
ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ಆತ್ಮಹತ್ಯೆ; ಕಾರಣ ನಿಗೂಢ
ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಕೆ.ಜಿ ಪ್ರತಾಪ್ ಕುಮಾರ್ (41) ವಿಷ ಸೇವಿಸಿ ಆತ್ಯಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬಿ.ಸಿ ಪಾಟೀಲ್ ಹಿರಿಯ ಪುತ್ರಿ ಸೌಮ್ಯ ಅವರ ಪತಿಯಾಗಿರುವ ಪ್ರತಾಪ್ ಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದು, ʻʻಮಧ್ಯಾಹ್ನ ಎರಡೂವರೆ ಗಂಟೆಗೆ ವಾಹನದಲ್ಲಿ ವಿಷ ಕುಡಿದಿರುವುದು ಕಂಡು ಬಂದಿದೆ. ವೈಯಕ್ತಿಕ ಕಾರಣದಿಂದ ಸಾವನ್ನಪ್ಪಿದ್ದಾರೆ ಎನ್ನುವ ಶಂಕೆ ಇದೆ. ಶಿವಮೊಗ್ಗದಿಂದ ಕತ್ತಲೆಗೆರೆಗೆ ಬರುತ್ತಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಅವರು ವಿಷ ಸೇವನೆ ಮಾಡಿದ ವಿಚಾರವನ್ನು ಪ್ರತಾಪ್ ಅವರ ಅಣ್ಣ ಪ್ರಭು ಎನ್ನುವವರು ಮಾಹಿತಿ ನೀಡಿದ್ದರು. ಕಾರಿನಲ್ಲಿ ಪ್ರತಾಪ್ ಕುಮಾರ್ ಒಬ್ಬರೇ ಇದ್ದರು. ಇಲ್ಲಿಯವರೆಗೆ ಡೆತ್ ನೋಟ್ ಸಿಕ್ಕಿಲ್ಲ. ತನಿಖೆ ನಂತರ ಸಾವಿನ ಬಗ್ಗೆ ನಿಖರ ಕಾರಣ ಗೊತ್ತಾಗಲಿದೆʼʼ ಎಂದು ತಿಳಿಸಿದ್ದಾರೆ.
ಪ್ರತಾಪ್ ಕುಮಾರ್ ಕೆ.ಜಿ ಅವರು ಬಿ.ಸಿ ಪಾಟೀಲ್ ಪತ್ನಿ ವನಜಾ ಅವರ ಸಹೋದರನಾಗಿದ್ದಾನೆ. ಗಂಡು ಮಕ್ಕಳು ಇಲ್ಲದ ಕಾರಣ ಬಿ ಸಿ ಪಾಟೀಲ್ ದಂಪತಿ ತಮ್ಮ ಹಿರಿಯ ಪುತ್ರಿ ಸೌಮ್ಯಳನ್ನು ಆಕೆಯ ಸೋದರ ಮಾವನಿಗೇ ಮದುವೆ ಮಾಡಿಕೊಟ್ಟಿದ್ದರು. ಬಿ.ಸಿ ಪಾಟೀಲ್ ಅವರ ಕೃಷಿಗೆ ಸಂಬಂಧಿಸಿದ ವ್ಯವಹಾರವನ್ನು ಪ್ರತಾಪ್ ಕುಮಾರ್ ನೋಡಿಕೊಳ್ಳುತ್ತಿದ್ದರು.