Work Hour Extension Part 4 | ಕೆಲಸದ ಅವಧಿ ಹೆಚ್ಚಳ ; ಗಾರ್ಮೆಂಟ್ಸ್ ನೌಕರರ ಶೋಷಣೆ ಆತಂಕ
x

ಸಾಂದರ್ಭಿಕ ಚಿತ್ರ

Work Hour Extension Part 4 | ಕೆಲಸದ ಅವಧಿ ಹೆಚ್ಚಳ ; ಗಾರ್ಮೆಂಟ್ಸ್ ನೌಕರರ ಶೋಷಣೆ ಆತಂಕ

ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆಯು ಗಾರ್ಮೆಂಟ್ಸ್ ನೌಕರರ ಮೇಲೆ ಮತ್ತಷ್ಟು ಶೋಷಣೆಗೆ ದಾರಿ ಮಾಡಿಕೊಡಲಿದೆ ಎಂಬ ಆತಂಕ ಕಾರ್ಮಿಕ ವಲಯದಲ್ಲಿ ಕೇಳಿ ಬರುತ್ತಿದೆ.


ಮುಂಜಾನೆ 6 ರಿಂದ ಆರಂಭವಾಗುವ ಧಾವಂತವು ಗಾರ್ಮೆಂಟ್ಸ್‌ ಕಾರ್ಮಿಕರ ಬದುಕನ್ನು ಹೈರಾಣಾಗಿಸಿದೆ. ಪತಿ, ಮಕ್ಕಳೊಂದಿಗೆ ಕಳೆಯಬೇಕಾದ ನೆಮ್ಮದಿಯ ಕ್ಷಣಗಳನ್ನೂ ಜೀವನಾಧಾರವಾದ ವೃತ್ತಿಗಾಗಿ ಧಾರೆ ಎರೆಯಬೇಕಾದ ಪರಿಸ್ಥಿತಿ ಗಾರ್ಮೆಂಟ್‌ ನೌಕರರಲ್ಲಿದೆ. ಬೆಳಿಗ್ಗೆ 8 ಅಥವಾ 9ರೊಳಗೆ ಗಾರ್ಮೆಂಟ್ಸ್‌ ನಲ್ಲಿ ಹಾಜರಿರಲೇಬೇಕು. ಐದು ನಿಮಿಷ ತಡವಾದರೂ ಒಳಗೆ ಅಂದು ಕೆಲಸಕ್ಕೆ ಬಿಡುವುದಿಲ್ಲ. ಗಾರ್ಮೆಂಟ್ಸ್‌ಗಳಲ್ಲಿರುವ ಈ ಅಲಿಖಿತ ನಿಯಮವು ಕಾರ್ಮಿಕರ ಧಾವಂತಕ್ಕೆ ಕಾರಣವಾಗಿದೆ.

ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಬಿಡುವಿಲ್ಲದೇ ದುಡಿಯುವ ಕಾರ್ಮಿಕರಿಗೆ ಈಗ ಕೆಲಸದ ಅವಧಿ ಹೆಚ್ಚಳ ಕುರಿತು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ತಿದ್ದುಪಡಿ ಕಾಯ್ದೆಯು ದೊಡ್ಡ ಆತಂಕ ತಂದೊಡ್ಡಿದೆ. ಸಾಮಾನ್ಯವಾಗಿ ಸಂಜೆ 5 ಅಥವಾ 6 ಗಂಟೆವರೆಗೆ ಹೆಚ್ಚುವರಿ (ಓವರ್‌ಟೈಮ್) ಕೆಲಸ ಮಾಡುವುದೂ ಕೂಡ ಕೆಲವರಿಗೆ ಅನಿವಾರ್ಯ. ಆದರೆ, ದಿನಕ್ಕೆ 10 ಗಂಟೆ, ಗರಿಷ್ಠ 12ಗಂಟೆ ಕೆಲಸ ಮಾಡಲೇಬೇಕೆಂಬ ಕಾನೂನು ಜಾರಿಯಾದರೆ ಗಾರ್ಮೆಂಟ್ಸ್‌ ಕಾರ್ಮಿಕರ ಶೋಷಣೆ ಹೆಚ್ಚಲಿದೆ ಎಂಬ ಆತಂಕವೂ ಇದೆ.

