ESI Hospital | ರಾಜ್ಯ ‌- ಕೇಂದ್ರ ಒಣ ಪ್ರತಿಷ್ಠೆ; ಬಣಗುಡುತ್ತಿದೆ 86 ಕೋಟಿ ವೆಚ್ಚದ ಸುಸಜ್ಜಿತ ಇಎಸ್ಐ ಆಸ್ಪತ್ರೆ
x

ESI Hospital | ರಾಜ್ಯ ‌- ಕೇಂದ್ರ ಒಣ ಪ್ರತಿಷ್ಠೆ; ಬಣಗುಡುತ್ತಿದೆ 86 ಕೋಟಿ ವೆಚ್ಚದ ಸುಸಜ್ಜಿತ ಇಎಸ್ಐ ಆಸ್ಪತ್ರೆ

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಗಾರ್ಮೆಂಟ್ಸ್, ವಿವಿಧ ಕಾರ್ಖಾನೆಗಳಿದ್ದು, ಲಕ್ಷಾಂತರ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರ ಪಾಲಿನ ಸಂಜೀವಿನಿಯಾಗಬೇಕಾಗಿದ್ದ ಇಎಸ್ಐ ಆಸ್ಪತ್ರೆ ಮಾತ್ರ ದೃಷ್ಟಿಗೊಂಬೆಯಂತೆ ನಿಂತಿದೆ.


ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಮನ್ವಯತೆ ಕೊರತೆಯಿಂದ ಸುಸಜ್ಜಿತವಾಗಿ ತಲೆ ಎತ್ತಿರುವ ಇಎಸ್‌ಐ ಆಸ್ಪತ್ರೆ ಕಳೆದ ಮೂರು ವರ್ಷಗಳಿಂದ ಉದ್ಘಾಟನೆ ‌ಭಾಗ್ಯ ಕಾಣದೇ ಸೊರಗಿದೆ.

ಏಷ್ಯಾದ ಎರಡನೇ ಅತಿ ದೊಡ್ಡ ಬೃಹತ್‌ ಕೈಗಾರಿಕಾ ಪ್ರದೇಶವಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ದಶಕದ ಬಳಿಕ ಇಎಸ್ಐ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದೆ. 86 ಕೋಟಿ ರೂ. ವೆಚ್ಚದಲ್ಲಿ‌ ನಿರ್ಮಾಣವಾಗಿರುವ ಆಸ್ಪತ್ರೆಯಲ್ಲಿ ಕೆಲ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳು ಸಿದ್ಧವಾಗಿವೆ. ಆದರೆ, ಕೇಂದ್ರ -ರಾಜ್ಯ ಸರ್ಕಾರದ ಸಮನ್ವಯತೆ ಕೊರತೆ, ನಿರ್ವಹಣೆ ಗೊಂದಲಗಳಿಂದ ಉದ್ಘಾಟನಾ ಭಾಗ್ಯ ಕಾಣದೇ ಆಸ್ಪತ್ರೆಯ ಉಪಕರಣಗಳು ತುಕ್ಕು ಹಿಡಿಯುತ್ತಿವೆ.

ಉದ್ಘಾಟನೆ ಆಗದಿರಲು ಕಾರಣವೇನು?

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ( ಶೇ 60*40 ಅನುಪಾತ) ಇಎಸ್ಐ ಆಸ್ಪತ್ರೆ ನಿರ್ಮಿಸಲಾಗಿದೆ. ಆಸ್ಪತ್ರೆಗೆ ಸಿಬ್ಬಂದಿ‌ ನೇಮಕ, ಅವರ ವೇತನ, ವೈದ್ಯಕೀಯ ವೆಚ್ಚ ಹಾಗೂ ಆಸ್ಪತ್ರೆ ನಿರ್ವಹಣೆಯನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳಬೇಕು ಎಂಬುದು ಕೇಂದ್ರದ ವಾದ. ಆದರೆ, ಈ ವಿಚಾರವಾಗಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಿರ್ವಹಣೆ ಒಪ್ಪಿಕೊಳ್ಳಬೇಕಾದರೆ ರಾಜ್ಯ ಸಚಿವ ಸಂಪುಟ ಸಭೆಯ ಅನುಮೋದನೆ ಅಗತ್ಯವಾಗಿದೆ.

