3 ಕೋಟಿಗಾಗಿ ಬೇಡಿಕೆ ಇಟ್ಟಿದ್ದ ಪತ್ನಿ; ಪುರುಷರ ಹಕ್ಕುಗಳ ರಕ್ಷಣೆಗಾಗಿ ಡೆತ್‌ನೋಟ್ ಬರೆದಿಟ್ಟಿದ್ದ ಅತುಲ್ ಸುಭಾಷ್
ಕೌಟುಂಬಿಕ ಪ್ರಕರಣದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಖಾಸಗಿ ಕಂಪನಿ ಉದ್ಯೋಗಿ ಅತುಲ್ ಸುಭಾಷ್, ಮಗನನ್ನು ನೋಡಲು ೩೦ ಲಕ್ಷ ರೂ. ನೀಡುವಂತೆ ತಮ್ಮ ಪತ್ನಿ ಹಾಗೂ ಆಕೆಯ ಕುಟುಂಬದವರು ಪೀಡಿಸಿದ್ದರು ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ.
ಕೌಟುಂಬಿಕ ವಿಚಾರದಲ್ಲಿ ತಮಗಾದ ಕಿರುಕುಳ, ನ್ಯಾಯಾಧೀಶ ಪಕ್ಷಪಾತದ ವಿಚಾರಣೆ ಕುರಿತು ಡೆತ್‌ನೋಟ್‌ನಲ್ಲಿ ಬರೆದು ಸುಪ್ರೀಂಕೋರ್ಟ್, ಹೈಕೋರ್ಟ್, ಸರ್ಕಾರೇತರ ಸಂಸ್ಥೆೆ ಹಾಗೂ ಕುಟುಂಬ ಸದಸ್ಯರಿಗೆ ಇ-ಮೇಲ್ ಕಳುಹಿಸಿ ಸಾವಿಗೆ ಶರಣಾಗಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಆತ್ಮಹತ್ಯೆ ಪ್ರಕರಣ ಕುತೂಹಲ ತಿರುವು ಪಡೆದುಕೊಂಡಿದೆ.
ಪತ್ನಿ ಹಾಗೂ ಆಕೆಯ ಕುಟುಂಬದವರು ತಮ್ಮ ವಿರುದ್ಧ ದಾಖಲಿಸಿರುವ 9 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು 3 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಮಗನನ್ನು ನೋಡಬೇಕಾದರೆ 30ಲಕ್ಷ ರೂ. ನೀಡುವಂತೆ ಪೀಡಿಸಿದ್ದರು ಎಂದು 26 ಪುಟಗಳ ಡೆತ್‌ನೋಟ್ ಹಾಗೂ ವಿಡಿಯೋ ಮಾಡಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಬೆಂಗಳೂರಿನ ಆಟೊಮೊಬೈಲ್ ಕಂಪನಿಯೊಂದರಲ್ಲಿ ಉಪ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅತುಲ್ ಸುಭಾಷ್ ಡಿ. 8ರಂದು ಭಾನುವಾರ ರಾತ್ರಿ ತಾವು ವಾಸುಸುತ್ತಿದ್ದ ಮಾರತ್ತಹಳ್ಳಿ ಸಮೀಪದ ಮುಂಜುನಾಥ ಲೇಔಟ್ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೂಲತಃ ಉತ್ತರ ಪ್ರದೇಶದ ಅತುಲ್ ಸುಭಾಷ್ ಐದು ವರ್ಷಗಳ ಹಿಂದೆ ನಿಖಿತಾ ಸಿಂಘಾನಿಯಾ ಎಂಬುವರನ್ನು ವಿವಾಹವಾಗಿದ್ದರು. ಉತ್ತರ ಪ್ರದೇಶದಲ್ಲೇ ವಾಸವಿದ್ದ ದಂಪತಿ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಈಚೆಗೆ ಕೌಟುಂಬಿಕ ವಿಚಾರವಾಗಿ ಜಗಳ ಮಾಡಿಕೊಂಡು ಪತ್ನಿ ನಿಖಿತಾ ಸಿಂಘಾನಿಯಾ ಅವರು ಮಗನೊಂದಿಗೆ ಉತ್ತರ ಪ್ರದೇಶಕ್ಕೆೆ ವಾಪಸ್ ಹೋಗಿದ್ದರು. ಅಂದಿನಿಂದ ಅತುಲ್ ಸುಭಾಷ್ ಒಬ್ಬರೇ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು.
ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ದಂಪತಿ ವಿಚ್ಛೇಧನದ ಮೊರೆ ಹೋಗಿದ್ದರು. ಅತುಲ್ ವಿರುದ್ಧ ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬದವರು ಸುಮಾರು 9ಪ್ರಕರಣಗಳನ್ನು ದಾಖಲಿಸಿದ್ದರು. ಇದರಿಂದ ಜರ್ಜರಿತರಾದ ಅತುಲ್ ಸುಭಾಷ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಬಗ್ಗೆ ಅತುಲ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಮಾರತ್ತಹಳ್ಳಿ ಪೊಲೀಸರು ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ, ಆಕೆಯ ಸೋದರ ಅನುರಾಗ್ ಹಾಗೂ ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಖಿತಾ ಸಿಂಘಾನಿಯಾ ಅವರೊಂದಿಗೆ ಕೌಟುಂಬಿಕ ನ್ಯಾಯಾಲಯದಲ್ಲಿ ಸಂಘರ್ಷ ಏರ್ಪಟ್ಟಾಗಿನಿಂದ ನನ್ನ ಸೋದರ ಅತುಲ್ ಸುಭಾಷ್ ದೈಹಿಕ ಹಾಗೂ ಮಾನಸಿಕವಾಗಿ ನೊಂದಿದ್ದರು. ಪ್ರತಿ ಬಾರಿ ನ್ಯಾಯಾಲಯದ ವಿಚಾರಣೆಗೆ ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಬರಬೇಕಿತ್ತು. ಈ ವೇಳೆ ನಿಖಿತಾ ಸಿಂಘಾನಿಯಾ ಕುಟುಂಬಸ್ಥರು ಎದುರಲ್ಲೇ ನಿಂದಿಸುತ್ತಿದ್ದರು. ಹಣ ಕೊಡಲು ಆಗದಿದ್ದರೆ ಸಾಯುವಂತೆ ಪ್ರಚೋದಿಸುತ್ತಿದ್ದರು ಎಂದು ಬಿಕಾಸ್ ಕುಮಾರ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಟ್ರಂಪ್, ಎಲಾನ್ ಮಸ್ಕ್ ನೆರವಿಗೂ ಮೊರೆ
ಸುಭಾಷ್ ಅತುಲ್ ಸಾಯುವ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ಸಾಧ್ಯವಾದರೆ ನನ್ನ ಕುಟುಂಬಕ್ಕೆೆ ಸಹಾಯ ಮಾಡುವಂತೆ ಕೋರಿದ್ದಾರೆ. ಅಲ್ಲದೇ ಪುರುಷರ ಹಕ್ಕುಗಳ ಬಗ್ಗೆ ಹೋರಾಟಕ್ಕೆ ನೆರವಾಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಸಹಾಯವನ್ನೂ ಕೇಳಿದ್ದಾರೆ.
ನನ್ನದಲ್ಲದ ತಪ್ಪಿಗೂ ನನ್ನ ಮೇಲೆ ಪತ್ನಿ ನಿಖಿತಾ ಹಾಗೂ ಕುಟುಂಬಸ್ಥರು 9 ದೂರುಗಳನ್ನು ದಾಖಲಿಸಿದ್ದಾರೆ.
ಪ್ರಕರಣದ ವಿಚಾರಣೆಗೆ ಪ್ರತಿಬಾರಿ ಉತ್ತರ ಪ್ರದೇಶಕ್ಕೆ ಹೋಗಬೇಕಿದೆ. ಪತ್ನಿ ಕುಟುಂಬದವರ ಹಣಕಾಸಿನ ಬೇಡಿಕೆ ಪೂರೈಸಿ ಸಾಕಾಗಿದೆ. ನನ್ನ ದುಡಿಮೆಯ ಎಲ್ಲಾ ಹಣವನ್ನು ಶತ್ರುಗಳನ್ನು ಸಾಕಲು ಕೊಡಬೇಕಾಗಿದೆ. ಇದರಿಂದ ಶತ್ರುಗಳು ಬಲವಾಗುತ್ತಿದ್ದಾರೆ. ಭಾರತದಲ್ಲಿ ಪುರುಷರ ಹಕ್ಕುಗಳ ಹರಣವಾಗುತ್ತಿದೆ. ಇದರಿಂದ ಪುರುಷರನ್ನು ರಕ್ಷಿಸಿ ವಾಕ್ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಟ್ರಂಪ್ ಹಾಗೂ ಎಲಾನ್ ಮಸ್ಕ್ಗೆ ಮನವಿ ಮಾಡಿದ್ದಾರೆ.
