Jog Falls| ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ; ಆದರೂ ಪ್ರವೇಶ ದರ ದುಬಾರಿ
x

Jog Falls| ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ; ಆದರೂ ಪ್ರವೇಶ ದರ ದುಬಾರಿ

ಜೋಗ ಜಲಪಾತ ಆರವಣದಲ್ಲಿ ಶೌಚಾಲಯ, ಕುಡಿಯುವ ನೀರಿಲ್ಲ, ಇಡೀ ಆವರಣವೇ ಅಭಿವೃದ್ಧಿ ಹೆಸರಲ್ಲಿ ಎರಡು ವರ್ಷಗಳಿಂದ ಅಧ್ವಾನವಾಗಿದೆ. ಕಾಮಗಾರಿಗಳೆಲ್ಲಾ ಮುಗಿದ ಮೇಲೆ ದರ ಪರಿಷ್ಕರಣೆ ಮಾಡಬಹುದಿತ್ತು ಎಂದು ಪ್ರವಾಸಿಗರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವಿಶ್ವಪ್ರಸಿದ್ಧ ಗೇರುಸೊಪ್ಪೆ ಜಲಪಾತ ಅಥವಾ ಜೋಗ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಬೇಕಾದ ಮೂಲಸೌಕರ್ಯಗಳಿಲ್ಲ. ಆದರೂ ಅಧಿಕ ಪ್ರವೇಶ ಶುಲ್ಕದ ಬರೆ!

ಹೌದು. ಇತ್ತೀಚೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಿದಂತೆ ʼಜೋಗ ನಿರ್ವಹಣಾ ಪ್ರಾಧಿಕಾರʼ ಪ್ರವೇಶ ಶುಲ್ಕವನ್ನು ಪರಿಷ್ಕರಣೆ ಮಾಡಿದೆ. ಹಾಗಾಗಿ ಹಲವು́ ವರ್ಷಗಳಿಂದ ದರ ಏರಿಕೆ ಕಾಣದ ಜಲಪಾತದ ಆವರಣ ಈಗ ತುಸು ದುಬಾರಿಯಾಗಿದೆ. ಆದರೆ ಮೊದಲಿದ್ದ ಮೂಲ ಸೌಕರ್ಯವೂ ಜಲಪಾತದ ಆವರಣದಲ್ಲಿ ಇಲ್ಲದೇ ಇರುವುದು ಸಾರ್ವಜನಿಕರು ಹಾಗೂ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ ವಾರದಿಂದ ಜಾರಿಯಾದ ಪ್ರವೇಶ ಶುಲ್ಕ ಹೀಗಿದೆ.