ಆತಂಕಕ್ಕೆ ಕಾರಣವಾದ ಕೆಲಸದ ಅವಧಿ ಹೆಚ್ಚಳ

ಗಾರ್ಮೆಂಟ್ಸ್‌ಗಳಲ್ಲೂ 9 ಗಂಟೆಗಳ ಕೆಲಸದ ಅವಧಿ ಅನುಸರಿಸಲಾಗುತ್ತಿದೆ. ಈಗ ಹೊಸ ತಿದ್ದುಪಡಿ ಮಸೂದೆ ಜಾರಿಯಾದರೆ ಗರಿಷ್ಠ 10 ರಿಂದ 12 ಗಂಟೆಗಳವರೆಗೆ ಕೆಲಸ ಮಾಡಬೇಕಾಗಬಹುದು. ಈಗಾಗಲೇ ವಿರಾಮವಿಲ್ಲದೆ ದುಡಿಯುತ್ತಿರುವ ಕಾರ್ಮಿಕರನ್ನು ತಿದ್ದುಪಡಿ ಕಾಯ್ದೆ ಮತ್ತಷ್ಟು ಹೈರಾಣಾಗಿಸಲಿದೆ. ಬಹುತೇಕ ಕಾರ್ಖಾನೆಗಳು ಬೇಡಿಕೆಗೆ ತಕ್ಕಂತೆ ಕೆಲಸ ಮಾಡಿಸುತ್ತವೆ. ಒಂದೊಮ್ಮೆ ಹೆಚ್ಚು ಬೇಡಿಕೆ ಸ್ವೀಕರಿಸಿದಾಗ ಸಮಯದ ಮಿತಿ ಇರುವುದಿಲ್ಲ. ಇನ್ನು ಬಟ್ಟೆಯ ಗುಣಮಟ್ಟ ಪರೀಕ್ಷೆ( ಕ್ವಾಲಿಟಿ ಚೆಕ್ಕಿಂಗ್‌), ವಾಷಿಂಗ್‌, ಐರನ್‌, ಕಟಿಂಗ್‌ ಸೇರಿದಂತೆ ಹಲವು ಕೆಲಸಗಳನ್ನು ದಿನವಿಡೀ ನಿಂತೇ ಮಾಡಬೇಕಾಗಿದೆ.

ನಿಗದಿತ ಗುರಿ ತಲುಪಲು ಕಾರ್ಮಿಕರಿಗೆ ಸೂಪರ್‌ವೈಸರ್‌ಗಳ ಕಿರಿಕಿರಿ ಹೆಚ್ಚೇ ಇರುತ್ತದೆ. ಹೆಣ್ಣು ಮಕ್ಕಳಿಗೆ ಎಲ್ಲರೆದುರೇ ಬಯ್ಯುವುದು ಸಾಮಾನ್ಯವಾಗಿದೆ. ಇಷ್ಟೆಲ್ಲಾ ಸಮಸ್ಯೆ ಇರುವಾಗ ಹೆಚ್ಚುವರಿ 2 ಗಂಟೆ ಕೆಲಸವು ಕಾನೂನುಬದ್ಧವಾದರೆ ಒತ್ತಡ ಹೆಚ್ಚಲಿದೆ. ಜತೆಗೆ ಮಾನಸಿಕವಾಗಿಯೂ ಪರಿಣಾಮ ಬೀರಲಿದೆ ಎಂದು ಒಡಿಸಾ ಮೂಲದ ಮಹಿಳಾ ಕಾರ್ಮಿಕರಾದ ವರ್ಟಿಕಾ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

