MM Hills Tiger Death | ಮಲೆ ಮಹದೇಶ್ವರ ಬೆಟ್ಟದಲ್ಲಿ 4 ಹುಲಿಗಳ ಅಸಹಜ ಸಾವು; ವಿಷಪ್ರಾಶನ ಶಂಕೆ
x

MM Hills Tiger Death | ಮಲೆ ಮಹದೇಶ್ವರ ಬೆಟ್ಟದಲ್ಲಿ 4 ಹುಲಿಗಳ ಅಸಹಜ ಸಾವು; ವಿಷಪ್ರಾಶನ ಶಂಕೆ

ಹುಲಿಗಳ ಅಸಹಜ ಸಾವಿನ ಕುರಿತು ತನಿಖೆ ನಡೆಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಲಾಗಿದೆ. 4 ಹುಲಿಗಳ ಅಸಹಜ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.


ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜವಾಗಿ ಸಾವಿಗೀಡಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ಸಂಬಂಧ ತನಿಖೆಗೆ ಆದೇಶಿಸಿದೆ.

ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಲಿಖಿತ ಸೂಚನೆ ನೀಡಿದ್ದಾರೆ. ಎಂ.ಎಂ. ಹಿಲ್ಸ್‌ ಅರಣ್ಯದಲ್ಲಿ 4 ಹುಲಿಗಳು ಸಾವಿಗೀಡಾಗಿರುವುದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ದೇಶದಲ್ಲಿ ಅಳಿವಿನಂಚಿನಲ್ಲಿದ್ದ ಹುಲಿಗಳ ಸಂರಕ್ಷಣೆಗಾಗಿ ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರು ಹುಲಿ ಯೋಜನೆ (ಪ್ರಾಜೆಕ್ಟ್ ಟೈಗರ್) ಆರಂಭಿಸಿದ ಪರಿಣಾಮ ರಾಜ್ಯದಲ್ಲಿ ಹುಲಿಗಳ ಸಂರಕ್ಷಣೆಗೆ ಕ್ರಮ ವಹಿಸಿದ್ದು, ಪ್ರಸ್ತುತ 563 ಹುಲಿಗಳೊಂದಿಗೆ ಕರ್ನಾಟಕವು ದೇಶದಲ್ಲೇ ಅತ್ಯಂತ ಹೆಚ್ಚು ಹುಲಿಗಳನ್ನು ಒಳಗೊಂಡಿರುವ 2ನೇ ರಾಜ್ಯವಾಗಿದೆ.

ಕಾರಣಗಳ ಪತ್ತೆಗೆ ತಂಡ ರಚನೆ

ಹುಲಿಗಳ ಅಸಹಜ ಸಾವಿಗೆ ನಿಖರ ಕಾರಣಗಳನ್ನು ಪತ್ತೆ ಮಾಡಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಈ ತಂಡವು ಸ್ಥಳ ತನಿಖೆ ಕೈಗೊಂಡು, ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿದೆ. ಒಂದು ವೇಳೆ ವಿದ್ಯುತ್ ಸ್ಪರ್ಶ, ವಿಷ ಪ್ರಾಷನ ಇತ್ಯಾದಿ ಕಾರಣಗಳಿಂದ ಹುಲಿಗಳ ಸಾವಾಗಿದ್ದರೆ ಅದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ವಹಿಸಲು ಸೂಚಿಸಲಾಗಿದೆ. ಜೊತೆಗೆ 3 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಸಚಿವ ಈಶ್ವರ್‌ ಖಂಡ್ರೆ ಅವರು ಸೂಚನೆ ನೀಡಿದ್ದಾರೆ.

ಹುಲಿ ಸಂರಕ್ಷಣೆಗೆ ಹೆಸರಾಗಿರುವ ರಾಜ್ಯದಲ್ಲಿ ಒಂದೇ ದಿನ 4 ಹುಲಿಗಳು ಅಸಹಜ ಸಾವಿಗೀಡಾಗಿರುವುದು ಅತ್ಯಂತ ನೋವು ತಂದಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನಡಿ ಅವರನ್ನು ಶಿಕ್ಷಿಸಲಾಗುವುದು ಎಂದು ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

Read More
Next Story