ಸಾಮಾನ್ಯ ಪ್ರವಾಸಿಗನಿಗೆ ಮೊದಲು ಹತ್ತು ರೂಪಾಯಿ ಇತ್ತು, ಈಗದು ಇಪ್ಪತ್ತು ರೂಪಾಯಿ ಆಗಿದೆ. ಬಸ್‌ ಇಳಿದು ಪ್ರವೇಶ ಪಡೆವ ವ್ಯಕ್ತಿ ಮಾತ್ರ ಸಾಮಾನ್ಯನಾಗಿರುತ್ತಾನೆ. ಅದೇ ಈತ ಬೈಕ್‌ನಲ್ಲಿ ಬಂದರೆ ಸ್ಥಳೀಯ ಎಂದು ಪರಿಗಣಿಸಿದರೂ ಮೂವತ್ತು ರೂಪಾಯಿ ದರವಿದೆ. ಈ ದರ ಮೊದಲು ಇಪತ್ತು ರೂಪಾಯಿಯಾಗಿತ್ತು. ಸ್ಥಳೀಯನೇ ಆಗಿರಲಿ, ಪರ ಊರಿನವನೇ ಆಗಿರಲಿ ಕಾರ್‌ನಲ್ಲಿ ಬಂದರೆ ಆತ ಶ್ರೀಮಂತ ಜೊತೆಗೆ ಎಂಭತ್ತು ರೂಪಾಯಿ ಕೊಡಲೇಬೇಕು. ಆಟೋದಲ್ಲಾದರೆ ನಲವತ್ತು ರೂಪಾಯಿ, ಟಿಟಿ ಅಥವಾ ಮಿನಿಬಸ್‌ಗೆ ನೂರೈವತ್ತು ಹಾಗೂ ಬಸ್‌ಗೆ ಇನ್ನೂರು ರೂಪಾಯಿ ದರ ವಿಧಿಸಿ ಪರಿಷ್ಕರಣೆ ಮಾಡಲಾಗಿದೆ. ವಿದೇಶಿಯರಾದರೆ ನೂರು ರೂಪಾಯಿ ಬೆಲೆಯಿದೆ. ಹೈಸ್ಕೂಲ್‌ವರೆಗಿನ ವಿದ್ಯಾರ್ಥಿಗಳಿಗೆ ಇಪ್ಪತ್ತು ರೂಪಾಯಿ ನಿಗದಿ ಮಾಡಲಾಗಿದೆ. ಪ್ರಾಧಿಕಾರದ ಅಧಿಕಾರಿಗಳ ಪೂರ್ವಾನುಮತಿ ಇದ್ದರೆ ಅರ್ಧದಷ್ಟು ರಿಯಾಯಿತಿ ಕೂಡ ಸಿಗಲಿದೆ. ವಾಹನಗಳಲ್ಲಿ ಬರುವವರು ಒಳಗಿರುವವರಿಗೆ ಪ್ರತ್ಯೇಕ ಟಿಕೆಟ್‌ ತೆಗೆದುಕೊಳ್ಳಬೇಕು. ಮೊದಲಿನ ದರಪಟ್ಟಿಯಲ್ಲಿದ್ದಂತೆ ಪಾರ್ಕಿಂಗ್‌ ಅವಧಿ ನಾಲ್ಕು ಗಂಟೆ ಇತ್ತು. ಆದರೆ ಈಗ ಅದು ಎರಡೇ ಗಂಟೆ ಎಂದು ನಮೂದಿಸಲಾಗಿದೆ.

ಕೆಲವೊಮ್ಮೆ ಜಲಪಾತ ದರ್ಶನವೇ ಆಗದಿದ್ದರೆ ಪರಿತಪಿಸಲೇಬೇಕಿದೆ. ಅಚ್ಛರಿ ಎಂಬಂತೆ ಜೋಗ ಜಲಪಾತ ಸೆರೆಹಿಡಿಯಲು ಕ್ಯಾಮೆರಾಗಳೊಂದಿಗೆ ಬಂದರೆ ಅದಕ್ಕೆ ಪ್ರತ್ಯೇಕ ದರ ನೀಡಬೇಕು. ಈ ಕಲಂ ಹೊಸದಾಗಿ ಸೇರಿಸಲಾಗಿದ್ದು ಡಿಎಸ್‌ಎಲ್‌ಆರ್‌ಗೆ ನೂರು ರೂಪಾಯಿ ಹಾಗೂ ೩೬೦ಡಿಗ್ರಿ ಅಥವಾ ಡ್ರೋನ್‌ ತರಹದ ಕ್ಯಾಮೆರಾಗಳಿಗೆ ಬರೊಬ್ಬರಿ ಐನೂರು ರೂಪಾಯಿ ಶುಲ್ಕ ಸೇರಿಸಿದ್ದಾರೆ. ಅಪರೂಪಕ್ಕೆ ಧುಮ್ಮಿಕ್ಕಿದ್ದ ಜಲಪಾತ ವೈಭವ ರೀಲ್ಸ್ ಮಾಡಿ ವೈರಲ್ ಮಾಡಿದ್ದವರಿಗೂ ಶಾಕ್‌ ನೀಡಲಾಗದಿದೆ. ಮಾಜಿ ಸೈನಿಕರು ಹಾಗೂ ಅಧಿಕೃತ ಕಾರ್ಡ್‌‌ದಾರ ಪತ್ರಕರ್ತರಿಗೆ ಉಚಿತ ಪ್ರವೇಶ ಕಲ್ಪಿಸಿದ್ದಾರೆ. ಇವ್ಯಾವದೂ ಆನ್‌ಲೈನ್ ಟಿಕೆಟ್‌ ಅಲ್ಲ. ಪ್ರವೇಶ ದ್ವಾರದಲ್ಲಿ ಸೀಲ್‌ ಗುದ್ದಿ ನೀಡುವ ಸಾಮಾನ್ಯ ಚೀಟಿಗಳಾಗಿವೆ.