"ದಿನಕ್ಕೆ 8 ರಿಂದ 9ಗಂಟೆಗಳ ಕೆಲಸದಿಂದ ಸಾಕಾಗಿ ಹೋಗಿದೆ. ಸಂಜೆ ಹೊತ್ತಿಗೆ ಗುರಿ ಪೂರೈಸಬೇಕು, ಇಲ್ಲದಿದ್ದರೆ ಸೂಪರ್‌ವೈಸರ್‌ ಗಳಿಂದ ಬೈಗುಳ ಕೇಳಬೇಕು. ಕೆಲವೊಮ್ಮೆ ನೀರು ಕುಡಿಯಲೂ ಸಮಯ ಇರುವುದಿಲ್ಲ. ಗಂಟೆಗೆ ಇಂತಿಷ್ಟೇ ಬಟ್ಟೆಗಳನ್ನು ಕತ್ತರಿಸಬೇಕು, ಬೆನ್ನುನೋವಿನ ಸಮಸ್ಯೆ ಶುರುವಾಗಿದೆ. ಮಧ್ಯಾಹ್ನ ಊಟ ಮಾಡಿ ವಿಶ್ರಾಂತಿ ಮಾಡಲು ಸಮಯ ಇರುವುದಿಲ್ಲ. ಈಗ 10 ಗಂಟೆ ಕೆಲಸ ಅಂದರೆ ನಮ್ಮ ಪರಿಸ್ಥಿತಿ ಏನಾಗಬೇಡ" ಎಂದು ಪ್ರಶ್ನಿಸಿದರು.

"ಬಲವಂತವಾಗಿ ಕೆಲಸ ಮಾಡಿಸಬಾರದು"

ಇನ್ನು ಗಾರ್ಮೆಂಟ್ಸ್‌ಗಳಲ್ಲಿ ಹೆಚ್ಚುವರಿ ಕೆಲಸಕ್ಕೆ ವೇತನ ನೀಡುವುದರಿಂದ ಕೆಲವರಿಗೆ ಅನುಕೂಲಕರವಾಗಿದೆ. "ಕೆಲಸದ ಅವಧಿ ಹೆಚ್ಚಿಸುವ ಸರ್ಕಾರ ಕಾಯ್ದೆಯು ಕಂಪನಿಗಳಿಗೆ ಲಾಭದಾಯಕವಾಗಿದೆ. ನಮಗೆ ವೇತನ ಹೆಚ್ಚಾಗುತ್ತದೆಯೇ?, ನಮ್ಮ ಬೆನ್ನುನೋವು ಕಡಿಮೆಯಾಗುತ್ತದೆಯೇ ? ಎಂದು ಬೆಂಗಳೂರಿನ ಗೊರಗುಂಟೆಪಾಳ್ಯದ ಗಾರ್ಮೆಂಟ್ಸ್‌ ಉದ್ಯೋಗಿ ಜಾರ್ಖಂಡ್‌ ಮೂಲದ ಲೀಲಾ ಎಂಬುವರು ʼದ ಫೆಡರಲ್‌ ಕರ್ನಾಟಕʼದ ಬಳಿ ಅಳಲು ತೋಡಿಕೊಂಡರು.

ಗಾರ್ಮೆಂಟ್ಸ್‌ ಆಡಳಿತ ಮಂಡಳಿಗಳು ಲಾಭಕ್ಕಿಂತ ಹೆಚ್ಚು ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹೆಚ್ಚುವರಿ ಕೆಲಸಗಳನ್ನು ಸ್ವಯಂ ಇಚ್ಛೆಯಿಂದ ಮಾಡುವ ಆಯ್ಕೆ ನೀಡಬೇಕು. ಬಲವಂತವಾಗಿ ಹೇರಬಾರದು ಎಂದು ರಾಜ್ಯ ಸರ್ಕಾರದ ಉದ್ದೇಶಿತ ತಿದ್ದುಪಡಿ ಕಾಯ್ದೆ ಜಾರಿ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದರು.

