Ex-Minister Anjaneya Urges CM to Implement Internal Reservation Report in Tomorrow’s Cabinet Meeting
x
ಮಾಜಿ ಸಚಿವ ಎಚ್. ಆಂಜನೇಯ 

'ನಾಳೆಯ ಸಂಪುಟ ಸಭೆಯಲ್ಲೇ ಒಳ ಮೀಸಲಾತಿ ವರದಿ ಜಾರಿ ಮಾಡಿ': ಸಿಎಂಗೆ ಮಾಜಿ ಸಚಿವ ಆಂಜನೇಯ ಪತ್ರ

"ಈ ವರ್ಗೀಕರಣದ ಬಗ್ಗೆ ಕೆಲವು ಜಾತಿಗಳಲ್ಲಿ ಮೂಡಿರುವ ಗೊಂದಲಗಳನ್ನು ನಿವಾರಿಸಿ, ಮಂಗಳವಾರದ ಸಂಪುಟ ಸಭೆಯಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಬೇಕು," ಎಂದು ಅವರು ಮನವಿ ಮಾಡಿದ್ದಾರೆ.


ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಮತ್ತು ನ್ಯಾಯಮೂರ್ತಿ ನಾಗಮೋಹನ್​ದಾಸ್​ ಆಯೋಗಗಳು ಸಲ್ಲಿಸಿರುವ ವರದಿಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ಆಗಸ್ಟ್ 19ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲೇ ಕೈಗೊಳ್ಳಬೇಕು ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ಭಾನುವಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, "ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನೀಡಿದ ತಕ್ಷಣ, ಎಷ್ಟೇ ಒತ್ತಡಗಳು ಬಂದರೂ ಅದಕ್ಕೆ ಮಣಿಯದೆ, 101 ಪರಿಶಿಷ್ಟ ಜಾತಿಗಳ ಸಮಗ್ರ ದತ್ತಾಂಶ ಸಂಗ್ರಹಕ್ಕಾಗಿ ನೀವು ನ್ಯಾಯಮೂರ್ತಿ ನಾಗಮೋಹನ್​​ದಾಸ್ ಆಯೋಗವನ್ನು ರಚಿಸಿದ್ದೀರಿ. ಆ ಆಯೋಗವು ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಹಿಂದುಳಿದಿರುವಿಕೆಯನ್ನು ಆಧಾರವಾಗಿಟ್ಟುಕೊಂಡು ಜಾತಿಗಳನ್ನು ಐದು ಗುಂಪುಗಳಾಗಿ ವಿಂಗಡಿಸಿ ಮೀಸಲಾತಿಯನ್ನು ಹಂಚಿಕೆ ಮಾಡಿದೆ," ಎಂದು ನೆನಪಿಸಿದ್ದಾರೆ.

"ಈ ವರ್ಗೀಕರಣದ ಬಗ್ಗೆ ಕೆಲವು ಜಾತಿಗಳಲ್ಲಿ ಮೂಡಿರುವ ಗೊಂದಲಗಳನ್ನು ನಿವಾರಿಸಿ, ಮಂಗಳವಾರದ ಸಂಪುಟ ಸಭೆಯಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಬೇಕು," ಎಂದು ಅವರು ಮನವಿ ಮಾಡಿದ್ದಾರೆ.

ಇದೇ ವೇಳೆ, ಹೊಲೆಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, "ಪ್ರಜ್ಞಾವಂತರಾಗಿರುವ, ಹಾಗೂ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಸ್ಥಿತಿಗತಿಗಳಲ್ಲಿ ಮಾದಿಗ ಸಮುದಾಯಕ್ಕಿಂತಲೂ ಮುಂದಿರುವ ನಮ್ಮ ಸಹೋದರ ಹೊಲೆಯ ಸಮುದಾಯದವರು, ಒಳ ಮೀಸಲಾತಿ ವರ್ಗೀಕರಣವನ್ನು ಸಂವಿಧಾನದ ದೃಷ್ಟಿಕೋನದಿಂದ ನೋಡಬೇಕು. ಇದನ್ನು ಯಾವುದೇ ವೈಯಕ್ತಿಕ ನೆಲೆಯಲ್ಲಿ ಪರಿಶೀಲಿಸುವುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತಕ್ಕೆ ವಿರುದ್ಧವಾದ ನಡೆಯಾಗುತ್ತದೆ," ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Read More
Next Story