ಮಗನಿಗಾಗಿ ಗಿಫ್ಟ್ ಬಾಕ್ಸ್
ಮಗನ ಮೇಲೆ ಅತಿಯಾಗಿ ಪ್ರೀತಿ ಇಟ್ಟುಕೊಂಡಿದ್ದ ಅತುಲ್ ಸುಭಾಷ್, ಸಾಯುವ ಮುನ್ನ ಮಗನಿಗಾಗಿ ವಿಶೇಷ ಗಿಫ್ಟ್ ಬಾಕ್ಸ್ ಕೂಡ ಸಿದ್ದ ಮಾಡಿಟ್ಟಿದ್ದರು. ಈ ಗಿಫ್ಟ್ ಬಾಕ್ಸನ್ನು ತನ್ನ ನಾಲ್ಕು ವರ್ಷದ ಮಗನಿಗೆ ತಲುಪಿಸುವಂತೆ ಉಲ್ಲೇಖಿಸಿದ್ದರು. ಗೋಡೆಗಳ ಮೇಲೆ ‘JUSTICE IS DUE’ ಎಂಬ ಬರಹದ ಪೋಸ್ಟರ್ ಅಂಟಿಸಿದ್ದರು. ತಾನು ಪೂರ್ಣಗೊಳಿಸಿದ ಎಲ್ಲ ಕೆಲಸಗಳ ಪಟ್ಟಿಯನ್ನು ಗೋಡೆಗೆ ಅಂಟಿಸಿ, ಬದುಕಿಗೆ ವಿದಾಯ ಹೇಳಿದ್ದರು.
ಮಗನನ್ನು ನನ್ನ ಪೋಷಕರಿಗೆ ಒಪ್ಪಿಸಬೇಕು. ತಮ್ಮ ಪತ್ನಿ ಹಾಗೂ ಆಕೆಯ ಮನೆಯವರು ಯಾವುದೇ ಕಾರಣಕ್ಕೂ ನನ್ನ ಶವ ನೋಡಬಾರದು ಎಂದು ಷರತ್ತು ವಿಧಿಸಿದ್ದರು.
ನ್ಯಾಯದಾನದ ಬಗ್ಗೆಯೂ ಬೇಸರ
ವಿಚ್ಛೇಧನ ಹಾಗೂ ಮಗನನ್ನು ಸುಪರ್ದಿಗೆ ಪಡೆಯಲು ಕೋರಿದ್ದ ಪ್ರಕರಣದಲ್ಲಿ ಉತ್ತರಪ್ರದೇಶದ ನ್ಯಾಯಾಧೀಶರ ಧೋರಣೆಯ ಬಗ್ಗೆ ಡೆತ್‌ನೋಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯಾಯಾಧೀಶರು ಪಕ್ಷಪಾತವಾಗಿ ವರ್ತಿಸುತ್ತಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ನನ್ನ ಚಿತಾಭಸ್ಮವನ್ನು ನೀರಿಗೆ ಬಿಡಬೇಡಿ. ನ್ಯಾಯ ಸಿಗದೇ ಹೋದರೆ ಚಿತಾಭಸ್ಮವನ್ನು ನ್ಯಾಯಾಲಯದ ಮುಂದಿರುವ ಚರಂಡಿಗೆ ಸುರಿಯಿರಿ. ಏಕೆಂದರೆ ಈ ದೇಶದಲ್ಲಿ ಮನುಷ್ಯನ ಜೀವನ ಚರಂಡಿಯಾಗಿದೆ ಎಂದು ನೋವು ತೋಡಿಕೊಂಡಿದ್ದರು.