"10 ಗಂಟೆ ಕೆಲಸ ಮಾಡಿಸಿ 2 ದಿನ ರಜೆ ಕೊಟ್ಟರೂ ಯಾವುದೇ ಪ್ರಯೋಜನವಿಲ್ಲ. ಈಗಿರುವ ಕೆಲಸವೇ ಹೆಚ್ಚಾಗಿದೆ. ಕಡಿಮೆ ಸಂಬಳಕ್ಕೆ ಅಧಿಕ ಕೆಲಸ ಮಾಡುತ್ತಿದ್ದೇವೆ. ಪ್ರತಿದಿನ ಓವರ್‌ಟೈಮ್‌ ಕೆಲಸ ಮಾಡುತ್ತೇವೆ. ಹೆಚ್ಚುವರಿ ಗಂಟೆಗೆ 75 ರೂ.ಸಿಗುತ್ತದೆ. ಬೆಳಿಗ್ಗೆ ಬೇಗ ಹೋಗಬೇಕು. ತಡವಾದರೆ ಸೂಪರ್‌ವೈಸರ್‌ ಅವರಿಂದ ಬೈಗುಳ ಕೇಳಬೇಕು. ನೆಮ್ಮದಿ ಇಲ್ಲದ ಕೆಲಸ ನಮ್ಮದು. ಸಂಸಾರ ನಿರ್ವಹಣೆಗೆ ಕೆಲಸ ಅನಿವಾರ್ಯವಾಗಿದೆ ಎಂದು ಬೆಂಗಳೂರು ನಿವಾಸಿ ಅಶ್ವಿನಿ ʼದ ಫೆಡರಲ್‌ ಕರ್ನಾಟಕʼದ ಬಳಿ ಅಲವತ್ತುಕೊಂಡರು.

ಉದ್ಯೋಗ ನಷ್ಟದ ಭೀತಿ

ಕೆಲಸದ ಅವಧಿ ವಿಸ್ತರಣೆಯು ಗಾರ್ಮೆಂಟ್ಸ್ ಕಾರ್ಮಿಕರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಕುಟುಂಬದೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ. ಕೆಲವು ಕಾರ್ಖಾನೆಗಳಲ್ಲಿ ಇದ್ದಕ್ಕಿದ್ದಂತೆ ಕೆಲಸದಿಂದ ಕಿತ್ತು ಹಾಕುವ ಪ್ರವೃತ್ತಿ ಇದೆ. ಇನ್ನು ಲೈಂಗಿಕ ದೌರ್ಜನ್ಯಗೂ ಹೆಚ್ಚಾಗಿರುತ್ತದೆ. ಆದರೆ, ಜೀವನ ನಿರ್ವಹಣೆಗಾಗಿ ಈ ಎಲ್ಲ ಸಮಸ್ಯೆಗಳನ್ನು ನುಂಗಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗ ಇನ್ನಷ್ಟು ಕೆಲಸದ ಅವಧಿ ವಿಸ್ತರಿಸುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿರುತ್ತದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಅವರು ʻದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಮೂರನೇ ಸಮಸ್ಯೆಯೆಂದರೆ ನಿವೃತ್ತಿ. ಕಾರ್ಮಿಕ ಸಂಘಟನೆಗಳ ಹೋರಾಟ ಫಲವಾಗಿ ರಾಜ್ಯ ಸರ್ಕಾರ ನಿವೃತ್ತಿ ವಯಸ್ಸನ್ನು 58 ರಿಂದ 60 ವರ್ಷಕ್ಕೆ ಏರಿಸಿದೆ. ಆದರೆ, ಕೆಲವು ದೊಡ್ಡ ಕಂಪನಿಗಳಲ್ಲಿ ಈಗಲೂ 58 ವರ್ಷವೇ ನಿವೃತ್ತಿ ವಯಸ್ಸಾಗಿದೆ. ಕಾರ್ಮಿಕರು ಸಮರ್ಥರಿದ್ದರೂ ಅವರನ್ನು ಬೇಗ ನಿವೃತ್ತಿಗೊಳಿಸುವುದರಿಂದ ಜೀವನ ಕಷ್ಟವಾಗಲಿದೆ. ಇದು ಕಾರ್ಮಿಕರು ಮತ್ತು ಸಮಾಜದ ದೃಷ್ಟಿಯಿಂದ ಸರಿಯಲ್ಲ, ಏಕೆಂದರೆ ಇದು ಮಾಲೀಕರಿಗೆ ಮಾತ್ರ ಸೇವೆ ಸಲ್ಲಿಸಿದಂತಾಗುತ್ತದೆ. ಕಾರ್ಮಿಕರನ್ನು ಕಡೆಗಣಿಸಿದಂತಾಗುತ್ತದೆ ಎಂದು ಹೇಳಿದರು.

