
ಸಾಂದರ್ಭಿಕ ಚಿತ್ರ
ಹಾಸನ| ಮನೆಯಲ್ಲಿ ನಿಗೂಢ ಸ್ಫೋಟ; ಇಬ್ಬರಿಗೆ ಗಂಭೀರ ಗಾಯ
ಮನೆಯಿಂದ ಕಾಂಪೌಂಡ್ ಗೋಡೆಯ ನಡುವಿನ ದಾರಿಯಲ್ಲಿ ಇಟ್ಟಿದ್ದ ಸಿಲಿಂಡರ್ ಬಳಿ ಸ್ಫೋಟ ಸಂಭವಿಸಿದೆ. ಆದರೆ, ಸಿಲಿಂಡರ್‌ಗೆ ಯಾವುದೇ ಹಾನಿ ಆಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಮನೆಯೊಂದರಲ್ಲಿ ಸೋಮವಾರ ರಾತ್ರಿ ನಿಗೂಢ ಸ್ಫೋಟ ಸಂಭವಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸ್ಫೋಟದ ಸ್ಥಳದಲ್ಲಿ ಲೋಹದ ಮಾದರಿಯ ವಸ್ತುಗಳು ಪತ್ತೆಯಾಗಿರುವುದು ತೀವ್ರ ಅನುಮಾನ ಮೂಡಿಸಿದೆ. ಸ್ಫೋಟದಲ್ಲಿ ಗಾಯಗೊಂಡಿರುವ ಸುದರ್ಶನ್ ಹಾಗೂ ಕಾವ್ಯ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ.
ಘಟನೆ ಸಂಬಂಧ ಗಾಯಾಳುಗಳ ಸಂಬಂಧಿ ಮೋಹನ್ ಎಂಬುವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕುಟುಂಬದವರ ಪ್ರಕಾರ, ಗ್ಯಾಸ್ ಸಿಲಿಂಡರ್ ಸ್ಫೋಟ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಪತ್ತೆಯಾಗಿರುವ ಲೋಹದ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮನೆಯ ಕಾಂಪೌಂಡ ಗೋಡೆಯ ಪಕ್ಕದಲ್ಲಿ ಇರಿಸಿದ್ದ ಸಿಲಿಂಡರ್ ಬಳಿ ಸ್ಫೋಟ ಸಂಭವಿಸಿದೆ. ಆದರೆ, ಸಿಲಿಂಡರ್‌ಗೆ ಯಾವುದೇ ಹಾನಿ ಆಗಿಲ್ಲ. ಹಾಗಾಗಿ ಸ್ಫೋಟ ನಿಗೂಢವಾಗಿದೆ ಎಂದು ಪೊಲೀಸರು ತಿಳಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ.
ಇತ್ತೀಚೆಗೆ ವಿಜಯನಗರ ಜಿಲ್ಲೆಯ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಬೆಳಗಿನ ಜಾವ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಎಂಟು ಮಂದಿ ಗಂಭೀರ ಗಾಯಗೊಂಡಿದ್ದರು. ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಳಿ ಸಿಲಿಂಡರ್ ಸ್ಫೋಟಿಸಿ 12 ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿದ್ದವು. ಘಟನೆಯಲ್ಲಿ ಒಬ್ಬರು ಇಬ್ಬರು ಮೃತಪಟ್ಟು, ಆರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು.