
ಧರ್ಮಸ್ಥಳದಲ್ಲಿ ಮುಂದುವರಿದ ʼಶವʼ ಶೋಧ| ಮೂರು ಜಾಗಗಳಲ್ಲಿ ಸಿಕ್ಕಿಲ್ಲ ಕಳೇಬರ
ನೇತ್ರಾವತಿ ನದಿ ಸ್ನಾನಘಟ್ಟದ ಬಳಿ ಬುಧವಾರ ಮೂರು ಕಡೆ ಅಗೆಯಲಾಗಿದೆ. ಈವರೆಗೂ ಯಾವುದೇ ಕಳೇಬರ ಲಭ್ಯವಾಗಿಲ್ಲ. ಆದರೂ, ಶೋಧ ಕಾರ್ಯ ಮುಂದುವರಿಸಲಾಗಿದೆ.
ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳ ಗ್ರಾಮದ ಪರಿಸರದಲ್ಲಿ ಶವದ ಕಳೇಬರ ಹುಡುಕು ಕಾರ್ಯ ಎರಡನೇ ದಿನವೂ ಮುಂದುವರಿದಿದ್ದು, ನಾಲ್ವರು ತಹಶೀಲ್ದಾರ್‌ಗಳು, ಪುತ್ತೂರು ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ನೇತ್ರಾವತಿ ನದಿಯ ಸ್ನಾನಘಟ್ಟದ ಬಳಿಯೇ ಬುಧವಾರ ಮೂರು ಕಡೆ ಅಗೆಯಲಾಗಿದೆ. ಈವರೆಗೂ ಯಾವುದೇ ಕಳೇಬರ ಲಭ್ಯವಾಗಿಲ್ಲ. ಆದರೂ, ಶೋಧ ಕಾರ್ಯ ನಡೆಸಲಾಗಿದೆ. ಮುಸುಕುಧಾರಿಯಾಗಿರುವ ದೂರುದಾರನನ್ನು ಪೊಲೀಸ್ ಭದ್ರತೆಯಲ್ಲಿ ಕರೆತರಲಾಗಿದೆ. ಎಸ್‌ಐಟಿ ಅಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆ, ವೈದ್ಯಕೀಯ ಸಿಬ್ಬಂದಿ, ವಿಧಿವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಉಪಸ್ಥಿತಿಯಲ್ಲಿ ಗುಂಡಿ ಅಗೆಯುವ ಕಾರ್ಯ ನಡೆಸಲಾಗುತ್ತಿದೆ.
ಮೊದಲ ದಿನ ಅಗೆದಿರುವ ಜಾಗದಲ್ಲಿ ಯಾವುದೇ ಕುರುಹು ಸಿಕ್ಕಿಲ್ಲ. ಎರಡನೇ ದಿನ ಎರಡನೇ ಸ್ಥಳದಲ್ಲಿಯೂ ಏನೂ ಸಿಕ್ಕಿಲ್ಲ. ಹೀಗಾಗಿ ಮೂರನೇ ಸ್ಥಳವನ್ನು ಅಗೆಯಲಾಗಿದೆ. ಧರ್ಮಸ್ಥಳದಲ್ಲಿ ಮಳೆಯಾಗುತ್ತಿರುವ ಕಾರಣ ಅಗೆಯುವ ಕಾರ್ಯಕ್ಕೆ ಅಡೆತಡೆಯಾಗುತ್ತಿದೆ. ಒಟ್ಟು 50 ಜನ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಪರಿಚಿತ ವ್ಯಕ್ತಿ ಹೇಳಿದಂತೆ 13 ಕಡೆ ಸ್ಥಳ ಮಹಜರು ಮಾಡಲಾಗಿದೆ. ಅವುಗಳನ್ನು ಒಂದೊಂದಾಗಿ ಅಗೆಯುವ ಕಾರ್ಯ ಮಾಡಲಾಗುತ್ತದೆ.
ಈ ನಡುವೆ, ಬೆಳ್ತಂಗಡಿಯಲ್ಲಿನ ಎಸ್‌ಐಟಿ ಕಚೇರಿಗೆ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮತ್ತು ಸಂಬಂಧಪಟ್ಟ ತಹಶೀಲ್ದಾರ್ ಅವರು ಭೇಟಿ ನೀಡಿ ಎಸ್‌ಐಟಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅಗೆಯುವ ಕಾರ್ಯ ನಡೆಯಬೇಕಿತ್ತು. ಆದರೆ, ಅವರು ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗದ ಕಾರಣ ನಾಲ್ವರು ತಹಶೀಲ್ದಾರ್ ಅವರನ್ನು ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ಹೇಳಿವೆ.
