Mysore Muda Case| ಸಿದ್ದರಾಮಯ್ಯ ಪತ್ನಿಗೆ ಮುಡಾ ಸೈಟ್​ಗಳ ಅಕ್ರಮ ಹಂಚಿಕೆ: ಇಡಿ  ಸಾಕ್ಷಾಧಾರ
x
CM Siddaramaiah

Mysore Muda Case| ಸಿದ್ದರಾಮಯ್ಯ ಪತ್ನಿಗೆ ಮುಡಾ ಸೈಟ್​ಗಳ ಅಕ್ರಮ ಹಂಚಿಕೆ: ಇಡಿ ಸಾಕ್ಷಾಧಾರ

ಲೋಕಾಯುಕ್ತ ಕಳುಹಿಸಿದ ಮಾಹಿತಿಯಲ್ಲಿ ಮುಡಾ, ಬೇನಾಮಿ ಮತ್ತು ಇತರ ವಹಿವಾಟುಗಳ ಮೂಲಕ ಒಟ್ಟು 1,095 ಸೈಟ್​ಗಳನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ವರ್ಗಾಯಿಸುವಲ್ಲಿ ಹಲವಾರು ಅಕ್ರಮಗಳು ನಡೆದಿರುವುದು ಸಾಬೀತಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.

ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಇತ್ತೀಚೆಗೆ ಕಳುಹಿಸಿದ ಮಾಹಿತಿಯಲ್ಲಿ, ಮುಡಾ ಬೇನಾಮಿ ಮತ್ತು ಇತರ ವಹಿವಾಟುಗಳ ಮೂಲಕ ಒಟ್ಟು 1,095 ಸೈಟ್​ಗಳನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿರುವುದ ತನಿಖೆಯಿಂದ ತಿಳಿದುಬಂದಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.

ಸಿಎಂ ಪತ್ನಿಗೆ ಸೈಟ್​ ವರ್ಗಾವಣೆ ಮಾಡುವ ವೇಳೆ ಕಾನೂನು ಮಾರ್ಗಸೂಚಿಗಳ ಉಲ್ಲಂಘನೆ ಮಾಡಲಾಗಿದೆ. ಮಾಹಿತಿ ತಿರುಚುವಿಕೆ, ಕಚೇರಿ ಕಾರ್ಯವಿಧಾನಗಳ ಉಲ್ಲಂಘನೆ, ಅನಗತ್ಯ ಒಲವು ಮತ್ತು ಪ್ರಭಾವದ ಬಳಕೆ ಮತ್ತು ಸಹಿಗಳ ನಕಲಿ ಸಾಕ್ಷಿಗಳು ಪತ್ತೆಯಾಗಿವೆ ಎಂದು ಇಡಿ ಹೇಳಿಕೊಂಡಿದೆ. ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಸ್.ಜಿ.ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಈ ಪ್ರಕ್ರಿಯೆಯಲ್ಲಿ ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ ದೊರೆತಿವೆ ಎಂದು ಸಂಸ್ಥೆ ಹೇಳಿಕೊಂಡಿದೆ.

700 ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯದ ಒಟ್ಟು 1,095 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು ಬಹಿರಂಗಗೊಂಡಿದೆ. ಹೀಗಾಗಿ ಮುಡಾ ಹಗರಣ ಪಾರ್ವತಿ ಅವರಿಗೆ ಸೈಟ್ ಹಂಚಿಕೆ ಮಾಡಿದ ಪ್ರಕರಣದಲ್ಲೇ ಕೊನೆಗೊಳ್ಳುವುದಿಲ್ಲ ಎಂದು ತನಿಖಾ ವರದಿ ತಿಳಿಸಿದೆ.

ಬೇನಾಮಿ ಹಂಚಿಕೆ

ಭೂಮಿ ಕಳೆದುಕೊಂಡವರ ಸೋಗಿನಲ್ಲಿ ಬೇನಾಮಿ ಅಥವಾ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಸೈಟ್​ಗಳನ್ನು ಹಂಚಿಕೆ ಮಾಡಲಾಗಿದೆ. ಈ ಅಕ್ರಮ ಹಂಚಿಕೆಗಳ ಫಲಾನುಭವಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳು" ಎಂದು ಜಾರಿ ನಿರ್ದೇಶನಾಲಯದ ತನಿಖೆಯಿಂದ ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸಿಎಂ ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಭೂಮಿಯನ್ನು ಖರೀದಿಸಿ ಪಾರ್ವತಿಗೆ ಉಡುಗೊರೆ ನೀಡಿದ ದೇವರಾಜು ಮತ್ತು ಇತರರ ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದೀಗ ಜಾರಿ ನಿರ್ದೇಶನಾಲಯ ಅಕ್ರಮ ಹಣವರ್ಗಾವಣೆ ಆರೋಪದ ಮೇಲೆ ತನಿಖೆ ನಡೆಸುತ್ತಿದೆ.

