
ಮೆಟ್ಟಿಲಲ್ಲೇ ತೀರ್ಮಾನವಾಗಲಿ..: ಎಸ್ಐಟಿ ಮುಖ್ಯಸ್ಥರ ಬದಲಾವಣೆಗೆ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಒತ್ತಾಯ
ಪ್ರಕರಣದ ಹಿಂದಿನ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, "ಈ ದೂರಿನ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದು ಎಡಪಂಥೀಯರ ಚಳುವಳಿಯ ಭಾಗವಾಗಿರಬಹುದು" ಎಂದು ಆರೋಪಿಸಿದರು.
ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಮತ್ತು ಪ್ರಕರಣದ ದೂರಿನ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರು ಹಲವು ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಎಸ್ಐಟಿ ಮುಖ್ಯಸ್ಥರಾಗಿರುವ ಪ್ರಣಬ್ ಮೊಹಂತಿ ಅವರನ್ನು ತಕ್ಷಣವೇ ಬದಲಾಯಿಸಬೇಕೆಂದು ಆಗ್ರಹಿಸಿರುವ ಅವರು, ಇಡೀ ಪ್ರಕರಣದ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.
ಪೂರ್ತಿ ವಿಡಿಯೊವನ್ನು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಿ
'ದ ಫೆಡರಲ್ ಕರ್ನಾಟಕ' ಜೊತೆ ಮಾತನಾಡಿದ ಅನುಪಮಾ ಶೆಣೈ, ಎಸ್ಐಟಿ ಮುಖ್ಯಸ್ಥರ ನೇಮಕದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ಈ ಹಿಂದೆ ಪೊಲೀಸ್ ಅಧಿಕಾರಿ ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಣಬ್ ಮೊಹಂತಿ ಅವರ ಹೆಸರು ಕೂಡ ಉಲ್ಲೇಖವಾಗಿತ್ತು. ಇಂತಹ ಹಿನ್ನೆಲೆಯುಳ್ಳ ಅಧಿಕಾರಿಯು ಈ ಸೂಕ್ಷ್ಮ ಪ್ರಕರಣದ ತನಿಖೆಯ ಮುಖ್ಯಸ್ಥರಾಗಿರುವುದು ಸರಿಯಲ್ಲ. ಹಾಗಾಗಿ ಅವರನ್ನು ತಕ್ಷಣ ಬದಲಾವಣೆ ಮಾಡಬೇಕು" ಎಂದು ಅವರು ಒತ್ತಾಯಿಸಿದರು.
'ಕಾಂತಾರ' ಡೈಲಾಗ್ ಮೂಲಕ ಎಚ್ಚರಿಕೆ
ಪ್ರಕರಣದ ಹಿಂದಿನ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, "ಈ ದೂರಿನ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದು ಎಡಪಂಥೀಯರ ಚಳುವಳಿಯ ಭಾಗವಾಗಿರಬಹುದು" ಎಂದು ಆರೋಪಿಸಿದರು. ಇದೇ ವೇಳೆ, "ತೀರ್ಪು ನ್ಯಾಯಾಲಯದಲ್ಲಿ ಅಲ್ಲ, ನ್ಯಾಯಾಲಯದ ಮೆಟ್ಟಿಲುಗಳ ಮೇಲೆ" ಎಂಬ 'ಕಾಂತಾರ' ಸಿನಿಮಾದ ಪ್ರಸಿದ್ಧ ಸಂಭಾಷಣೆಯನ್ನು ಉಲ್ಲೇಖಿಸಿ ಅವರು ಪರೋಕ್ಷ ಎಚ್ಚರಿಕೆ ನೀಡಿದರು.
ದೈವದ ಮೊರೆ ಹೋಗಲು ಸಲಹೆ
ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಶೆಣೈ, "ದೈವದ ವಿಚಾರವನ್ನು ಹೆಚ್ಚು ಕೆಣಕಲು ಹೋಗಬಾರದು. ಈ ಪ್ರಕರಣದಿಂದ ಅಣ್ಣಪ್ಪ ದೈವಕ್ಕೆ ಏನಾದರೂ ಅಪಚಾರವಾಗಿದೆಯೇ ಎಂಬುದನ್ನು ತಿಳಿಯಲು ದೈವದ ನುಡಿ ಕೇಳಿಸುವುದು ಉತ್ತಮ. ದೈವದ ಮೇಲೆ ನಂಬಿಕೆ ಇದ್ದರೆ, ದೂರುದಾರರು ಮತ್ತು ಅವರ ವಕೀಲರು ದೈವದ ನುಡಿ ಹೇಳಿಸುವಾಗ ಹಾಜರಿರಲಿ" ಎಂದು ಸವಾಲು ಹಾಕಿದರು. ಇದೇ ವೇಳೆ, ತಾವು ಯಾವುದೇ ಸಿದ್ಧಾಂತಕ್ಕೆ ಬದ್ಧರಲ್ಲ, ಎಡಪಂಥೀಯರೂ ಅಲ್ಲ, ಬಲಪಂಥೀಯರೂ ಅಲ್ಲ ಎಂದು ಅನುಪಮಾ ಶೆಣೈ ಸ್ಪಷ್ಟಪಡಿಸಿದರು.