Master plan for conservation of Hesarghat grassland, Minister Khandre instructs not to pollute Arkavati river
x

ಸಚಿವ ಈಶ್ವರ್‌ ಖಂಡ್ರೆ

ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣೆಗೆ ಮಾಸ್ಟರ್ ಪ್ಲಾನ್, ಅರ್ಕಾವತಿ ನದಿ ಮಲಿನವಾಗದಂತೆ ಸಚಿವ ಖಂಡ್ರೆ ಸೂಚನೆ

ಜಲ ಮೂಲಗಳಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಗೂಡು ಕಟ್ಟಲು ಹಾಗೂ ಆಹಾರಕ್ಕಾಗಿ ಹಣ್ಣಿನ ಗಿಡಗಳು ಸೇರಿದಂತೆ ವಿವಿಧ ಸ್ಥಳೀಯ ಪ್ರಭೇದದ ಮರಗಿಡಗಳನ್ನು ಸುತ್ತಲೂ ಬೆಳೆಸುವಂತೆ ನಿರ್ದೇಶನ ನೀಡಿದರು.


Click the Play button to hear this message in audio format

ವರ್ಷದಲ್ಲಿ 10 ಲಕ್ಷ ಜನರಿಗೆ ನೀರು ಪೂರೈಸುವ ಸಾಮರ್ಥ್ಯವಿರುವ ಹೆಸರುಘಟ್ಟ ಕೆರೆಗೆ ಗೃಹ, ಕೈಗಾರಿಕಾ ತ್ಯಾಜ್ಯ ಸೇರದಂತೆ ಎಚ್ಚರಿಕೆ ವಹಿಸಬೇಕು, ಅರ್ಕಾವತಿ ನದಿ ಮಲಿನವಾಗದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.

ಶನಿವಾರ (ಡಿ.27) ಹೆಸರುಘಟ್ಟ ಕೆರೆ ಹಾಗೂ ಹುಲ್ಲುಗಾವಲು ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನೈಸರ್ಗಿಕವಾಗಿ ಬೆಳೆದಿರುವ ಹುಲ್ಲುಗಾವಲಿನ ಸಂರಕ್ಷಣೆಯ ಜೊತೆಗೆ ಸಂವರ್ಧನೆಯನ್ನೂ ಮಾಡಬೇಕು, ಸುತ್ತಮುತ್ತಲ ಗ್ರಾಮಗಳ ಜನರ ದನಕರು, ಮೇಕೆ ಮೇಯಲು ಮುಕ್ತ ಅವಕಾಶ ಇರಬೇಕು, ಸ್ಥಳೀಯ ಗ್ರಾಮ ಪಂಚಾಯ್ತಿಗಳ ಮತ್ತು ಸಾರ್ವಜನಿಕರ ಸಹಕಾರ ಪಡೆದು ಈ ಪ್ರದೇಶ ಸಂರಕ್ಷಣೆ ಮಾಡುವಂತೆ ತಿಳಿಸಿದರು.

ಹುಲ್ಲುಗಾವಲು ಪಕ್ಷಿಗಳ ಸಂತಾನೋತ್ಪತ್ತಿಗೆ ಮಹತ್ವದ ತಾಣಗಳಾಗಿದ್ದು, ಇಲ್ಲಿ ಜಲ ಮೂಲಗಳೂ ಇರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ಗೂಡು ಕಟ್ಟಲು ಹೊಳೆ ಮತ್ತಿ ಹಾಗೂ ಆಹಾರಕ್ಕಾಗಿ ಹಣ್ಣಿನ ಗಿಡಗಳು ಸೇರಿದಂತೆ ವಿವಿಧ ಸ್ಥಳೀಯ ಪ್ರಭೇದದ ಮರಗಿಡಗಳನ್ನು ಸುತ್ತಲೂ ಬೆಳೆಸುವಂತೆ ನಿರ್ದೇಶನ ನೀಡಿದರು.

ಸಣ್ಣ ನೀರಾವರಿ ಇಲಾಖೆ, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಹೆಸರುಘಟ್ಟ ಪ್ರದೇಶದ ಸಮಗ್ರ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸಿಎಸ್ಆರ್ ನಿಧಿ ಬಳಕೆ ಮಾಡಿಕೊಳ್ಳಲು ಮತ್ತು ಅರಣ್ಯ ಇಲಾಖೆಯಿಂದ ಇದಕ್ಕಾಗಿ ಹಣ ಮೀಸಲಿಡಲು ಕಾರ್ಯಯೋಜನೆ ರೂಪಿಸುವಂತೆ ಸ್ಥಳದಲ್ಲಿ ಹಾಜರಿದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಅವರಿಗೆ ಸೂಚಿಸಿದರು.

ಹುಲ್ಲುಗಾವಲು ವಿಶೇಷತೆ ಏನು ?

ಬೆಂಗಳೂರಿನ ವಾಯವ್ಯ ಭಾಗದಲ್ಲಿರುವ ಹೆಸರಘಟ್ಟ ಹುಲ್ಲುಗಾವಲು ತನ್ನ ನೈಸರ್ಗಿಕ ಸೌಂದರ್ಯ ಮತ್ತು ಜೀವವೈವಿಧ್ಯತೆಯಿಂದಾಗಿ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ. ಮಹಾನಗರಕ್ಕೆ ಶ್ವಾಸಕೋಶದಂತಿರುವ ದೊಡ್ಡದಾದ ನೈಸರ್ಗಿಕ ಹುಲ್ಲುಗಾವಲು ಪ್ರದೇಶ ಇದಾಗಿದೆ. ಸುಮಾರು 345 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿರುವ ಈ ಪ್ರದೇಶವು ನಗರದ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಅಪರೂಪದ ಜೀವವೈವಿಧ್ಯತೆ

ಹುಲ್ಲುಗಾವಲು ಪ್ರದೇಶದಲ್ಲಿ ಸುಮಾರು 130ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಕಂಡುಬರುತ್ತವೆ. ವಿದೇಶಗಳಿಂದ ವಲಸೆ ಬರುವ ಪಕ್ಷಿಗಳಿಗೆ ಇದು ನೆಚ್ಚಿನ ತಾಣವಾಗಿದೆ. ಇಲ್ಲಿ 'ಲೆಸರ್ ಫ್ಲೋರಿಕನ್' ನಂತಹ ಅತ್ಯಂತ ಅಪರೂಪದ ಪಕ್ಷಿಗಳು ಮತ್ತು ಸಣ್ಣ ಸಣ್ಣ ವನ್ಯಜೀವಿಗಳಾದ ನರಿ, ಮುಂಗುಸಿ, ಹಾವುಗಳು ವಾಸಿಸುತ್ತವೆ.

Read More
Next Story