ಹಫ್ತಾ ವಸೂಲಿ ಆರೋಪ | ಅಬಕಾರಿ ಸಚಿವರನ್ನು ಸಂಪುಟದಿಂದ ಕೈಬಿಡಲು ಆರ್‌. ಅಶೋಕ್‌ ಆಗ್ರಹ
x

ಹಫ್ತಾ ವಸೂಲಿ ಆರೋಪ | ಅಬಕಾರಿ ಸಚಿವರನ್ನು ಸಂಪುಟದಿಂದ ಕೈಬಿಡಲು ಆರ್‌. ಅಶೋಕ್‌ ಆಗ್ರಹ

ಈ ಹಿಂದೆ ಬೆಂಗಳೂರಿನಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಿದ್ದರು. ಈಗ ಸರ್ಕಾರದ ಸಚಿವರೇ ಹಫ್ತಾ ವಸೂಲಿಗೆ ಇಳಿದಿರುವುದು ನಾಚಿಕೆಗೇಡು ಎಂದು ಆರ್.‌ ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಿಂದ ನಿತ್ಯ ಲೂಟಿ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧದ ʼಹಫ್ತಾ ವಸೂಲಿʼ ಆರೋಪ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬೆಂಗಳೂರಿನಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಿದ್ದರು. ಈಗ ಸರ್ಕಾರದ ಸಚಿವರೇ ಹಫ್ತಾ ವಸೂಲಿಗೆ ಇಳಿದಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರು ಮದ್ಯದಂಗಡಿಗಳಿಂದ ವಾರಕ್ಕೆ 18 ಕೋಟಿ ರೂ. ವಸೂಲಿ ಮಾಡುತ್ತಿರುವುದಾಗಿ ಮದ್ಯದಂಗಡಿ ಮಾಲೀಕರೇ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 11 ಸಾವಿರಕ್ಕೂ ಹೆಚ್ಚು ವೈನ್ ಸ್ಟೋರ್‌ಗಳಿವೆ. ಪ್ರತಿಯೊಂದು ಮದ್ಯದಂಗಡಿಯಿಂದ ತಿಂಗಳಿಗೆ 20 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅಶೋಕ್‌, ಕೂಡಲೇ ತಿಮ್ಮಾಪುರ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ವಿರುದ್ಧ ಪೇಸಿಎಂ ಪೋಸ್ಟರ್ ಅಂಟಿಸಿದ್ದಿರಿ. ಆಗ ನಾವು ನಿಮ್ಮನ್ನು ಸನ್ಮಾನ ಮಾಡಲು ಸಾಧ್ಯವಾಗಲಿಲ್ಲ. ಈಗ ಪೇಸಿಎಂ ಪೋಸ್ಟರ್ ಅಂಟಿಸಿದಾಗ ನಮಗೆ ಹೇಳಿ, ನಿಮ್ಮನ್ನು ಅದ್ಧೂರಿಯಾಗಿ ಸನ್ಮಾನ ಮಾಡುತ್ತೇವೆ ಎಂದು ವ್ಯಂಗ್ಯವಾಡಿದರು.

ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರು ವರ್ಗಾವಣೆ, ಅಬಕಾರಿ ಲೈಸನ್ಸ್‌ ಹಾಗೂ ಮದ್ಯದಂಗಡಿ ಮಾಲೀಕರಿಂದ ತಿಂಗಳ ವಸೂಲಿ ಮೂಲಕ ವಾರ್ಷಿಕ 500 ಕೋಟಿ ರೂ. ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಮಂಗಳವಾರ ಕರ್ನಾಟಕ ಮದ್ಯ ಮಾರಾಟಗಾರರ ಸಂಘ ಆರೋಪಿಸಿತ್ತು.

ಇನ್ನು ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿ ನಿತ್ಯ ಒಬ್ಬರಲ್ಲ ಒಬ್ಬ ಸಚಿವರು ಲೂಟಿ ಹೊಡೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ 40 ವರ್ಷದ ರಾಜಕೀಯ ಜೀವನ ತೆರೆದ ಪುಸ್ತಕ ಎಂದು ಹೇಳುತ್ತಾರೆ. ತೆರೆದ ಪುಸ್ತಕ ಎಂದವರು ಈಗ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವುದೇಕೆ, ನಾಚಿಕೆ ಆಗಲ್ವಾ ಎಂದು ಅಶೋಕ್ ಕಿಡಿಕಾರಿದರು.

ಬೆಳಿಗ್ಗೆ ವಿಚಾರಣೆಯಂತೆ, ಮಧ್ಯಾಹ್ನ ಚುನಾವಣಾ ಪ್ರಚಾರವಂತೆ. ಮೊದಲೇ ಸಮಯ ನಿಗದಿ ಮಾಡಿಕೊಂಡು ಹೋದಂತಿದೆ. ಇದೇನು ಮ್ಯಾಚ್ ಫಿಕ್ಸಿಂಗ್ ಕೇಸು ಇದ್ದಂತಿದೆ. ತನಿಖಾಧಿಕಾರಿಗಳು ಎಷ್ಟು ಹೊತ್ತು ವಿಚಾರಣೆ ನಡೆಸಲಿದ್ದಾರೆ ಎಂಬುದು ಸಿಎಂ ಅವರಿಗೆ ಮೊದಲೇ ಗೊತ್ತಿತ್ತಾ?, ವಿಚಾರಣೆಗೆ ಇವರೇ ಸಮಯ ನಿಗದಿ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

Read More
Next Story