾರರು ಮೆಟಾಕ್ಕೆ ತಕ್ಷಣವೇ ಈ ತಪ್ಪನ್ನು ಸರಿಪಡಿಸುವಂತೆ ಔಪಚಾರಿಕವಾಗಿ ಪತ್ರ ಬರೆದಿದ್ದಾರೆ," ಎಂದು ಸಿದ್ದರಾಮಯ್ಯ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
"ಸಾಮಾಜಿಕ ಜಾಲತಾಣ ವೇದಿಕೆಗಳು ಜವಾಬ್ದಾರಿಯಿಂದ ವರ್ತಿಸಬೇಕು. ಈ ರೀತಿಯ ನಿರ್ಲಕ್ಷ್ಯವು ಜನರ ತಿಳಿ ವಳಿಕೆ ಮತ್ತು ವಿಶ್ವಾಸಕ್ಕೆ ಹಾನಿಯುಂಟುಮಾಡಬಹುದು ಎಂದು ನಾನು ಎಚ್ಚರಿಕೆ ನೀಡುತ್ತೇನೆ," ಎಂದು ಅವರು ಬರೆದಿದ್ದರು.
ಮೆಟಾ ಪ್ರತಿಕ್ರಿಯೆ
ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಜುಲೈ 16ರಂದು ಮೆಟಾಕ್ಕೆ ಇಮೇಲ್ ಕಳುಹಿಸಿ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಕನ್ನಡ ವಿಷಯದ ಸ್ವಯಂ ಅನುವಾದದ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, "ಕನ್ನಡ ಅನುವಾದದ ತಪ್ಪಿಗೆ ಕಾರಣವಾದ ಸಮಸ್ಯೆ ನಾವು ಸರಿಪಡಿಸಿದ್ದೇವೆ. ಇದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ," ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು ಮೆಟಾಕ್ಕೆ ಕನ್ನಡ ವಿಷಯದ ಸ್ವಯಂಚಾಲಿತ ಅನುವಾದ ಫೀಚರ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕೋರಿತ್ತು, ಜೊತೆಗೆ ಅನುವಾದದ ನಿಖರತೆ ವಿಶ್ವಾಸಾರ್ಹವಾಗಿ ಸುಧಾರಿಸುವವರೆಗೆ ಈ ಕ್ರಮವನ್ನು ಮುಂದುವರಿಸಲು ಸೂಚಿಸಿತ್ತು.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ, ಸಾರ್ವಜನಿಕ ಜೀವನ ಚರಿತ್ರೆ ಮಾಹಿತಿ ಮತ್ತು ನಿರ್ದಿಷ್ಟ ವಿಷಯಗಳಂತಹ ವಿವಿಧ ಸಂದರ್ಭಗಳಲ್ಲಿ ಮೆಷಿನ್ ಟ್ರಾನ್ಸ್ಲೇಷನ್ ಅನ್ನು ಬಳಕೆದಾರರಿಗೆ ತೋರಿಸಲಾಗುತ್ತದೆ. ಕನ್ನಡ ಸ್ವಯಂಚಾಲಿತ ಅನುವಾದದ ವಿಷಯದಲ್ಲಿ, ಮೆಟಾದ AI ಯಂತ್ರ ಟ್ರಾನ್ಸ್ಲೇಷನ್ ಮಾಡೆಲ್ ತಪ್ಪು ಅನುವಾದ ಮಾಡಿತ್ತು, ಇದರಿಂದಾಗಿ ಫೇಸ್‌ಬುಕ್‌ನಲ್ಲಿ ಕನ್ನಡ ಅನುವಾದಗಳು ತಪ್ಪಾಗಿದ್ದವು. ಆದರೆ, ಈ ಸಮಸ್ಯೆಯನ್ನು ಈಗ ಸರಿಪಡಿಸಲಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.