ಪಿಒಪಿ ಗಣೇಶ ಸಾಕು, ಪರಿಸರ ಸ್ನೇಹಿ ಗಣೇಶ ಬೇಕು: ಜನಜಾಗೃತಿಗೆ ಪರಿಸರ ಇಲಾಖೆ ನಿರ್ಧಾರ
x

ಪಿಒಪಿ ಗಣೇಶ ಸಾಕು, ಪರಿಸರ ಸ್ನೇಹಿ ಗಣೇಶ ಬೇಕು: ಜನಜಾಗೃತಿಗೆ ಪರಿಸರ ಇಲಾಖೆ ನಿರ್ಧಾರ


ಸೆಪ್ಟೆಂಬರ್‌ ತಿಂಗಳ (ಸೆ. 7) ಮೊದಲ ವಾರ ಗೌರಿ-ಗಣೇಶ ಹಬ್ಬ ಆಚರಣೆ ಇರಲಿದ್ದು, ಸಾರ್ವಜನಿಕರು ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಗಣೇಶನ ಮೂರ್ತಿಗಳ ಪೂಜೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮನೆ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.

ಆದರೆ, ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣೇಶ ವಿಗ್ರಹ ತ್ಯಜಿಸಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪೂಜೆಗೆ ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಪಿಒಪಿ ಗಣೇಶ ನಿಷೇಧವಿದ್ದರೂ, ಅದರ ಬಳಕೆ ಆಗುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಪಿಒಪಿ ಗಣೇಶನ ಬದಲಿಗೆ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಪೂಜೆಗೆ ಉತ್ತೇಜನ ನೀಡಲು ಸಾಮಾಜಿಕ ಜಾಲ ತಾಣ ಹಾಗೂ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.

ವಿಕಾಸಸೌಧದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಗಣಪತಿ ಹಬ್ಬದ ಸಂದರ್ಭದಲ್ಲೂ ರಾಜ್ಯದ ಕೆಲವೆಡೆ ಪಟಾಕಿ ಸಿಡಿಸುವ ಸಂಪ್ರದಾಯವಿದ್ದು, ಹಸಿರು ಪಟಾಕಿ ಮಾತ್ರ ಬಳಸುವಂತೆ ಹಾಗೂ ಪರಿಸರಕ್ಕೆ ಹಾನಿಯಾಗುವ ಭಾರಲೋಹಯುಕ್ತ ಪಟಾಕಿ ಬಳಸದಂತೆ ಜಾಗೃತಿ ಮೂಡಿಸಲು ಸೂಚಿಸಿದರು.

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ಅವು ನೀರಿನಲ್ಲಿ ನಿಧಾನವಾಗಿ ಕರಗುವುದೇ ಅಲ್ಲದೆ ನೀರಿನ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತದೆ. ಇದರ ಲವಣಾಂಶವು ನೀರಿನ ಶಾಶ್ವತ ಗಡಸುತನಕ್ಕೆ ಕಾರಣವಾಗುತ್ತದೆ. ರಾಸಾಯನಿಕಯುಕ್ತ ಬಣ್ಣಗಳಲ್ಲಿರುವ ಭಾರದ ಮತ್ತು ಅಪಾಯಕಾರಿ ಲೋಹಗಳು ನೀರಿನಲ್ಲಿ ಬೆರೆತು ನೀರಿನ ಮೂಲಗಳು ಕಲುಷಿತಗೊಳ್ಳುತ್ತವೆ. ಜಲಚರಗಳು ಸಾವನ್ನಪ್ಪುತ್ತವೆ ಹಾಗೂ ನೀರು ಸೇವೆನೆಗೆ ಯೋಗ್ಯವಾಗಿರುವುದಿಲ್ಲ ಎಂದು ಇಲಾಖೆ ಹೇಳಿದೆ. ಎಂದೂ ಹೇಳಿದೆ.

