
ಬಿಜೆಪಿಯಿಂದ ಉಚ್ಚಾಟನೆ | ಕಾದು ನೋಡಿ ಎಂದ ಹೆಬ್ಬಾರ್, ಮುನಿರತ್ನ ಉಚ್ಚಾಟನೆ ಏಕಿಲ್ಲ ಎಂದ ಡಿಕೆಶಿ
ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಮಂಗಳವಾರ(ಮೇ 27) ಪಕ್ಷದಿಂದ ಉಚ್ಚಾಟಿಸಿ ಬಿಜೆಪಿಯ ಕೇಂದ್ರೀಯ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಆದೇಶ ಹೊರಡಿಸಿದ್ದಾರೆ
ಬಿಜೆಪಿ ವರಿಷ್ಠರಿಗೆ ತೃಪ್ತಿಯಾಗುವ ರೀತಿ ಉತ್ತರ ಕೊಡಲು ಆಗಲ್ಲ. ನಾವು ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಪಕ್ಷದಿಂದ ಉಚ್ಚಾಟಿಸಿರುವುದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸ್ವಾಗತಿಸುತ್ತೇನೆ ಎಂದು ಉಚ್ಚಾಟಿತ ಶಾಸಕ ಶಿವರಾಮ್ ಹೆಬ್ಬಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶೋಕಾಷ್ ನೋಟಿಸ್ ನೀಡಲಾಗಿತ್ತು. ಅದಕ್ಕೆ ಉತ್ತರವನ್ನೂ ಕೊಟ್ಟಿದ್ದೆ. ನನ್ನ ಉತ್ತರ ಅವರಿಗೆ (ಬಿಜೆಪಿ ವರಿಷ್ಠರು) ತೃಪ್ತಿಯಾಗಿಲ್ಲ ಎಂದಾದರೆ ನಾನು ಜವಾಬ್ದಾರನಲ್ಲ. ನನ್ನ ಮುಂದಿನ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ, ಕಾದು ನೋಡಿ ಎಂದು ಹೇಳಿದ್ದಾರೆ.
ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರನ್ನು ಮಂಗಳವಾರ(ಮೇ 27) ಪಕ್ಷದಿಂದ ಉಚ್ಚಾಟಿಸಿ ಬಿಜೆಪಿಯ ಕೇಂದ್ರೀಯ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿದರೆ, ಶಿವರಾಮ್ ಹೆಬ್ಬಾರ್ ಅವರು ಮತದಾನಕ್ಕೆ ಗೈರಾಗಿ ಬಿಜೆಪಿಗೆ ಟಕ್ಕರ್ ನೀಡಿದ್ದರು.
ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ಬಿಜೆಪಿಯಿಂದ ಮಾನಸಿಕವಾಗಿ ದೂರ ಉಳಿದು, ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು. ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದರು. ಆದರೆ, ವೇದಿಕೆ ಸಿದ್ಧವಾಗಿರಲಿಲ್ಲ. ಈಗ ಪಕ್ಷವೇ ಉಚ್ಚಾಟನೆ ಮಾಡಿರುವುದರಿಂದ ಕಾಂಗ್ರೆಸ್ ಸೇರ್ಪಡೆ ಇನ್ನಷ್ಟು ಸುಲಭವಾಗಲಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಪಕ್ಷದ ವರಿಷ್ಠರ ವಿರುದ್ಧ ಪದೇ ಪದೇ ಬಹಿರಂಗ ಟೀಕೆ ಮಾಡುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳವರೆಗೆ ಉಚ್ಚಾಟನೆ ಮಾಡಲಾಗಿತ್ತು.
ಮುನಿರತ್ನ ಉಚ್ಚಾಟನೆ ಏಕಿಲ್ಲ; ಡಿಕೆಶಿ ಪ್ರಶ್ನೆ
ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಉಚ್ಚಾಟನೆ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.
ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿರಲಿಲ್ಲ. ಯಾರಿಗೂ ಎಚ್ಐವಿ ಏಡ್ಸ್ ಇಂಜೆಕ್ಷನ್ ಚುಚ್ಚಿರಲಿಲ್ಲ. ಆದರೆ, ಇದೆಲ್ಲವನ್ನೂ ಮಾಡಿದ್ದ ಮುತ್ತು, ರತ್ನಗಳನ್ನು ಅವರೇ ಇಟ್ಟುಕೊಂಡಿದ್ದಾರೆ ಎಂದು ಪರೋಕ್ಷವಾಗಿ ಮುನಿರತ್ನ ಅವರನ್ನು ಏಕೆ ಉಚ್ಚಾಟಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.