ಹೊಸ ದರದ ಚಾರ್ಟ್‌‌ನ್ನು ದ್ವಾರ ಬಾಗಿಲಿಗೆ ನೇತುಹಾಕುವ ಸಂದರ್ಭ ಸ್ಥಳೀಯರೇ ಆದ ಕಾರ್ಗಲ್‌ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್‌ಎಲ್‌ ರಾಜ್‌ ಕುಮಾರ್‌ ರೊಚ್ಚಿಗೆದ್ದು ಕೂಗಾಡಿದರು. ಸ್ಥಳದಲ್ಲಿ ಹಾಜರಿದ್ದ ಪ್ರವಾಸೋದ್ಯಮ ಇಲಾಖೆ ಉಪನಿದೇಶಕ ಧರ್ಮಪ್ಪರನ್ನ ಪ್ರಶ್ನಿಸಿ ಅವ್ಯವಸ್ಥೆಯ ಆಗರವಾಗಿರೋ ಜೋಗ ಆವರಣಕ್ಕೇಗೆ ದುಪ್ಪಟ್ಟು ಶುಲ್ಕ, ಜಲಪಾತವೂ ಕೂಡ ನಿಸರ್ಗದತ್ತ ಎಂದರು. ಶೌಚಾಲಯ, ಕುಡಿಯುವ ನೀರಿಲ್ಲ, ಇಡೀ ಆವರಣವೇ ಅಭಿವೃದ್ಧಿ ಹೆಸರಲ್ಲಿ ಎರಡು ವರ್ಷಗಳಿಂದ ಅಧ್ವಾನವಾಗಿದೆ. ಕಾಮಗಾರಿಗಳೆಲ್ಲಾ ಮುಗಿದ ಮೇಲೆ ದರ ಪರಿಷ್ಕರಣೆ ಮಾಡಬಹುದಿತ್ತು. ವಿಪರ್ಯಾಸ ಎಂದರೆ ಪಾರ್ಕಿಂಗ್‌ ಸೌಲಭ್ಯವೇ ಇಲ್ಲದೇ ಪಾರ್ಕಿಂಗ್‌ ಶುಲ್ಕ ಸಂಗ್ರಹ ಏಕೆ ಎಂದು ತರಾಟೆಗೆ ತೆಗೆದುಕೊಂಡರು. ಏನೂ ಪ್ರಯೋಜವಾಗಲಿಲ್ಲ, ಚಾರ್ಟ್ ತಗುಲಿಹಾಕಿದ ಅಧಿಕಾರಿ ಜಿಲ್ಲಾಧಿಕಾರಿಗಳನ್ನ ಕೇಳಿ ಎಂದು ನಡೆದರು.

