ಮಾರಿಷಸ್‌ಗೆ ಬೇಕು ಕರ್ನಾಟಕದ ಕೌಶಲ್ಯಯುತ  ಕಾರ್ಮಿಕರು!
x

ಮಾರಿಷಸ್‌ಗೆ ಬೇಕು ಕರ್ನಾಟಕದ ಕೌಶಲ್ಯಯುತ ಕಾರ್ಮಿಕರು!

ಮಾರಿಷಸ್‌ಗೆ ಕೌಶಲ್ಯಯುತ ಕಾರ್ಮಿಕರ ಅಗತ್ಯ ಇದ್ದು, ಕರ್ನಾಟಕವು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸುವ ನಿರೀಕ್ಷೆ ಇದೆ ಎಂದು ಮಾರಿಷಸ್‌ ಕಾರ್ಮಿಕ ಸಚಿವ ಮುಹಮ್ಮದ್ ರೆಜಾ ಖಾಸ್ಸಂ ಉತ್ತೀಮ್‌ ಹೇಳಿದ್ದಾರೆ.


Click the Play button to hear this message in audio format

ಮಾರಿಷಸ್‌ ದೇಶಕ್ಕೆ ಕೌಶಲ್ಯಯುತ ಕಾರ್ಮಿಕರ ಅಗತ್ಯ ಇದ್ದು, ಕರ್ನಾಟಕ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಿಕೊಡುವ ನಿರೀಕ್ಷೆ ಇದೆ ಎಂದು ಮಾರಿಷಸ್‌ ದೇಶದ ಕಾರ್ಮಿಕ ಸಚಿವ ಮುಹಮ್ಮದ್ ರೆಜಾ ಖಾಸ್ಸಂ ಉತ್ತೀಮ್‌ ಹೇಳಿದ್ದಾರೆ.

ಬೆಂಗಳೂರು ಕೌಶಲ್ಯ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾರಿಷಸ್‌ನಲ್ಲಿನ ಕಾರ್ಮಿಕರಲ್ಲಿ ಶೇ. 70ರಷ್ಟು ಮಂದಿ ಭಾರತ ಮೂಲದವರಾಗಿದ್ದಾರೆ. ಅದರಲ್ಲೂ ಕರ್ನಾಟಕದವರು ಹೆಚ್ಚಿದ್ದಾರೆ. ಹಿಂದೆಲ್ಲ ಕಾರ್ಮಿಕರ ಸಂಖ್ಯೆ ಹೆಚ್ಚು ಬೇಡಿಕೆಯಿತ್ತು. ಈಗ ಕೌಶಲ್ಯಭರಿತ ಕಾರ್ಮಿಕರ ಬೇಡಿಕೆ ಹೆಚ್ಚಿದೆ. ಬೆಂಗಳೂರು ಕೌಶಲ್ಯ ಶೃಂಗಸಭೆಯ ಮೂಲಕ ಕರ್ನಾಟಕ ಹೆಚ್ಚಿನ ಪ್ರಮಾಣದಲ್ಲಿ ಕೌಶಲ್ಯಭರಿತ ಕಾರ್ಮಿಕರನ್ನು ರೂಪಿಸಿದರೆ, ಮಾರಿಷಸ್‌ನಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈವರೆಗೆ ಮಾರಿಷಸ್‌ನಲ್ಲಿ ಕೆಲಸಕ್ಕೆ ಬರುವವರಿಗೆ ಮಧ್ಯವರ್ತಿಗಳು ಆರ್ಥಿಕವಾಗಿ ಹಿಂಸೆ ನೀಡುತ್ತಿದ್ದರು. ಅದನ್ನು ಮನಗಂಡು ಮಧ್ಯವರ್ತಿಗಳ ಕಾಟವನ್ನು ತಪ್ಪಿಸಲು ಹೊಸ ನೀತಿ ಅನುಷ್ಠಾನಗೊಳಿಸಲಾಗುತ್ತಿದೆ. ಹೀಗಾಗಿ ಭಾರತ ಮೂಲದವರು ಯಾವುದೇ ಕಿರುಕುಳಕ್ಕೊಳಗಾಗದೇ ಮಾರಿಷಸ್‌ನಲ್ಲಿ ಕೌಶಲ್ಯದ ಮೂಲಕ ಕೆಲಸ ಪಡೆದುಕೊಳ್ಳಬಹುದಾಗಿದೆ. ಮಾರಿಷಸ್‌ನಲ್ಲಿ ನೇಮಕ ಮಾಡಿಕೊಳ್ಳುವಾಗ ಕೆಲಸಕ್ಕೆ ಬರುವವರಿಂದ ಇಂತಿಷ್ಟು ಶುಲ್ಕವನ್ನು ಪಾವತಿಸಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಈ ನಿಯಮವನ್ನು ಬದಲಾವಣೆ ಮಾಡಲಾಗಿದೆ. ನೇಮಕ ಮಾಡಿಕೊಳ್ಳುವ ಸಂಸ್ಥೆಗಳು ಈ ಹಣವನ್ನು ಪಾವತಿ ಮಾಡುವುದರಿಂದ ಕೆಲಸಗಾರರು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯ ಇಲ್ಲ ಎಂದು ಹೇಳಿದರು.

ಮಾರಿಷಸ್‌ ಪ್ರಜೆಗಳಿಗೆ ನೀಡುವ ಗೌರವವನ್ನೇ ಭಾರತದ ಮೂಲದ ಕಾರ್ಮಿಕರಿಗೂ ನೀಡಲಾಗುತ್ತಿದೆ. ಕಾರ್ಮಿಕರ ಗೌರವ ಮತ್ತು ಅವರಿಗೆ ಸಿಗಬೇಕಾದ ಸವಲತ್ತುಗಳಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಮಾರಿಷಸ್‌ ಪ್ರಜೆಗಳಿಗೆ ನೀಡುವ ಗೌರವ, ಸೌಲಭ್ಯಗಳನ್ನೇ ಭಾರತೀಯ ಮೂಲದವರಿಗೂ ನೀಡಲಾಗುತ್ತಿದೆ. ಯಾವುದೇ ರೀತಿಯಲ್ಲಿಯೂ ತಾರತಮ್ಯ ಅನುಸರಿಸದೆ ಸಮಾನವಾಗಿ ಕಾಣಲಾಗುತ್ತಿದೆ. ಆದರೆ, ಕೌಶಲ್ಯಯುತ ಕಾರ್ಮಿಕರು ಮಾರಿಷಸ್‌ ರಾಷ್ಟ್ರಕ್ಕೆ ಅಗತ್ಯ ಇದೆ. ಕೌಶಲ್ಯಯುತ ಕಾರ್ಮಿಕರು ದೇಶಕ್ಕೆ ಬಂದರೆ ಮುಕ್ತವಾಗಿ ಸ್ವಾಗತಿಸಲಾಗುವುದು. ಮಾರಿಷಸ್‌ ರಾಷ್ಟ್ರಕ್ಕೆ ಬರುವ ಭಾರತೀಯರು ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಅಧಿಕೃತವಾದ ಪ್ರಮಾಣ ಪತ್ರವನ್ನು ಪಡೆದಿರಬೇಕು. ಅಧಿಕೃತ ಪ್ರಮಾಣಪತ್ರ ಹೊಂದಿದ್ದರೆ ಅಂತಹವರು ನಿರ್ಭೀತಿಯಿಂದ ಮಾರಿಷಸ್‌ ರಾಷ್ಟ್ರಕ್ಕೆ ಆಗಮಿಸಿ ದುಡಿಯಬಹುದು ಎಂದು ತಿಳಿಸಿದರು.

Read More
Next Story