ಪರಿಷತ್‌ ಚುನಾವಣೆ | ಯಡಿಯೂರಪ್ಪ ಜತೆ ಮುಂದುವರಿದ ಸಂಘರ್ಷ; ಬಂಡಾಯ ಅಭ್ಯರ್ಥಿಗೆ ಈಶ್ವರಪ್ಪ ಬೆಂಬಲ
x

ಪರಿಷತ್‌ ಚುನಾವಣೆ | ಯಡಿಯೂರಪ್ಪ ಜತೆ ಮುಂದುವರಿದ ಸಂಘರ್ಷ; ಬಂಡಾಯ ಅಭ್ಯರ್ಥಿಗೆ ಈಶ್ವರಪ್ಪ ಬೆಂಬಲ


ಬಿ.ಎಸ್‌. ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಬಂಡೆದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಅವರು ವಿಧಾನ ಪರಿಷತ್‌ (ಮೇಲ್ಮನೆ) ಚುನಾವಣೆಯಲ್ಲೂ ತನ್ನ ಬಂಡಾಯದ ಕಹಳೆಯನ್ನು ಮತ್ತೆ ಮೊಳಗಿಸಿದ್ದಾರೆ.

ಪಕ್ಷದ ಅಭ್ಯರ್ಥಿ ವಿರುದ್ಧ ಬಂಡೆದ್ದು ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಬಿಜೆಪಿ ಶಾಸಕ ಕೆ. ರಘುಪತಿ ಭಟ್‌ ಅವರಿಗೆ ನೇರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಪರಿಷತ್‌ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಯಡಿಯೂರಪ್ಪ ಮತ್ತು ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ರಘುಪತಿ ಭಟ್‌ ಅವರಿಗೆ ಬೆಂಬಲಿಸಲು ಶಿವಮೊಗ್ಗದ ಪದವೀಧರರ ಸಂಪರ್ಕ ಕೇಂದ್ರವನ್ನು ಸೋಮವಾರ ಈಶ್ವರಪ್ಪ ಅವರೇ ಉದ್ಘಾಟಿಸಿದ್ದಾರೆ. ಮಾತ್ರವಲ್ಲದೆ ಪದವೀಧರ ಕ್ಷೇತ್ರದ ಸ್ಥಳೀಯ ಪ್ರಭಾವಿ ಮುಖಂಡರು ಈಶ್ವರಪ್ಪ ಅವರಿಗೆ ಸಾಥ್‌ ನೀಡಿದ್ದಾರೆ. ಜತೆಗೆ ಜಾತಿವಾರು ಸಂಘಟನೆಗಳ ಪ್ರಮುಖರಾದ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್, ಸ್ಥಳೀಯ ಹಿರಿಯರಾದ ದೇವದಾಸ್ ನಾಯಕ್, ತಾಲೂಕು ವಿಶ್ವಕರ್ಮ ಸಮಾಜದ ಪ್ರಮುಖರಾದ ಅ.ಮಾ. ಪ್ರಕಾಶ್, ತಾಲ್ಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರಾದ ವೆಂಕಟೇಶ್ ರಾವ್ ಹಾಗೂ ಇತರ ಸಮಾಜಗಳ ಪ್ರಮುಖರನ್ನೂ ಜತೆಗೂಡಿಸಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ ಅವರಿಗೆ ಈಶ್ವರಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈಶ್ವರಪ್ಪ ಅವರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ಹಾಲಿ ಸಂಸದ ಬಿ.ಬೈ. ರಾಘವೇಂದ್ರ ಅವರ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಸ್ಪರ್ಧೆ ರಾಘವೇಂದ್ರ ಅವರ ಗೆಲುವಿನ ವಿಶ್ವಾಸಕ್ಕೆ ತೊಡಕಾಗಿದೆ. ತಮ್ಮದೇ ಬೆಂಬಲಿಗರನ್ನು ಶಿವಮೊಗ್ಗ ವಿಭಾಗದಲ್ಲಿ ಹೊಂದಿರುವ ಈಶ್ವರಪ್ಪ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟುವಲ್ಲಿ ಯಡಿಯೂರಪ್ಪ ಜತೆ ಶ್ರಮವಹಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಕಾರಣಕ್ಕಾಗಿ ಸ್ಪರ್ಧಿಸಲು ಅವಕಾಶ ಸಿಕ್ಕಿರಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಆಕ್ರೋಷ ವ್ಯಕ್ತಪಡಿಸಿದ್ದರು. ಲೋಕ ಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಕೆ.ಇ. ಕಾಂತೇಶ್‌ ಗೆ ತಮ್ಮ ಕುರುಬ ಸಮುದಾಯದವರು ಹೆಚ್ಚಿರುವ ಹಾವೇರಿ ಕ್ಷೇತ್ರದಿಂದ ಟಿಕೆಟ್‌ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದ ಈಶ್ವರಪ್ಪ, ಅದು ಆಗದೇ ಇದ್ದಾಗ ಬಂಡೆದ್ದು ಯಡಿಯೂರಪ್ಪ ಪುತ್ರನ ವಿರುದ್ಧವೇ ಸ್ಪರ್ಧಿಸಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನಿರಾಕರಿಸಲಾಗಿದ್ದ ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ಆ ವೇಳೆ ಪಕ್ಷದ ವರಿಷ್ಠರು ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ಈ ನಡುವೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದ ಜನಪ್ರಿಯ ವೈದ್ಯರಾದ ಡಾ ಧನಂಜಯ ಸರ್ಜಿ ಅವರಿಗೂ ಅದೇ ಕ್ಷೇತ್ರದ ಟಿಕೆಟ್ ಭರವಸೆ ನೀಡಿ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಅನುಕೂಲ ಮಾಡಿಕೊಡಲಾಗಿತ್ತು. ಹಾಗಾಗಿ ನೃರುತ್ಯ ಪದವೀಧರರ ಕ್ಷೇತ್ರದ ಟಿಕೆಟ್ಗಾಗಿ ಧನಂಜಯ್ ಸರ್ಜಿ ಮತ್ತು ರಘುಪತಿ ಭಟ್ ನಡುವೆ ತೀವ್ರ ಪೈಪೋಟಿ ಇತ್ತು. ಈ ನಡುವೆ ವಿಕಾಸ್ ಪುತ್ತೂರು ಎಂಬ ಬಿಜೆಪಿ ಯುವ ಮುಖಂಡ ವಿಕಾಸ್ ಪುತ್ತೂರು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಆದರೆ, ಇದೀಗ ಬಿಜೆಪಿ, ಶಿವಮೊಗ್ಗ ವೈದ್ಯ ಡಾ ಧನಂಜಯ ಸರ್ಜಿ ಅವರಿಗೆ ಟಿಕೆಟ್ ಘೋಷಿಸಿದ್ದು, ಅದರ ಬೆನ್ನಲ್ಲೇ ಮಾಜಿ ಶಾಸಕ ರಘುಪತಿ ಭಟ್ ಅವರು ಬಂಡಾಯದ ಬಾವುಟ ಹಾರಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿರುವ ರಘುಪತಿ ಭಟ್, ನೈರುತ್ಯ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳೆರಡಕ್ಕೂ ಪಕ್ಷ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಭಾಗದ ಪಕ್ಷದ ನಾಯಕರಿಗೆ ಅವಕಾಶ ನಿರಾಕರಿಸಿದೆ. ನಾಲ್ಕು ದಶಕಗಳ ಸಂಪ್ರದಾಯವನ್ನು ಮುರಿದು ಅನ್ಯಾಯ ಮಾಡಲಾಗಿದೆ. ಬಿಜೆಪಿಯ ಈ ನಿಲುವಿನಿಂದ ವಿಚಲಿತನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Read More
Next Story