ಗನ್‌ ತೋರಿಸಿ ಅತ್ಯಾಚಾರ! | ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು FIR ದಾಖಲು
x

ಗನ್‌ ತೋರಿಸಿ ಅತ್ಯಾಚಾರ! | ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು FIR ದಾಖಲು


ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಗನ್‌ ತೋರಿಸಿ ತಮ್ಮ ಮೇಲೆ ಅತ್ಯಾಚಾರ ಎಸಗಿ, ಅತ್ಯಾಚಾರವನ್ನು ಚಿತ್ರೀಕರಿಸಿಕೊಂಡು ಮೂರು ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ಸಾರ್ವಜನಿಕ ರಂಗದಲ್ಲಿರುವ ಮಹಿಳೆಯೊಬ್ಬರು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಂದೆ ದೂರು ದಾಖಲಿಸಿದ್ದಾರೆ.

ಸುಮಾರು 40 ವರ್ಷ ವಯಸ್ಸಿನ ಮಹಿಳೆ ನೀಡಿರುವ ದೂರಿನಲ್ಲಿ, ಪ್ರಜ್ವಲ್ ರೇವಣ್ಣ ತಮ್ಮ ಮೇಲೆ 3 ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ನಮ್ಮ ದೈಹಿಕ ಸಂಪರ್ಕದ ಸನ್ನಿವೇಶಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಹೇಳಿ ಬೆದರಿಸಿ ಪದೇಪದೆ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಸಿಐಡಿ ಅಧಿಕಾರಿಗಳ ಎದುರು ನೋವು ತೋಡಿಕೊಂಡಿದ್ದಾರೆ.

ಜನವರಿ 1, 2021 ಮತ್ತು ಏಪ್ರಿಲ್ 25, 2024 ರ ನಡುವೆ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದು, ಲೈಂಗಿಕವಾಗಿ ಕಿರುಕುಳ ನೀಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ಸಿಐಡಿ ಬಳಿ ಮೇ 1 ರಂದು ಪ್ರಕರಣ ದಾಖಲಿಸಿದ್ದು, ಈ ಮೂಲಕ ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐಆರ್ ದಾಖಲಾಗಿದೆ.

ದೂರಿನಲ್ಲಿ ಏನಿದೆ?

"2021ರಲ್ಲಿ ಸರ್ಕಾರಿ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಸೀಟು ಕೊಡಿಸಲು ತಾನು ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಭೇಟಿಯಾಗಲು ತೆರಳಿದ್ದೆ. ನಾನು ಸಂಸದ ಪ್ರಜ್ವಲ್ ರೇವಣ್ಣ ಕ್ವಾರ್ಟರ್ಸ್‌ನಲ್ಲಿ ಅವರನ್ನು ಭೇಟಿ ಮಾಡಿದ್ದೆ. ಪ್ರಜ್ವಲ್ ರೇವಣ್ಣ ಮೊದಲ ದಿನ ನನ್ನನ್ನು ಭೇಟಿ ಮಾಡಲಿಲ್ಲ. ಮರುದಿನ ಹಾಸನದ ಎಂಪಿ ನಿವಾಸಕ್ಕೆ ಪ್ರಜ್ವಲ್ ರೇವಣ್ಣ ತಮ್ಮನ್ನು ಕರೆಸಿಕೊಂಡರು. ನೆಲ ಮಹಡಿಯಲ್ಲಿ ಹೆಚ್ಚಿನ ಜನ ಇದ್ದದ್ದರಿಂದ ಮೇಲ್ಮಹಡಿಯಲ್ಲಿ ಕಾಯುವಂತೆ ಹೇಳಿದ್ದಾರೆ. ಮೆಲ್ಮಹಡಿಯಲ್ಲಿ ಇನ್ನೂ ಕೆಲ ಮಹಿಳೆಯರು ಇದ್ದರು. ಅವರ ಜೊತೆ ಕಾಯುವಂತೆ ಪ್ರಜ್ವಲ್​ ರೇವಣ್ಣ ಹೇಳಿದರು".

"ಸ್ವಲ್ಪ ಸಮಯದ ನಂತರ ಮೇಲೆ ಬಂದ ಪ್ರಜ್ವಲ್ ರೇವಣ್ಣ ಮೊದಲು ಬಂದಿದ್ದ ಮಹಿಳೆಯರನ್ನು ಮಾತಾಡಿಸಿ ಕಳುಹಿಸಿದ್ದಾರೆ. ನಂತರ ನನ್ನನ್ನು ಕೋಣೆಯೊಳೆಗೆ ಕರೆದು, ಬಾಗಿಲು ಹಾಕಿ ಕೈ ಹಿಡಿದು ಎಳೆದು ಮೈಮೆಲೆ ಎಳೆದುಕೊಂಡರು. ಕೂಗಿಕೊಳ್ಳುವುದಾಗಿ ಹೇಳಿದಾಗ, ಪ್ರಜ್ವಲ್​ ರೇವಣ್ಣ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನಿನ್ನ ಗಂಡ ಜಾಸ್ತಿ ಮಾತಾಡುತ್ತಾನೆ ಸುಮ್ಮನೆ ಇರಲು ಹೇಳು ಎಂದು ಬೆದರಿಸಿದರು. ಅಲ್ಲದೆ ನೀನು ರಾಜಕೀಯವಾಗಿ ಬೆಳೆಯಬೇಕಾದರೆ ನಾನು ಹೇಳಿದಂತೆ ಕೇಳು ಎಂದು ಹೇಳಿದರು".

"ನಂತರ, ಅವರು ನನ್ನ ಬಟ್ಟೆಗಳನ್ನು ಬಿಚ್ಚಲು ನನ್ನನ್ನು ಕೇಳಿದರು ಮತ್ತು ನಾನು ಅದಕ್ಕೆ ನಿರಾಕರಿಸಿದೆ. ನಾನು ಸಹಾಯಕ್ಕಾಗಿ ಕಿರುಚುತ್ತೇನೆ ಎಂದು ಹೇಳಿದೆ. ನಂತರ ಪ್ರಜ್ವಲ್ ತಮ್ಮ ಬಂದೂಕು ಹಿಡಿದುಕೊಂಡು ಬಂದು, ನನ್ನನ್ನು ಹಾಗೂ ನನ್ನ ಪತಿಯನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು. ಬಳಿಕ ಬಲವಂತವಾಗಿ ನನ್ನ ಬಟ್ಟೆಗಳನ್ನು ಬಿಚ್ಚಿ ನನ್ನ ಮೇಲೆ ಅತ್ಯಾಚಾರ ಮಾಡಿದರು".

"ಅಲ್ಲದೆ ತಮ್ಮ ಮೊಬೈಲ್ ನಲ್ಲಿ ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿಕೊಂಡು ಯಾರಿಗಾದರೂ ತಿಳಿಸಿದರೆ ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದರು. ಅದೇ ವೀಡಿಯೋಗಳನ್ನು ಇಟ್ಟುಕೊಂಡು ಫೋನ್ ಮೂಲಕ ವಿಡಿಯೋ ಕಾಲ್ ಮಾಡುತ್ತಿದ್ದರು. ಮತ್ತು ವಿಡಿಯೋ ಕಾಲ್ ನಲ್ಲೇ ನನಗೆ ಬೆತ್ತಲಾಗುವಂತೆ ಒತ್ತಾಯಿಸುತ್ತಿದ್ದರು. ಹೀಗೆ ಅವರು ನನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ" ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

"ತಾನು ಭಯದಿಂದ ಇದುವರೆಗೆ ದೂರು ನೀಡಿಲ್ಲ. ಆದರೆ ಪ್ರಜ್ವಲ್ ವಿರುದ್ಧದ ಆರೋಪಗಳ ಬಗ್ಗೆ ಪರಿಶೀಲಿಸಲು ಎಸ್‌ಐಟಿ ರಚಿಸಿರುವುದರಿಂದ ಈಗಲೇ ದೂರು ನೀಡುವುದು ಸೂಕ್ತ ಎಂದು ನಿರ್ಧರಿಸಿದೆ" ಎಂದೂ ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಮಹಿಳೆ ನೀಡಿದ ದೂರಿನ ಅನ್ವಯ ಎಸ್‌ಐಟಿ, ಪ್ರಜ್ವಲ್ ರೇವಣ್ಣ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (2) (ಎನ್) (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುಗು), 354 (ಎ) (1) (ದೈಹಿಕ ಸಂಪರ್ಕ ಮತ್ತು ಅನಪೇಕ್ಷಿತ ಮತ್ತು ಸ್ಪಷ್ಟ ಲೈಂಗಿಕ ಪ್ರಚೋದನೆಗೆ ಒತ್ತಾಯ), 354 (ಬಿ) (ವಿವಸ್ತ್ರಗೊಳಿಸುವ ಉದ್ದೇಶದಿಂದ ಮಹಿಳೆಗೆ ಕ್ರಿಮಿನಲ್ ಬಲದ ಆಕ್ರಮಣ ಅಥವಾ ಒತ್ತಾಯ) 354(c) (voyeurism-ಅಶ್ಲೀಲ ಚಿತ್ರ ರೆಕಾರ್ಡ್ ಮಾಡಿಕೊಳ್ಳುವುದು) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿಭಾಗ 66(e) (ಗೌಪ್ಯತೆ ಉಲ್ಲಂಘನೆ)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Read More
Next Story