ರಾಜಕೀಯ ಕಾರಣಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಎಸ್‌ಐ ಆಸ್ಪತ್ರೆ ಉದ್ಘಾಟನೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದೆ. ಅದೇ ರೀತಿ ಸ್ಥಳೀಯವಾಗಿ ಬಿಜೆಪಿ ಶಾಸಕರಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಆಸ್ಪತ್ರೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದಕ್ಕಾಗಿಯೇ ಪರಸ್ಪರರ ಮಧ್ಯೆ ಸಮನ್ವಯ ಕೊರತೆ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.

ದೃಷ್ಟಿಗೊಂಬೆಯಂತೆ ನಿಂತಿರುವ ಆಸ್ಪತ್ರೆ

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಗಾರ್ಮೆಂಟ್ಸ್, ವಿವಿಧ ಕಾರ್ಖಾನೆಗಳಿದ್ದು, ಲಕ್ಷಾಂತರ ಕಾರ್ಮಿಕರು ದುಡಿಯುತ್ತಿದ್ದಾರೆ. ಇವರ ಪಾಲಿನ ಸಂಜೀವಿನಿಯಾಗಬೇಕಾಗಿದ್ದ ಇಎಸ್ಐ ಆಸ್ಪತ್ರೆ ಮಾತ್ರ ದೃಷ್ಟಿಗೊಂಬೆಯಂತೆ ನಿಂತಿದೆ.

2014 ರಲ್ಲಿ ಅಂದಿನ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಅರೆಹಳ್ಳಿ ಗುಡ್ಡದಹಳ್ಳಿ ಸಮೀಪ 100 ಹಾಸಿಗೆಗಳ ಸಾಮರ್ಥ್ಯದ ಇಎಸ್‌ಐ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಿದ್ದರು. ಆಸ್ಪತ್ರೆ ಕಟ್ಟಡ ನಿರ್ಮಾಣವಾಗಲು 10 ವರ್ಷ ಸಮಯ ಹಿಡಿಯಿತು. ಇದೀಗ ಆಸ್ಪತ್ರೆ ಸೇವೆ ಒದಗಿಸಲು ಸಿದ್ಧವಾಗಿದೆ. ಆದರೆ, ಆಸ್ಪತ್ರೆಯನ್ನು ಆರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ದೂಷಣೆಗಳಲ್ಲಿ ತೊಡಗಿದ್ದು, ರಾಜಕೀಯ ಲಾಭ ಪಡೆಯಲು ಹಾತೊರೆಯುತ್ತಿವೆ. ಇದರಿಂದ ಕಾರ್ಮಿಕರಿಗೆ ರಕ್ಷಾ ಕವಚವಾಗಬೇಕಿದ್ದ ಇಎಸ್ಐ ಆಸ್ಪತ್ರೆಯು ತ್ರಿಶಂಕು ಸ್ಥಿತಿ ತಲುಪಿದೆ.

4 ಹಂತಗಳಲ್ಲಿರುವ ಕೈಗಾರಿಕಾ ಪ್ರದೇಶ

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ನಾಲ್ಕು ಹಂತಗಳಲ್ಲಿ ವಿಸ್ತರಣೆಯಾಗಿದೆ. ವಿದೇಶಿ ಕಂಪನಿಗಳು ಸೇರಿದಂತೆ ಹತ್ತಾರು ಬಗೆಯ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗಿವೆ. ಇನ್ನೂ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಲು ಭೂಸ್ವಾಧೀನ ನಡೆಯುತ್ತಲೇ ಇದೆ. ಇಲ್ಲಿನ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ ಸೇರಿದಂತೆ ಹಲವಾರು ಬೃಹತ್ ಕೈಗಾರಿಕೆಗಳಲ್ಲಿ ಸಹಸ್ರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದರೆ ಬೆಂಗಳೂರಿನ ರಾಜಾಜಿನಗರದ ಇಎಸ್ಐ ಆಸ್ಪತ್ರೆ ತೆರಳಬೇಕಾದ ಅನಿವಾರ್ಯತೆ ಇದೆ. ಇಲ್ಲವೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ.

