
ಸಿಎಂ ಸಿದ್ದರಾಮಯ್ಯ, ಲೇಖಕಿ ಬಾನು ಮುಷ್ತಾಕ್ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್
ದಸರಾ ಉದ್ಘಾಟನೆಗೆ ಕುಂಕುಮ ಬೇಡ ಎನ್ನುವವರು ಇಫ್ತಾರ್ ಕೂಟದಲ್ಲಿ ಬಿರಿಯಾನಿ ತಿನ್ನುವಾಗ ಟೋಫಿ ಧರಿಸುವುದು ಯಾಕೆ : ಅಶೋಕ್
ಈ ಹಿಂದೆ ದಸರಾ ಮೆರವಣಿಗೆಯಲ್ಲಿ ಅಂಬಾರಿಯಲ್ಲಿ ಮಹಾರಾಜರು ತಮ್ಮ ಜೊತೆ ದಿವಾನ ಸರ್. ಮಿರ್ಜಾ ಇಸ್ಮಾಯಿಲ್ ಅವರನ್ನು ಕೂರಿಸಿಕೊಳ್ಳುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ತಿಳಿಸಿದ್ದರು.
ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ತಮ್ಮ ವಿರೋಧವನ್ನು ಮುಂದುವರಿಸಿರುವ ವಿಪಕ್ಷ ನಾಯಕ ಆರ್. ಅಶೋಕ್ ಅವರು ಮತ್ತೊಂದು ಬಾರಿ ವಾಗ್ದಾಳಿ ನಡೆಸಿದ್ದಾರೆ. "ಇದು ಕಾಂಗ್ರೆಸ್ ಪಕ್ಷದ ಲಜ್ಜೆಗೆಟ್ಟ ತುಷ್ಟೀಕರಣ ನೀತಿ," ಎಂದು ಅವರು ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾಡಹಬ್ಬ ದಸರಾ ಉದ್ಘಾಟನೆ ಮಾಡುವ ವ್ಯಕ್ತಿಗೆ ಹಣೆಯಲ್ಲಿ ಕುಂಕುಮ ಇಲ್ಲದಿದ್ದರೂ, ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಲ್ಲದಿದ್ದರೂ ಮತ್ತು ಹಿಂದೂ ದೇವತೆಗಳ ಬಗ್ಗೆ ಶ್ರದ್ಧೆ ಇಲ್ಲದಿದ್ದರೂ ಪರವಾಗಿಲ್ಲವೇ?" ಎಂದು ಪ್ರಶ್ನಿಸಿರುವ ಅಶೋಕ್, "ಇಫ್ತಾರ್ ಕೂಟಕ್ಕೆ ಹೋಗುವವರಿಗೆ ಮುಸ್ಲಿಂ ಟೋಪಿ ಧರಿಸದಿದ್ದರೆ ಬಿರಿಯಾನಿ ತಿನ್ನಲು ಆಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ''ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷದ ಈ ತುಷ್ಟೀಕರಣ ನೀತಿಗೆ ನಾಚಿಕೆಯಾಗಬೇಕು," ಎಂದು ಅವರು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಈ ಹೇಳಿಕೆಯು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಬಾನು ಮುಷ್ತಾಕ್ ಅವರು ಕುಂಕುಮ ಹಚ್ಚಿ ಬರಬೇಕಿಲ್ಲ, ಅದು ಅವರ ಧರ್ಮದಲ್ಲಿಲ್ಲ" ಎಂದು ನೀಡಿದ್ದ ಹೇಳಿಕೆಗೆ ನೀಡಿದ ಪ್ರತಿಕ್ರಿಯೆಯಾಗಿದೆ.
ವಿವಾದದ ಹಿನ್ನೆಲೆ
ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಸರ್ಕಾರ ಆಹ್ವಾನಿಸಿದ ದಿನದಿಂದಲೂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದೆ. "ಬಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಹಿಂದೆ ದಸರಾ ಮೆರವಣಿಗೆಯಲ್ಲಿ ಮಹಾರಾಜರು ತಮ್ಮ ಜೊತೆ ದಿವಾನ ಸರ್. ಮಿರ್ಜಾ ಇಸ್ಮಾಯಿಲ್ ಅವರನ್ನು ಕೂರಿಸಿಕೊಳ್ಳುತ್ತಿದ್ದರು. 2017ರಲ್ಲಿ ಕವಿ ನಿಸಾರ್ ಅಹಮದ್ ಅವರನ್ನು ಆಯ್ಕೆ ಮಾಡಿದ್ದಾಗ ಯಾರೂ ವಿರೋಧಿಸಿರಲಿಲ್ಲ," ಎಂದು ಸರ್ಕಾರ ನೆನಪಿಸಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವರು ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳ ಸ್ವಾಗತ
ಮೈಸೂರಿನ ಜನಪ್ರತಿನಿಧಿಗಳು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಮೈಸೂರು ಸಂಸದ ಮತ್ತು ರಾಜವಂಶಸ್ಥ ಯದುವೀರ್, ಬಿಜೆಪಿ ಎಂಎಲ್‌ಸಿ ಎಚ್. ವಿಶ್ವನಾಥ್, ಮತ್ತು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಬೆಂಬಲಿಸಿದ್ದಾರೆ.