ಕಾರ್ಮಿಕರು ಈಗಾಗಲೇ 10 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅವರು ಇನ್ನಷ್ಟು ಹೆಚ್ಚುವರಿ ಕೆಲಸ ಮಾಡಿದರೆ ಆರೋಗ್ಯ ಸಮಸ್ಯೆ ಹೆಚ್ಚಲಿದೆ. ಕೆಲಸದ ಅವಧಿ ವಿಸ್ತರಣೆಯ ನಿರ್ಧಾರವು ಕಂಪೆನಿಗಳಿಗೆ ಆದಾಯ ತಂದುಕೊಡಲಿದೆ. ಆದರೆ, ಕೆಲಸದ ಒತ್ತಡದಿಂದ ಕಾರ್ಮಿಕರನ್ನು ಹೈರಾಣಾಗಿಸಲಿದೆ ಎಂದು ವರಲಕ್ಷ್ಮೀ ಹೇಳಿದರು.

ಈ ಹಿಂದೆ ಮೂರು ಶಿಫ್ಟ್‌ಗಳಲ್ಲಿ ಕೆಲಸ ನಡೆಯುತ್ತಿತ್ತು, ಆದರೆ, ಈಗ ಎರಡು ಶಿಫ್ಟ್‌ಗಳಿಗೆ ತಂದು ನಿಲ್ಲಿಸಲಾಗಿದೆ. ಇದರಿಂದಾಗಿ ಒಂದು ಶಿಫ್ಟ್‌ನ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಬೇಕಾಗಿದೆ. ಕಾರ್ಮಿಕರು 10 ಗಂಟೆಗಳ ಕಾಲ ಹೆಚ್ಚುವರಿ ಕೆಲಸ ಮಾಡಿದರೂ ಅವರ ಸಂಬಳ ಕಡಿಮೆ ಇರುತ್ತದೆ. ಸಂಬಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದರು.

ಕರ್ನಾಟಕದ ಗಾರ್ಮೆಂಟ್ಸ್ ಉದ್ಯಮ

ಕರ್ನಾಟಕವು ಭಾರತದ "ಗಾರ್ಮೆಂಟ್ ಕ್ಯಾಪಿಟಲ್" ಎಂದು ಹೆಸರುವಾಸಿಯಾಗಿದೆ. ದೇಶದ ಒಟ್ಟು ಗಾರ್ಮೆಂಟ್ಸ್‌ ಉತ್ಪಾದನೆಗೆ ಶೇ 20 ರಷ್ಟು ಕೊಡುಗೆ ನೀಡಲಿದೆ. ಇದರ ಮೌಲ್ಯ 75 ಸಾವಿರ ಕೋಟಿ ರೂ.

ದೇಶದ ಎರಡನೇ ಅತಿ ದೊಡ್ಡ ಜವಳಿ ಉದ್ಯೋಗದಾತ ರಾಜ್ಯವಾಗಿರುವ ಕರ್ನಾಟಕದಲ್ಲಿ ಕಚ್ಚಾ ರೇಷ್ಮೆ ಶೇ.65, ಉಣ್ಣೆ ಶೇ 12 ಮತ್ತು ಹತ್ತಿ ಶೇ 3.5 ರಷ್ಟು ಉತ್ಪಾದನೆಯಾಗಲಿದೆ. ಭಾರತದಿಂದ ರಫ್ತಾಗುವ ರೇಷ್ಮೆ ಸರಕುಗಳ ಶೇ 24 ರಷ್ಟು ಪಾಲನ್ನು ಕರ್ನಾಟಕ ಹೊಂದಿದೆ.

ಸಣ್ಣ, ಮಧ್ಯಮ ಹಾಗೂ ಬೃಹತ್ ಪ್ರಮಾಣದ ಜವಳಿ ಉದ್ದಿಮೆಗಳು 6500 ಇವೆ. ರಾಜ್ಯದಲ್ಲಿ ಒಟ್ಟು 1.20 ಲಕ್ಷ ಪವರ್‌ಲೂಮ್‌ಗಳು ಮತ್ತು 42,000 ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿವೆ.

ಜವಳಿ ಉದ್ಯಮದಲ್ಲಿ ಸಹಕಾರ ಸಂಘಗಳು ಕೂಡ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವರಿಗೆ ನೆರವಾಗುತ್ತಿವೆ.