ಇಎಸ್‌ಐ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಈ ಭಾಗದ ಕಾರ್ಮಿಕರಿಗೆ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಕಾರ್ಖಾನೆಗಳಿವೆ.‌ 80 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಸೇವೆಗೆ ಸಿದ್ದವಾಗಿರುವ ಇಎಸ್‌ಐ ಆಸ್ಪತ್ರೆಯನ್ನು ಪ್ರಾರಂಭಿಸುವ ಮೂಲಕ ಕಾರ್ಮಿಕರಿಗೆ ನೆರವಾಗಬೇಕು. ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಕಾರ್ಮಿಕ ಮುಖಂಡ ಕೊತ್ತೂರಪ್ಪ ಅವರು 'ದ ಫೆಡರಲ್ ಕರ್ನಾಟಕ' ಕ್ಕೆ ತಿಳಿಸಿದರು.

ರಾಜಕೀಯ ಲಾಭ-ನಷ್ಟಕ್ಕೆ ಒಳಗಾದ ಆಸ್ಪತ್ರೆ

ಕೇಂದ್ರ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಸಚಿವರಾಗಿದ್ದಾಗ ಇಎಸ್‌ಐ ಆಸ್ಪತ್ರೆಯ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಂಡು, 2014ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆಯಾಗಿತ್ತು. 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಯು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ಸಹಭಾಗಿತ್ವದಲ್ಲಿ ನಿರ್ಮಾಣವಾಗಿದೆ. ದೊಡ್ಡಬಳ್ಳಾಪುರದಲ್ಲಿ ಈ ಹಿಂದೆ ಕಾಂಗ್ರೆಸ್ ಶಾಸಕರು ಇದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಕಟ್ಟಡ ನಿರ್ಮಾಣವಾಗಿದ್ದರೂ ಉದ್ಘಾಟಿಸದೇ ಮುಂದೂಡುತ್ತಾ ಬರಲಾಯಿತು. ಈಗ ರಾಜಕೀಯ ಪರಿಸ್ಥಿತಿ ತದ್ವಿರುದ್ಧವಾಗಿದೆ. ಸ್ಥಳೀಯವಾಗಿ ಬಿಜೆಪಿ ಶಾಸಕಕರಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದೆ. ಹೀಗಾಗಿ ಹಿಂದಿನ ತಿಕ್ಕಾಟವೇ ಮುಂದುವರಿದಿದ್ದು, ಆಸ್ಪತ್ರೆ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ.

ಇಎಸ್ಐ ಆಸ್ಪತ್ರೆಯನ್ನು 86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ವೈದ್ಯಕೀಯ ಉಪಕರಣಗಳಿಗಾಗಿ 27 ಕೋಟಿ ರೂ.ಅಂದಾಜಿಸಲಾಗಿದೆ. ಈ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಲು ಸಿದ್ಧವಾಗಿಲ್ಲ. ಸಿಬ್ಬಂದಿ ನೇಮಕಾತಿ ಕುರಿತು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇದು ಬೇಡ, ನೇರವಾಗಿ ರಾಜ್ಯ ಸರ್ಕಾರ ನೇಮಕ ಮಾಡಲಿ ಎಂಬುದು ನಮ್ಮ ಬೇಡಿಕೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಇಎಸ್ಐ ಆಸ್ಪತ್ರೆಯನ್ನು ಕೇಂದ್ರ ಸರ್ಕಾರವೇ ಸುಪರ್ದಿಗೆ ಪಡೆದು ನಿರ್ವಹಣೆ ಮಾಡಬೇಕು ಎಂದು ಸ್ಥಳೀಯ ಶಾಸಕ ಧೀರಜ್‌ ಮುನಿರಾಜು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಆಸ್ಪತ್ರೆಯು ಕಾರ್ಯ ನಿರ್ವಹಣೆಗೆ ಸಿದ್ಧವಾಗಿದ್ದರೂ ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಕೇಂದ್ರ ಸರ್ಕಾರವೇ ನಿರ್ವಹಣೆ ಮಾಡುವಂತೆ ಕೇಂದ್ರ ಕಾರ್ಮಿಕ ಇಲಾಖೆ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ಮಹಿಳಾ ಕಾರ್ಮಿಕರು ಹೆಚ್ಚು

ಪ್ರಮುಖವಾಗಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಹಾಗಾಗಿ ಗೌರಿಬಿದನೂರು, ಚಿಕ್ಕಬಳ್ಳಾಪುರ, ನೆಲಮಂಗಲ ಮತ್ತು ದಾಬಸ್ ಪೇಟೆ, ದೊಡ್ಡಬಳ್ಳಾಪುರ ಭಾಗದಿಂದ ಅತೀ ಹೆಚ್ಚು ಹೆಣ್ಣು ಮಕ್ಕಳು ಕೆಲಸಕ್ಕೆ ಬರುತ್ತಾರೆ. ಸುಮಾರು 50 ಸಾವಿರದಷ್ಟು ಹೆಣ್ಣು ಮಕ್ಕಳು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಹಿನ್ನಲೆ ಇಎಸ್ಐ ಆಸ್ಪತ್ರೆ ಆರಂಭವಾದರೆ ಬಹಳ ಅನುಕೂಲ ಆಗುತ್ತದೆ. ಇನ್ನೂ ಆಸ್ಪತ್ರೆ ಉದ್ಘಾಟನೆ ಆಗದ ಕಾರಣ ಬೆಂಗಳೂರಿನ ರಾಜಾಜಿನಗರದ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕಾರ್ಮಿಕರು ಬಹುತೇಕ ರಾಜಾಜಿನಗರಕ್ಕೆ ಬರುವುದರಿಂದ ಅಲ್ಲಿನ ಸಿಬ್ಬಂದಿಗೆ ಹೆಚ್ಚಿನ ಹೊರೆಯಾಗುತ್ತಿದೆ‌. ಇದನ್ನು ತಪ್ಪಿಸಲು ಇಲ್ಲಿ ಆಸ್ಪತ್ರೆಯನ್ನು ತ್ವರಿತವಾಗಿ ಆರಂಭಿಸಬೇಕಾಗಿದೆ ಎಂಬುದು ಕಾರ್ಮಿಕರ ಅಭಿಪ್ರಾಯವಾಗಿದೆ.

ತುಕ್ಕು ಹಿಡಿಯುತ್ತಿವೆ ಉಪಕರಣಗಳು

ಆಸ್ಪತ್ರೆ ಕಾಮಗಾರಿ ಮುಗಿದ ಕೂಡಲೇ ರಾಜ್ಯ ಸರ್ಕಾರದ ಅನುದಾದಲ್ಲಿ ಆಸ್ಪತ್ರೆಗೆ ಬೇಕಾದ ಖುರ್ಚಿ, ಟೇಬಲ್ ಪೀಠೋಪಕರಣಗಳನ್ನು ತರಿಸಲಾಗಿದೆ. ಜೊತೆಗೆ ಆಡಳಿತಾತ್ಮಕವಾಗಿ ಬೇಕಾದ ಎಲ್ಲಾ ರೀತಿಯ ತಯಾರಿ ಕೂಡ ಮಾಡಲಾಗಿದೆ. ಹೊಸ ವೈದ್ಯಕೀಯ ಉಪಕರಣಗಳು ಬಂದಿವೆ. ಆದರೆ, ಇವೆಲ್ಲವೂ ಕೂಡ ಈಗ ತುಕ್ಕು ಹಿಡಿಯುವ ಹಂತಕ್ಕೆ ಬಂದಿವೆ.

ಬಳಕೆಗೆ ಬಾರದೆ ಕೋಟಿ ಕೋಟಿ ರೂ. ಮೌಲ್ಯದ ಉಪಕರಣಗಳು ತುಕ್ಕು ಹಿಡಿದು ಹೋಗವಂತಹ ದುಸ್ಥಿತಿಗೆ ಬಂದಿರುವುದು ವಿಪರ್ಯಾಸ. ಹೀಗೆ ಸಾರ್ವಜನಿಕರ ತೆರಿಗೆ ಹಣವು ಕಣ್ಣ ಮುಂದೆೆ ನಷ್ಟ ಆಗುತ್ತಿದ್ದರೂ ಜನ ಪ್ರತಿನಿಧಿಗಳಿಗೆ ಮಾತ್ರ ಕಣ್ಣಿಗೆ ಬೀಳುತ್ತಿಲ್ಲ ಎಂಬ ಟೀಕೆಯೂ ಕೇಳಿಬರುತ್ತಿದೆ.

