ಪ್ರಜ್ವಲ್​ ರೇವಣ್ಣಗೆ ಜೀವಾವಧಿ ಶಿಕ್ಷೆ; ಪ್ರಕರಣದ ಆರಂಭದಿಂದ ಇಲ್ಲಿಯವರೆಗಿನ ಘಟನಾವಳಿಗಳ ವಿವರ ಇಲ್ಲಿದೆ
x

ಪ್ರಜ್ವಲ್​ ರೇವಣ್ಣಗೆ ಜೀವಾವಧಿ ಶಿಕ್ಷೆ; ಪ್ರಕರಣದ ಆರಂಭದಿಂದ ಇಲ್ಲಿಯವರೆಗಿನ ಘಟನಾವಳಿಗಳ ವಿವರ ಇಲ್ಲಿದೆ

ಪ್ರಜ್ವಲ್ ವಿದೇಶಕ್ಕೆ ಪಲಾಯನ ಮಾಡಿದ ಬಳಿಕ ನಂತರ ಬಂಧನಕ್ಕೊಳಗಾಗಿದ್ದು ಸುದೀರ್ಘ ಕಾನೂನು ಹೋರಾಟದ ನಂತರ ನ್ಯಾಯಾಲಯವು ಅವರನ್ನು ದೋಷಿ ಎಂದು ತೀರ್ಪು ನೀಡಿತು.


ಹಾಸನ ಕ್ಷೇತ್ರದ ಮಾಜಿ ಸಂಸದ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವು ಕರ್ನಾಟಕದ ರಾಜಕೀಯದಲ್ಲಿ ಭಾರೀ ಸಂಚಲನ ಉಂಟುಮಾಡಿತ್ತು. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸಾವಿರಾರು ಅಶ್ಲೀಲ ವಿಡಿಯೋಗಳು ಬಹಿರಂಗಗೊಳ್ಳುವುದರೊಂದಿಗೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಇದು ರಾಜ್ಯಾದ್ಯಂತ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿ ತನಿಖೆ ನಡೆಸಿತ್ತು.

ಪ್ರಜ್ವಲ್ ವಿದೇಶಕ್ಕೆ ಪಲಾಯನ ಮಾಡಿದ ಬಳಿಕ ನಂತರ ಬಂಧನಕ್ಕೊಳಗಾಗಿದ್ದು ಸುದೀರ್ಘ ಕಾನೂನು ಹೋರಾಟದ ನಂತರ ನ್ಯಾಯಾಲಯವು ಅವರನ್ನು ದೋಷಿ ಎಂದು ತೀರ್ಪು ನೀಡಿತು. ಈ ಸಂಚಲನಾತ್ಮಕ ಪ್ರಕರಣದ ಸಂಪೂರ್ಣ ಘಟನಾವಳಿಗಳು ಈ ಕೆಳಗಿನಂತಿದೆ.

ಏಪ್ರಿಲ್ 27, 2024: 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದೆ ಎನ್ನಲಾದ ಹಲವಾರು ಅಶ್ಲೀಲ ವಿಡಿಯೋಗಳು ಸಾರ್ವಜನಿಕವಾಗಿ ಕಾಣಿಸಿಕೊಂಡವು. ಈ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಹರಿದಾಡಲು ಪ್ರಾರಂಭಿಸಿದ ನಂತರ, ಕರ್ನಾಟಕ ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿತು. ಅದೇ ದಿನ, ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ ಪಲಾಯನ ಮಾಡಿದರು.

ಏಪ್ರಿಲ್ 28, 2024: ಪ್ರಜ್ವಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ, ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಯಿತು. ಈ ಪ್ರಕರಣವನ್ನು ತಕ್ಷಣವೇ ಎಸ್ಐಟಿ ತನಿಖೆಗೆ ವಹಿಸಲಾಯಿತು.

ಏಪ್ರಿಲ್ 29, 2024: ದೂರು ನೀಡಿದ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಪ್ರಜ್ವಲ್ ಅವರ ಪೋಷಕರ ವಿರುದ್ಧ ಮಹಿಳೆಯನ್ನು ಅಪಹರಿಸಿರುವ ಆರೋಪ ಕೇಳಿಬಂತು.

ಏಪ್ರಿಲ್ 30, 2024: ಜನತಾದಳ (ಜಾತ್ಯತೀತ) ಪಕ್ಷವು ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತು ಮತ್ತು ಎಸ್ಐಟಿ ತನಿಖೆಯನ್ನು ಸ್ವಾಗತಿಸುವುದಾಗಿ ಘೋಷಿಸಿತು.

ಮೇ 2, 2024: ಪೊಲೀಸರು ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪದ ಮೇಲೆ ಮತ್ತೊಂದು ಪ್ರಕರಣ ದಾಖಲಿಸಿಕೊಂಡರು. ತಲೆಮರೆಸಿಕೊಂಡಿದ್ದ ಅವರನ್ನು ಪತ್ತೆಹಚ್ಚಲು ಲುಕ್ಔಟ್ ನೋಟಿಸ್ ಜಾರಿಗೊಳಿಸಿತ್ತು.

ಮೇ 4, 2024: ಎಸ್ಐಟಿ ಅಧಿಕಾರಿಗಳು ಹೊಳೆನರಸೀಪುರದ ತೋಟದ ಮನೆಯೊಂದರಲ್ಲಿ ಅಪಹರಣಕ್ಕೊಳಗಾಗಿದ್ದ ದೂರುದಾರ ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಿದ್ದರು.