ತಪ್ಪು ನಿರಾಕರಿಸಿದ ಸಿಎಂ ಪತ್ನಿ

ಲೋಕಾಯುಕ್ತರ ಎದುರು ಹಾಜರಾಗಿದ್ದ ಸಿಎಂ ಪತ್ನಿ ತಾವು ಅಥವಾ ತಮ್ಮ ಕುಟುಂಬದಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಪದೇ ಪದೇ ಹೇಳಿದ್ದಾರೆ. ಪ್ರತಿಪಕ್ಷಗಳು ಮಾಡುತ್ತಿರುವ ರಾಜಕೀಯ ಪ್ರೇರಿತ ಆರೋಪ ಎಂದೇ ಹೇಳುತ್ತಿದ್ದಾರೆ.

ಮೈಸೂರಿನ ವಿಜಯನಗರ ಬಡಾವಣೆಯ 3 ಮತ್ತು 4ನೇ ಹಂತಗಳಲ್ಲಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಮುಡಾ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ವಿಸ್ತೀರ್ಣಕ್ಕೆ ಹೋಲಿಸಿದರೆ ಹೆಚ್ಚಿನ ಆಸ್ತಿ ಮೌಲ್ಯವನ್ನು ಹೊಂದಿದೆ ಎಂದು ಆರೋಪಿಸಲಾಗಿದೆ. ಮುಡಾ 3.16 ಎಕರೆ ಭೂಮಿಗೆ ಬದಲಾಗಿ 50:50 ಅನುಪಾತದ ಯೋಜನೆಯಡಿ ಪಾರ್ವತಿಗೆ ನಿವೇಶನಗಳನ್ನು ಮಂಜೂರು ಮಾಡಿತ್ತು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಇತ್ತೀಚೆಗೆ ಲೋಕಾಯುಕ್ತಕ್ಕೆ ಕಳುಹಿಸಲಾದ ಸಂವಹನದಲ್ಲಿ, ನಿವೇಶನಗಳ ಹಂಚಿಕೆಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿ 14 ಸೈಟ್​ಗಳನ್ನು ಪಾರ್ವತಿಗೆ "ಕಾನೂನುಬಾಹಿರವಾಗಿ" ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಯತೀಂದ್ರ ಮುಡಾ ಸದಸ್ಯ

ಸಿಎಂ ಪತ್ನಿ ಪಾರ್ವತಿ ಅವರಿಗೆ ಸೈಟ್​ಗಳನ್ನು ಹಂಚಿಕೆ ಮಾಡಿದಾಗ, ಅವರ ಮಗ ಯತೀಂದ್ರ ವರುಣಾ ಕ್ಷೇತ್ರದ ಶಾಸಕರಾಗಿದ್ದರು. ಹೀಗಾಗಿ ಅವರು ಮುಡಾ ಮಂಡಳಿಯ ಸದಸ್ಯರಾಗಿದ್ದರು ಎಂದು ಇಡಿ ಹೇಳಿದೆ. ಈ ಅವಧಿಯಲ್ಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದರು.

ಸದರಿ ಭೂಮಿಯ ಡಿನೋಟಿಫಿಕೇಷನ್ ಪ್ರಕ್ರಿಯೆಯು "ಚರ್ಚೆ ಅಥವಾ ದಾಖಲೆಗಳ ವಿಶ್ಲೇಷಣೆಯನ್ನು ಆಧರಿಸಿಲ್ಲ ಎಂದು ಇಡಿ ಹೇಳಿದೆ.

ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಜಿ. ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಅವರು ಮುಡಾ ಕಚೇರಿಯಲ್ಲಿ ಅನಗತ್ಯ ಪ್ರಭಾವ ಬೀರಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ನಕಲಿ ಸಹಿಗಳನ್ನು ಬಳಸಲಾಗಿದೆ ಮತ್ತು ಪಾರ್ವತಿ ಅವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿದ್ದರು ಎಂದು ಇಡಿ ಹೇಳಿದೆ .