227 ಹತ್ತಿ ಕೈಮಗ್ಗ ಸಹಕಾರ ಸಂಘಗಳು, 88 ರೇಷ್ಮೆ ಕೈಮಗ್ಗ ಸಹಕಾರ ಸಂಘಗಳು,138 ಉಣ್ಣೆ ಕೈಮಗ್ಗ ಸಹಕಾರ ಸಂಘಗಳು, 90 ಪವರ್‌ಲೂಮ್ ಸೊಸೈಟಿಗಳು ಕಾರ್ಯನಿರ್ವಹಿಸುತ್ತಿವೆ.

ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಉದ್ಯಮಗಳು ತಲೆ ಎತ್ತಿವೆ.

ಬೆಳಗಾವಿ ಜಿಲ್ಲೆಯ ರಾಣಿ ಚೆನ್ನಮ್ಮನ‌ ಕಿತ್ತೂರು, ಚಾಮರಾಜನಗರ ಹಾಗೂ ಬೀದರ್‌ನಲ್ಲಿ ಮಿನಿ ಪವರ್‌ಲೂಮ್ ಪಾರ್ಕ್ ಗಳಿವೆ.

ರಾಜ್ಯ ಗಾರ್ಮೆಂಟ್ಸ್ ಉದ್ಯಮದಲ್ಲಿ ಸುಮಾರು 8 ಲಕ್ಷ ಜನರು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಒಂದರಲ್ಲೇ ಸುಮಾರು 500 ರಿಂದ 1200 ದೊಡ್ಡ, ಸಣ್ಣ ಮತ್ತು ಮಧ್ಯಮ ಗಾತ್ರದ ಸಿದ್ಧ ಉಡುಪು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅಂದಾಜಿಸಲಾಗಿದೆ.

ಪ್ರಮುಖ ಗಾರ್ಮೆಂಟ್ಸ್ ಕಂಪನಿಗಳು

ಬೆಂಗಳೂರಿನಲ್ಲಿರುವ ಅತಿದೊಡ್ಡ ಬಟ್ಟೆ ತಯಾರಕರಲ್ಲಿ ಶಾಹೀ ಗಾರ್ಮೆಂಟ್ಸ್‌ 48 ಘಟಕಗಳನ್ನು ಹೊಂದಿದ್ದು ಅಂದಾಜು 80 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದೆ. ಗೋಕುಲ್ ದಾಸ್ ಗಾರ್ಮೆಂಟ್ಸ್ 26 ಘಟಕಗಳನ್ನು ಸ್ಥಾಪಿಸಿದ್ದು, 30 ಸಾವಿರ ಜನರಿಗೆ ಉದ್ಯೋಗ ನೀಡಿದೆ. ಉಳಿದಂತೆ ಅರವಿಂದ್ ಲೈಫ್‌ಸ್ಟೈಲ್, ಡೆನಿಮ್, ಕಾರ್ಲೆ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್, ಪೇಜ್ ಇಂಡಸ್ಟ್ರೀಸ್, ಅಕ್ವಾರೆಲ್ಲೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Aquarelle India Private Limited), ಜಾಕಿ ಇಂಡಿಯಾ, ಪ್ರಧಾನ್ ಮರ್ಕೆಂಟೈಲ್ ಪ್ರೈವೇಟ್ ಲಿಮಿಟೆಡ್ (Pradhan Mercantile Pvt. Ltd. - PMPL) ಕಂಪೆನಿಗಳು ಸಹಸ್ರಾರು ಜನರಿಗೆ ಉದ್ಯೋಗ ಒದಗಿಸಿವೆ.

ಪ್ರಸ್ತುತ, ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ತಿದ್ದುಪಡಿ ಕಾಯ್ದೆಯಿಂದಾಗಿ ಗಾರ್ಮೆಂಟ್ಸ್ ಕಾರ್ಮಿಕರ ಮೇಲೆ‌ ಬೀರಬಹುದಾದ ಪರಿಣಾಮಗಳ ಕುರಿತು ವ್ಯಾಪಕ ಚರ್ಚೆ ಅಗತ್ಯವಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ‌‌ ಎಂಬುದು ಕಾರ್ಮಿಕ ಸಂಘಟನೆಗಳ ಆಗ್ರಹವಾಗಿದೆ.

Read More
Next Story