ಪಟ್ಟಿ ನೀಡುವಂತೆ ಮನವಿ
ಇನ್ನು ದೂರುದಾರ ತಿಳಿಸಿರುವ ಸ್ಥಳಗಳಲ್ಲಿ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದರೆ, ಮತ್ತೊಂದೆಡೆ 1995 ರಿಂದ ಈವರೆಗೆ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಪಟ್ಟಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಎಸ್‌ಐಟಿ ಮನವಿ ಮಾಡಿದೆ.
ಕೆಲಸ ಮಾಡಿದವರ ಪಟ್ಟಿ ಲಭ್ಯವಾದ ಬಳಿಕ ಅವರನ್ನು ವಿಚಾರಣೆ ನಡೆಸಲಿದೆ. ಕೆಲಸ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ನಾಪತ್ತೆಯಾದವರ, ಕೊಲೆಯಾದವರ, ಅತ್ಯಾಚಾರಕ್ಕೊಳಗಾದವರ ಕುರಿತು ದೂರುಗಳು ಸಮರ್ಪಕವಾಗಿ ದಾಖಲಿಸದೆ ತನಿಖೆ ನಡೆಸದಿರುವ ಮಾಹಿತಿ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಶವಗಳನ್ನು ಹೊರತೆಗೆಯಲು ಅಗೆಯುವ ಕಾರ್ಯ ಮಂಗಳವಾರ ಆರಂಭಿಸಿದ್ದು, ಮಿನಿ ಹಿಟಾಚಿ ಬಳಸಿ ಮೊದಲ ಸ್ಥಳದಲ್ಲಿ ಕಾರ್ಯಾಚರಣೆ ಮಾಡಲಾಯಿತು. 8 ಅಡಿ ಹೊಂಡ ಅಗೆದರೂ ಕುರುಹು ಕಂಡು ಬಾರದಿದ್ದಾಗ, ಸಂಜೆ 5 ಗಂಟೆ ಹೊತ್ತಿಗೆ ಶ್ವಾನದಳ ಕೂಡ ಕರೆಸಲಾಯಿತು. ಕತ್ತಲು ಆವರಿಸಿದ ಕಾರಣ 6 ರ ವೇಳೆಗೆ ಕಾರ್ಯಾಚರಣೆ ಸ್ಥಗಿತ ಮಾಡಲಾಗಿತ್ತು. ಎರಡನೇ ದಿನ ಬುಧವಾರದಂದು ಅಗೆಯುವ ಕಾರ್ಯ ಮುಂದುವರಿಸಲಾಗಿದೆ.
Live Updates
- 30 July 2025 5:11 PM IST
ಕೆಂಪು ಬಟ್ಟೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆ
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಹೊಸ ಬೆಳವಣಿಗೆಯಾಗಿದೆ. 22 ವರ್ಷಗಳಿಂದ ಕಾಣೆಯಾಗಿರುವ ಅನನ್ಯಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಗಳಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಸೈಟ್ ನಂ.1ನಲ್ಲಿ ಅಗೆತದ ವೇಳೆ ಸುಮಾರು 2.5 ಅಡಿಗಳ ಆಳದಲ್ಲಿ ಕೆಂಪು ಬಟ್ಟೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್‌ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
- 30 July 2025 4:44 PM IST
ಧರ್ಮಸ್ಥಳ ಪ್ರಕರಣ: ʼದ ಫೆಡರಲ್ ಕರ್ನಾಟಕʼದಲ್ಲಿ ನೇರ ಪ್ರಸಾರ
ಧರ್ಮಸ್ಥಳದಲ್ಲಿ ಶವ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಧರ್ಮಸ್ಥಳದಲ್ಲಿ ನಿನ್ನೆಯಿಂದ ಈವರೆಗೆ ಆಗಿರುವ ಬೆಳವಣಿಗೆಗಳ ಕುರಿತು ʼದ ಫೆಡರಲ್ ಕರ್ನಾಟಕʼದಲ್ಲಿ ಮಾಹಿತಿ ನೀಡುತ್ತಿದೆ.
- 30 July 2025 4:40 PM IST
ಧರ್ಮಸ್ಥಳ ಪ್ರಕರಣ: ನಾಲ್ಕನೇ ಜಾಗದಲ್ಲಿ ʼಶವʼ ಶೋಧ
ಧರ್ಮಸ್ಥಳದಲ್ಲಿ ನಾಲ್ಕನೇ ಜಾಗದಲ್ಲಿ ಗುಂಡಿ ಅಗೆಯುವ ಕೆಲಸವನ್ನು ಎಸ್‌ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ,. ಈಗಾಗಲೇ ಮೂರು ಗುಂಡಿಗಳಲ್ಲಿ ಯಾವುದೇ ಕಳೇಬರ ಸಿಗದ ಕಾರಣ ಕುತೂಹಲ ಮುಂದುವರಿದಿದೆ. ಮಳೆಯ ನಡುವೆಯೂ ಗುಂಡಿ ಅಗೆಯುವ ಕೆಲಸ ನಡೆಯುತ್ತಿದೆ.