ಸುಸಜ್ಜಿತ ಇಎಸ್ಐ ಆಸ್ಪತ್ರೆ ಕಟ್ಟಡವನ್ನು ಕಳೆದ ಜನವರಿಯಲ್ಲಿ ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಇದರ ಜೊತೆಗೆ ಮತ್ತಷ್ಟು ಕಟ್ಟಡ ಕಾಮಗಾರಿ ಆಗಬೇಕಿದೆ. ಆಸ್ಪತ್ರೆಗೆ ವ್ಯವಸ್ಥಿತ ವೈದ್ಯಕೀಯ ಉಪಕರಣಗಳು ಇಲ್ಲ. ಸುಮಾರು 50 ಕೋಟಿ ರೂ.ವೆಚ್ಚದಲ್ಲಿ ಉಪಕರಣಗಳ ಅವಶ್ಯಕತೆ ಇದೆ. ಇದಕ್ಕಾಗಿ ಟೆಂಡರ್ ಕರೆಯಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಇಎಸ್‌ಐ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ನಿರ್ವಹಣೆ ಮಾಡಬೇಕೋ ಅಥವಾ ಕೇಂದ್ರ ಸರ್ಕಾರ ನಿರ್ವಹಣೆ ಮಾಡಬೇಕಾ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಟೆಂಡರ್ ಪ್ರಕಿಯೆ, ಸಿಬ್ಬಂದಿ ನೇಮಕ ಇತರ ಕೆಲಸಗಳಾಗಲು ಮಾರ್ನಾಲ್ಕು ತಿಂಗಳು ಸಮಯ ಬೇಕಾಗಬಹುದು" ಎಂದು ಕಾರ್ಮಿಕ‌ ಸಚಿವ ಸಂತೋಷ ಲಾಡ್ ತಿಳಿಸಿದರು.

ಯಾರೂ ಕ್ರೆಡಿಟ್ ತೆಗೆದುಕೊಳ್ಳಬಾರದು

ಈ ಮೊದಲು ಆಸ್ಪತ್ರೆಗೆ 80 ಕೋಟಿ ರೂ.ಬಜೆಟ್‌ನಲ್ಲಿ ಭೂಮಿಪೂಜೆ ನಡೆಸಲಾಯಿತು. ಬಳಿಕ ಬಜೆಟ್ 96 ಕೋಟಿಗೆ ಏರಿಕೆಯಾಗಿದೆ. ಗುತ್ತಿಗೆದಾರನಿಗೆ 20 ಕೋಟಿಯಷ್ಟು ಹಣ ಸಂದಾಯವಾಗಿಬೇಕಿದೆ. ಹಾಗಾಗಿ ಬೀಗ ಕೊಟ್ಟಿಲ್ಲ ಎಂಬ ಸುದ್ದಿ ಇದೆ. ಇದರಲ್ಲಿ ಯಾವ ಸರ್ಕಾರವು ಕ್ರೆಡಿಟ್ ತೆಗೆದುಕೊಳ್ಳುವ ಪ್ರಮೇಯ ಇಲ್ಲ. ಏಕೆಂದರೆ ಕಾರ್ಮಿಕರು ದುಡಿಯುವ ಸಂಬಳದ ಇಎಸ್ಐಸಿ ಸ್ಕೀಂನಲ್ಲಿ ಕಡಿತಗೊಳಿಸಲಾಗುವ ಹಣದಿಂದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಉಪಕರಣಗಳನ್ನು ತಕ್ಷಣ ಏರ್ಪಾಟು ಮಾಡಬೇಕು. ಕಟ್ಟಡ ನಿರ್ಮಿಸಿ ಮೂರು ವರ್ಷ ಆಗಿದೆ.ನಿರ್ವಹಣೆ ಇಲ್ಲದೆ ಕಟ್ಟಡದಲ್ಲಿ ಬಿರುಕು ಮೂಡುತ್ತಿದೆ. ವಿಳಂಬ ನೀತಿ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಮಿಕರಿಗೆ ಮಾಡುತ್ತಿರುವ ದ್ರೋಹ ಇದಾಗಿದೆ. ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ರೂಪಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಅವರು 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

Read More
Next Story