ಆತ್ಮಹತ್ಯೆಗೂ ಎರಡು ದಿನ ವೇಳಾಪಟ್ಟಿ
ಅತುಲ್ ಸುಭಾಷ್ ಆತ್ಮಹತ್ಯೆೆ ಮಾಡಿಕೊಳ್ಳುವ ಮೊದಲು ಏನೇಲ್ಲ ಕೆಲಸ ಮಾಡಬೇಕು. ಯಾರಿಗೆಲ್ಲ ಕರೆ ಮಾಡಬೇಕು ಎಂಬ ಬಗ್ಗೆ ಎರಡು ದಿನಗಳ ವೇಳಾಪಟ್ಟಿ ಸಿದ್ದಪಡಿಸಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾವಿಗೂ ಮುನ್ನ ಸ್ನಾನ ಮಾಡಬೇಕು, ಕಿಟಕಿ ತೆಗೆಯಬೇಕು, ಗೇಟ್ ಲಾಕ್ ಮಾಡಬೇಕು. 100 ಬಾರಿ ಶಿವನಾಮ ಜಪಿಸಬೇಕು. ಪ್ರಿಡ್ಜ್ ಮೇಲೆ ರೂಂ, ಕಾರು, ಬೈಕ್ ಕೀ ಇಡಬೇಕು. ಡೆತ್ ನೋಟ್ ಟೇಬಲ್ ಮೇಲೆ ಇಡಬೇಕು. ಜೊತೆಗೆ ಹೈಕೋರ್ಟ್, ಸುಪ್ರೀಂಕೋರ್ಟ್, ಕಚೇರಿ, ಕುಟುಂಬಸ್ಥರಿಗೆ ಇ ಮೇಲ್ ಕಳಿಸಬೇಕು ಎಂದು ಪಟ್ಟಿ ಮಾಡಿಕೊಂಡಿದ್ದಾರೆ.
ಹಣಕಾಸಿನ ವಿಚಾರ ಪೂರ್ಣಗೊಳಿಸಬೇಕು. ಕಚೇರಿ ಕೆಲಸ ಮುಗಿಸಬೇಕು. ಕಾನೂನಾತ್ಮಕ ತಯಾರಿ ಮುಗಿಸಬೇಕು. ಮುಖ್ಯ ದಾಖಲೆಗಳನ್ನು ಪ್ಯಾಕ್ ಮಾಡಬೇಕು. ಆ ನಂತರ ಕೊನೇ ದಿನದ ಆರಂಭಕ್ಕೆೆ ತಯಾರಾಗಬೇಕು ಎನ್ನುವುದು ಮೊದಲ ದಿನದ ವೇಳಾಪಟ್ಟಿಯಲ್ಲಿದೆ.
ಇನ್ನು ಕೊನೆಯ ದಿನ ವೀಡಿಯೋ ಅಪ್‌ಲೋಡ್ ಮಾಡಬೇಕು. ಮೊಬೈಲ್‌ನಿಂದ ಫಿಂಗರ್ ಪ್ರಿಂಟ್, ಫೇಸ್ ರೆಕಗ್ನೇಷನ್ ಅಳಿಸಬೇಕು. ಲ್ಯಾಪ್‌ಟಾಪ್, ಚಾರ್ಜರ್, ಕಚೇರಿಯ ಐಡಿಯನ್ನು ಕಚೇರಿಗೆ ಕೊಡಬೇಕು. ಡೆತ್‌ನೋಟ್ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು. ಎಲ್ಲಾ ಬಾಕಿ ಪೇಮೆಂಟ್ ಪೂರ್ಣಗೊಳಿಸಬೇಕು. ಹಗ್ಗದ ಕುಣಿಕೆ ತಯಾರು ಮಾಡಬೇಕು. ನಂತರ ಕುಣಿಕೆಗೆ ಕೊರಲೊಡ್ಡಬೇಕು ಎಂಬುದು ಸಾವಿನ ದಿನ ವೇಳಾಪಟ್ಟಿಯಲ್ಲಿದೆ. ಅತುಲ್ ಕುಟುಂಬ ಸದಸ್ಯರ ಸಮ್ಮುಖದಲ್ಲೇ ಡೆತ್‌ನೋಟ್ ತೆರೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.