ಸೈಟ್​ ಹಂಚಿಕೆ ಪತ್ರಗಳನ್ನು ವಿತರಿಸಲು ಮುಡಾ ಬಳಸಿದ ಹೆಚ್ಚಿನ (5,000 ರಲ್ಲಿ 1,946) ಹೈ ಸೆಕ್ಯುರಿಟಿ ಬಾಂಡ್ ಪೇಪರ್​ಗಳು ಕಾಣೆಯಾಗಿವೆ ಎಂದು ತಿಳಿದುಬಂದಿದೆ. ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರ ಆಪ್ತ ಸಹಾಯಕ ಪ್ರಶಾಂತ್ ರಾಜು ಎಂಬುವರು ಈ ಬಾಂಡ್ ಪೇಪರ್ ಗಳನ್ನು ಹಿಂಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಜಿಟಿ ದಿನೇಶ್ ಕುಮಾರ್ ಅವರು ಮೋಸದ ಹಂಚಿಕೆ ಪತ್ರಗಳನ್ನು ನೀಡಲು ಈ ಹೈ ಸೆಕ್ಯುರಿಟಿ ಬಾಂಡ್ ಪೇಪರ್​ಗಳನ್ನು ಬಳಸಿರಬಹುದು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ಆರೋಪಿಸಿದೆ.

ಮೈಸೂರು ತಾಲೂಕಿನ ಕಸಬಾ ಹೋಬಳಿಯ ಕಸರೆ ಗ್ರಾಮದ ಸರ್ವೆ ನಂ.464ರಲ್ಲಿನ 3.16 ಎಕರೆ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲು ಕೈಗೊಂಡಿರುವ ಪ್ರಕ್ರಿಯೆಗಳು ಮೋಸದಿಂದ ಕೂಡಿ ಎಂದು ಸಿಬಿಐ ಲೋಕಾಯುಕ್ತಕ್ಕೆ ತಿಳಿಸಿದೆ.

ಗ್ರಾಮ ಲೆಕ್ಕಿಗರು, ಸರ್ವೇಯರ್, ಕಂದಾಯ ನಿರೀಕ್ಷಕರು, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಮುಡಾ ನಿರ್ಮಾಣ ಕಾರ್ಯ ಕೈಗೊಂಡಿದೆ ಎಂದು ಸಾಬೀತುಪಡಿಸಲು ಅವರು ವಿಫಲರಾಗಿದ್ದಾರೆ ಎಂದು ಅದು ಹೇಳಿದೆ.

ವೈಟ್​ನರ್​ ಬಳಕೆ

ಪಾರ್ವತಿ ಅವರು 2014ರ ಜೂನ್ 14ರಂದು ಮುಡಾಗೆ ಸಲ್ಲಿಸಿದ ಪರಿಹಾರ ಪತ್ರದಲ್ಲಿ ವಾಕ್ಯವನ್ನು ಅಳಿಸಲು ವೈಟ್​ನರ್​ ಬಳಸಿರುವುದು ಕಂಡುಬಂದಿದ್ದರಿಂದ ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅನುಮಾನ ವ್ಯಕ್ತಪಡಿಸಿದೆ. ಪಾರ್ವತಿ ಅವರ ಕಡತದ ವಿಲೇವಾರಿ ಸಾಮಾನ್ಯ ಕಾರ್ಯವಿಧಾನವನ್ನು ಉಲ್ಲಂಘಿಸಿ ನಡೆದಿರುವುದು ಕಂಡುಬಂದಿದೆ. ಆಗಿನ ಮುಡಾ ಆಯುಕ್ತರೇ ಹಂಚಿಕೆ ಮಾಡಬೇಕಾದ ನಿವೇಶನಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ನಿವೇಶನ ಹಂಚಿಕೆ ಪ್ರಸ್ತಾಪವನ್ನು ಅಂದಿನ ಮುಡಾ ಆಯುಕ್ತ ಡಿ.ಬಿ.ನಟೇಶ್ ಅವರು ತಮ್ಮ ಸ್ವಂತ ಇಚ್ಛೆಯಿಂದ ನೇರವಾಗಿ ಕೈಗೊಂಡಿದ್ದರು. ಇದು ಅನಗತ್ಯ ಅನುಕೂಲ ಮಾಡಿಕೊಟ್ಟಿರುವುದನ್ನು ಸೂಚಿಸುತ್ತದೆ" ಎಂದು ಇಡಿ ಹೇಳಿದೆ.

ಡಿನೋಟಿಫಿಕೇಷನ್, ಭೂಮಿ ಖರೀದಿ ಮತ್ತು ನಂತರ ಅದನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಭಾವದಿಂದ ಮಾಡಲಾಗಿದೆ. ನಂತರ ಅದನ್ನು ಪಾರ್ವತಿಗೆ ಉಡುಗೊರೆಯಾಗಿ ನೀಡಲಾಗಿದೆ. ಅವರು ಅದನ್ನು ಕಳಂಕರಹಿತ ಆಸ್ತಿ ಎಂದು ಬಿಂಬಿಸಿದ್ದಾರೆ ಎಂದು ಇಡಿ ಆರೋಪಿಸಿದೆ.

Read More
Next Story