ಪಿಒಪಿ ಗಣೇಶ ವಿಗ್ರಹಗಳು, ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕಾರ ಮಾಡಿದ ಗಣೇಶ ಸೇರಿ ಯಾವುದೇ ವಿಗ್ರಹಗಳ ಉತ್ಪಾದನೆ, ಮಾರಾಟ ಹಾಗೂ ನೀರಿನಲ್ಲಿ ವಿಸರ್ಜನೆ ಮಾಡುವುದನ್ನು ನಿಷೇಧಿಸಿ ಅರಣ್ಯ ಮತ್ತು ಪರಿಸರ ಇಲಾಖೆ ಕಳೆದ ವರ್ಷವೇ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಉಲ್ಲಂಘನೆಯಾದಲ್ಲಿ ಅದು ಶಿಕ್ಷಾರ್ಹ ಅಪರಾಧ ಆಗುತ್ತದೆ ಹಾಗೂ ಕನಿಷ್ಠ ಒಂದೂವರೆ ವರ್ಷ ಹಾಗೂ ಗರಿಷ್ಠ ಆರು ವರ್ಷಗಳ ಕಾರಾಗೃಹವಾಸ ಶಿಕ್ಷೆ ವಿಧಿಸಲಾಗುತ್ತದೆ. ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣೆ) ಕಾಯ್ದೆ 1974ರ ಅನ್ವಯ ಕಲಂ 33(ಎ) ಅಡಿಯಲ್ಲಿ ಈ ರೀತಿಯ ವಿಗ್ರಹಗಳ ತಯಾರಿಕೆ ಘಟಕಗಳನ್ನು ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿದೆ ಸರ್ಕಾರಕ್ಕಿದೆ.

ಏಕಬಳಕೆ ಪ್ಲಾಸ್ಟಿಕ್‌: ಕ್ರಮ

ಜತೆಗೆ ಏಕ ಬಳಕೆ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಎಲ್ಲ ಜಿಲ್ಲೆಗಳಲ್ಲೂ ಮಾರ್ಷಲ್ ಗಳನ್ನು ಒಳಗೊಂಡ ಕಾರ್ಯಪಡೆ ರಚಿಸಿ ಏಕ ಬಳಕೆ ಪ್ಲಾಸ್ಟಿಕ್ ಮತ್ತು ಅದರ ಉತ್ಪನ್ನಗಳ ಮಾರಾಟ, ದಾಸ್ತಾನು ಮತ್ತು ಸಾಗಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವಂತೆ ಸೂಚಿಸಲಾಗಿದೆ. ಎಲ್ಲ ಜಿಲ್ಲಾ ಕೇಂದ್ರದಲ್ಲೂ ತಂಡ ರಚಿಸಿ, ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ಕ್ಯಾರಿಬ್ಯಾಗ್, ಚಮಚ, ತಟ್ಟೆ, ಲೋಟ ಇತ್ಯಾದಿ ತಯಾರಿಸುವ ಘಟಕಗಳು, ಗೋದಾಮು ಮತ್ತು ಮಾರಾಟ ಮಳಿಗೆಗಳ ಮೇಲೆ ನಿಗಾ ಇಟ್ಟು, ದಾಳಿ ನಡೆಸಿ ಪ್ರಕರಣ ದಾಖಲಿಸುವಂತೆ ನಿರ್ದೇಶಿಸಿದರು.

ಏಕ ಬಳಕೆ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಉತ್ಪನ್ನಗಳು ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವುದನ್ನು ನಿಯಂತ್ರಿಸಲು ಸಾರಿಗೆ, ಪೊಲೀಸ್, ವಾಣಿಜ್ಯ ತೆರಿಗೆ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆಯೂ ತಿಳಿಸಿದರು

ಟೈರ್ ಪೈರೋಲಿಸಿಸ್ ಸೇರಿದಂತೆ ಅತಿ ಹೆಚ್ಚು ಇಂಗಾಲ ಮತ್ತು ಇಂಗಾಲದ ಡೈಆಕ್ಸೈಡ್ ಹೊರಸೂಸುವ, ರಾಸಾಯನಿಕ ತ್ಯಾಜ್ಯ ಮತ್ತು ಬಳಸಿದ ತೈಲವನ್ನು ಕೊಳವೆ ಬಾವಿಗೆ ಸುರಿಯುವ, ರಾಸಾಯನಿಕ ಯುಕ್ತ ತ್ಯಾಜವನ್ನು ಜಲ ಮೂಲಗಳಿಗೆ ಸಂಸ್ಕರಿಸದೆ ಹರಿಸುವ ಕೈಗಾರಿಕಾ ಘಟಕಗಳ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುವಂತೆಯೂ ಸೂಚಿಸಿದರು.

Read More
Next Story