ವಾಲ್ಮೀಕಿ ನಿಗಮ ಹಗರಣ | ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ಮಂಜುಳಾ ಇಡಿ ವಶಕ್ಕೆ
x
ಮಾಜಿ ಸಚಿವ ಬಿ.ನಾಗೇದ್ರ ಅವರ ಪತ್ನಿಯನ್ನು ಇಡಿ ವಶಕ್ಕೆ ಪಡೆದುಕೊಂಡಿದೆ.

ವಾಲ್ಮೀಕಿ ನಿಗಮ ಹಗರಣ | ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ಮಂಜುಳಾ ಇಡಿ ವಶಕ್ಕೆ

ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ವಶಕ್ಕೆ ಪಡೆದುಕೊಂಡಿದೆ.


ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ.

ಬೆಂಗಳೂರಿನ ಡಾಲರ್ಸ್ ಕಾಲನಿಯ ನಿವಾಸದಿಂದ ಮಂಜುಳಾ ಅವರನ್ನು ಬುಧವಾರ ಬೆಳಿಗ್ಗೆ ವಶಕ್ಕೆ ಪಡೆದುಕೊಂಡಿರುವ ಇಡಿ ಅಧಿಕಾರಿಗಳು, ಶಾಂತಿನಗರದಲ್ಲಿರುವ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

ಜು.12ರಂದು ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮೇಲೆ ಇಡಿ ದಾಳಿ ನಡೆಸಿದ್ದು, ಸುಮಾರು 20 ಗಂಟೆಗಳ ಕಾಲ ತಪಾಸಣೆ ನಡೆಸಿತ್ತು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ವಶಕ್ಕೆ ಪಡೆದಿದ್ದರು. ಸದ್ಯ ನಾಗೇಂದ್ರ ಅವರು ಇಡಿ ನಡೆಸಿದ ಸುದೀರ್ಘ ವಿಚಾರಣೆಯ ಬಳಿಕ ಅವರನ್ನು ಬಂಧಿಸಲಾಗಿತ್ತು.

ಮೇ 21 ರಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅಕ್ರಮ ಹಣ ವರ್ಗಾವಣೆಯ ಹಗರಣ ಬೆಳಕಿಗೆ ಬಂದಿತ್ತು. ಸರ್ಕಾರಿ ಸ್ವಾಮ್ಯದ ನಿಗಮದ ಬ್ಯಾಂಕ್ ಖಾತೆಯಿಂದ 187 ಕೋಟಿ ರೂ.ಗಳನ್ನು ಅನಧಿಕೃತವಾಗಿ ವರ್ಗಾಯಿಸಲಾಗಿದೆ ಎಂದು ಚಂದ್ರಶೇಖರನ್ ಅವರ ಮರಣ ಪತ್ರದಲ್ಲಿ ಬರೆದಿದ್ದರು.

ಹಲವಾರು ಐಟಿ ಕಂಪನಿಗಳು ಮತ್ತು ಹೈದರಾಬಾದ್ ಮೂಲದ ಸಹಕಾರಿ ಬ್ಯಾಂಕಿನ ಖಾತೆಗಳಿಗೆ 88.62 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮಾಜಿ ಸಚಿವರಿಗೆ ಸೇರಿದ ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿತ್ತು. ನಿಗಮದ ಖಾತೆಗಳಿಂದ ಇತರ ಬ್ಯಾಂಕ್ ಖಾತೆಗಳಿಗೆ ಹಲವಾರು ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಚಂದ್ರಶೇಖರನ್ ಬರೆದಿರುವ ಮರಣ ಪತ್ರದಲ್ಲಿ ಆರೋಪಿಸಲಾಗಿದೆ. ನಂತರ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಿ.ನಾಗೇಂದ್ರ ಅವರು ಜೂನ್ 6 ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಕಾಂಗ್ರೆಸ್ ಸರ್ಕಾರವು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಇಡಿ ದಾಳಿ

ಮಾಜಿ ಸಚಿವ ನಾಗೇಂದ್ರ ಅವರ ಮನೆ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆಯ ಮೇಲೆ ಇಡಿ ಅಧಿಕಾರಿಗಳು ಕಳೆದ ವಾರ ದಾಳಿ ಮಾಡಿದ್ದರು.

ನಾಗೇಂದ್ರ ಅವರ ಆಪ್ತ ಸಹಾಯಕರನ್ನು ಕರೆದು ವಿಚಾರಣೆ ಮಾಡಿದ್ದರು. ಆಪ್ತ ಸಹಾಯಕರ ವಿಚಾರಣೆ ಮಾಡಿದ ಬೆನ್ನಲ್ಲೇ ಮಾಜಿ ಸಚಿವ ನಾಗೇಂದ್ರ ಅವರನ್ನೂ ವಶಕ್ಕೆ ಪಡೆಯಲಾಗಿತ್ತು. ಇದೀಗ ಬುಧವಾರ ಅವರ ಪತ್ನಿ ಮಂಜುಳಾ ಅವರನ್ನೂ ಇಡಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ.

ವಾಲ್ಮೀಕಿ ನಿಗಮ ಮಂಡಳಿಯಲ್ಲಿ ನಡೆದ 187 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಪತ್ನಿ ಹಾಗೂ ಕುಟುಂಬಸ್ಥರ ಅಕೌಂಟ್ ಪರಿಶೀಲನೆ ಮಾಡಲಾಗಿದೆ. ಈ ವೇಳೆ ನಾಗೇಂದ್ರ ಪತ್ನಿಯ ಬ್ಯಾಂಕ್ ಖಾತೆಯಲ್ಲಿಯೂ ಹೆಚ್ಚುವರಿಯಾಗಿ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಾಗೇಂದ್ರ ಪತ್ನಿ ಮಂಜುಳಾ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Read More
Next Story