ಮೇ 30, 2024: ಸುಮಾರು ಒಂದು ತಿಂಗಳ ನಂತರ, ಪ್ರಜ್ವಲ್ ರೇವಣ್ಣ ಅವರು ಭಾರತಕ್ಕೆ ಹಿಂದಿರುಗುವ ಪ್ರಕ್ರಿಯೆಯನ್ನು ಆರಂಭಿಸಿದ್ದರು.

ಮೇ 31, 2024: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿ, ತಮ್ಮ ವಶಕ್ಕೆ ಪಡೆದಿದ್ದರು.

ಜೂನ್ 26, 2024: ಮಾಜಿ ಮತ್ತು ಹಾಲಿ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ಸೆಷನ್ಸ್ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಜುಲೈ 5, 2024: ಜಾಮೀನು ನಿರಾಕರಣೆಯ ನಂತರ, ಪ್ರಜ್ವಲ್ ರೇವಣ್ಣ ಕರ್ನಾಟಕ ಹೈಕೋರ್ಟ್​ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ, ಹೈಕೋರ್ಟ್ ಎಸ್ಐಟಿಯಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು.

ಆಗಸ್ಟ್ 23, 2024: ಎಸ್ಐಟಿ, ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಮತ್ತು ಅವರ ತಂದೆ ಎಚ್.ಡಿ. ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣದ ಮೊದಲ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು

ಸೆಪ್ಟೆಂಬರ್ 9, 2024: ತನಿಖಾ ತಂಡವು 113 ಸಾಕ್ಷಿಗಳನ್ನು ಒಳಗೊಂಡ 1,632 ಪುಟಗಳ ಎರಡನೇ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.

ಅಕ್ಟೋಬರ್ 21, 2024: ಕರ್ನಾಟಕ ಹೈಕೋರ್ಟ್, ಎರಡು ಅತ್ಯಾಚಾರ ಪ್ರಕರಣಗಳು ಮತ್ತು ಒಂದು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ಅವರ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ತಿರಸ್ಕರಿಸಿತ್ತು.

ನವೆಂಬರ್ 2, 2024: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯೊಬ್ಬರ ಒಳ ಉಡುಪುಗಳಲ್ಲಿ ಪ್ರಜ್ವಲ್ ರೇವಣ್ಣ ಅವರ ಡಿಎನ್ಎ ಪತ್ತೆಯಾಗಿರುವುದು ವೈಜ್ಞಾನಿಕವಾಗಿ ದೃಢಪಟ್ಟಿತ್ತು.

ನವೆಂಬರ್ 11, 2024: ಸುಪ್ರೀಂ ಕೋರ್ಟ್ ಕೂಡ ಪ್ರಜ್ವಲ್ ಅವರ ಜಾಮೀನು ಅರ್ಜಿಯನ್ನು ರದ್ದುಗೊಳಿಸಿತು. ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಿ ವಿಚಾರಣೆಗೆ ಹಾನಿಯುಂಟು ಮಾಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಜನವರಿ 16, 2025: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ವರದಿಯ ಭಾಗವಾಗಿರುವ ಸಂಪೂರ್ಣ ಡಿಜಿಟಲ್ ಡೇಟಾದ ಕ್ಲೋನ್ ಮಾಡಿದ ಪ್ರತಿಯನ್ನು ನೀಡುವಂತೆ ಕೋರಿ ಪ್ರಜ್ವಲ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.

ಮೇ 1, 2025: ಪ್ರಜ್ವಲ್ ಅವರಿಗೆ ಹೊಸ ವಕೀಲರನ್ನು ನೇಮಿಸಲು ಸಾಕಷ್ಟು ಸಮಯ ನೀಡುವವರೆಗೆ ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಮುಂದೂಡಬೇಕೆಂದು ಅವರ ತಾಯಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ಮೇ 2, 2025: ಮಾಜಿ ಮನೆ ಕೆಲಸದಾಕೆ ಪ್ರಜ್ವಲ್ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆಯು ವಿಶೇಷ ಸೆಷನ್ಸ್ ನ್ಯಾಯಾಲಯದಲ್ಲಿ ಆರಂಭವಾಗಿತ್ತು.

ಜುಲೈ 18, 2025: ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪನ್ನು ಜುಲೈ 30ಕ್ಕೆ ನಿಗದಿಪಡಿಸಲಾಯಿತು.

ಜುಲೈ 30, 2025: ವಿಶೇಷ ನ್ಯಾಯಾಲಯವು ಕೆಲವು ಸ್ಪಷ್ಟೀಕರಣಗಳು ಮತ್ತು ದಾಖಲೆಗಳನ್ನು ಕೋರಿ, ತೀರ್ಪನ್ನು ಆಗಸ್ಟ್ 1ಕ್ಕೆ ಮುಂದೂಡಿತ್ತು.

ಆಗಸ್ಟ್ 1, 2025: ವಿಶೇಷ ನ್ಯಾಯಾಲಯವು ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಘೋಷಿಸಿ, ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 2 ರಂದು ಪ್ರಕಟಿಸುವುದಾಗಿ ಆದೇಶಿಸಿತ್ತು.

ಆಗಸ್ಟ್ 2, 2025: ನ್ಯಾಯಾಲಯವು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಿ ಅಂತಿಮ ತೀರ್ಪು ನೀಡಿದೆ.

Read More
Next Story