ದರ ಏರಿಕೆ ಬಗ್ಗೆ ಮಾಹಿತಿ ಪಡೆಯಲು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯೊಂದಿಗೆ ದ ಫೆಡರಲ್‌ ಕರ್ನಾಟಕ ಸಂಪರ್ಕಿಸಿತು.ಅವರು ನೀಡಿದ ಮಾಹಿತಿ ಇನ್ನೂ ವ್ಯತಿರಿಕ್ತವಾಗಿದೆ. ಪ್ರಾಧಿಕಾರದ ನಿರ್ವಹಣೆಗೆಂದು ವಿಶೇಷ ಅನುದಾನವೇನೂ ಬರೋದಿಲ್ಲ. ಒಟ್ಟು ಹತ್ತೊಂಭತ್ತು ಜನರು ಕೆಲಸ ಮಾಡುತ್ತಾರೆ. ಅವರಿಗೆ ಸಂಬಳ ಈ ಹಣದಿಂದಲೇ ನೀಡಬೇಕು. ಇದೂ ಕೂಡ ನಿರ್ವಹಣೆಗೆ ಸಾಲೋದಿಲ್ಲ ಎಂದು ಹೇಳಿದರು. ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದಾಗ, ಕಾಮಗಾರಿಗಳು ಆರಂಭವಾಗಿವೆ. ಮುಗಿಯುವ ತನಕ ಸಣ್ಣಪುಟ್ಟ ಸಮಸ್ಯೆಗಳು ಸಹಜ ಎನ್ನುತ್ತಾರೆ. ಕುಡಿವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಸರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ ನಿರ್ವಹಣಾ ಅಧಿಕಾರಿಯೊಬ್ಬರು ಮಾತನಾಡಿ, ನಿಯಮಗಳ ಪ್ರಕಾರ ಬಂದ್‌ ಮಾಡಿ ಕೆಲಸಗಳನ್ನ ಮಾಡಬೇಕು. ಆದರೆ, ಪ್ರವಾಸಿಗರನ್ನ ತಡೆಯಲು ಸಾಧ್ಯವಿಲ್ಲ. ಆವರಣದ ತುಂಬೆಲ್ಲಾ ಹರವಿಕೊಂಡ ಸಾಮಾಗ್ರಿಗಳಿಂದಲೂ ಆಪತ್ತು ಬರಬಹುದು. ಈ ನಿರ್ವಹಣೆಗೆ ಹೆಚ್ಚು ಭದ್ರತಾ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿದೆ ಎಂದರು.

ನೂರಾರು ಕೋಟಿ ಪ್ರಾಜೆಕ್ಟ್‌:

ಕೊರೋನಾ ಪೂರ್ವದಲ್ಲಿ ಉದ್ಯಮಿ ಬಿಆರ್‌ ಶೆಟ್ಟಿ ಈ ನಿಸರ್ಗದತ್ತ ಜಲಪಾತವನ್ನ ಸರ್ವಋತು ಜೋಗ ಮಾಡ್ತೀನೆಂದು ಹೊರಟಿದ್ದರು. ಕೊರೋನಾ ಹೊಡೆತದಲ್ಲಿ ಅವರ ವ್ಯವಹಾರವೂ ನೆಲಕಚ್ಚಿ ಸರ್ಕಾರಗಳಿಗೂ ಭಯ ಶುರುವಾಯ್ತು. ಅದಾದ ಬಳಿಕ ಹಿಂದಿನ ಸರ್ಕಾರದಲ್ಲಿ ಅತೀ ಹಸ್ತಾಕ್ಷೇಪವಿದ್ದ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಸುಮಾರು ೧೮೩ ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿದರು ಆದರೆ ಹಣ ಬಿಡುಗಡೆಯಾಗಿದ್ದು ಮಾತ್ರ ಕೇವಲ ಇಪ್ಪತ್ತು ಕೋಟಿಯಂತೆ. ಈ ಬಗ್ಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ತಾನು ಎಂಭತ್ತು ಕೋಟಿ ಬಿಡುಗಡೆ ಮಾಡಿಸಿದ್ದೇನೆ. ಉಳಿದ ಬಾಬ್ತು ಕೂಡ ಇನ್ನೇನು ಬಿಡುಗಡೆಯಾಗಲಿದೆ ಎಂದು ಶಾಸಕರು ಹೇಳಿದ್ದಾರೆ. ಈ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಘವೇಂದ್ರ ಪ್ರವೇಶದರ ಹಾಗೂ ಸಮಯವನ್ನ ಮರುಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿಗಳೊಡನೆ ಮಾತಾಡ್ತೀನಿ ಎಂದರು.

ಒಟ್ಟು ಕಾಮಗಾರಿ ಮುಗಿಯಲು ಇನ್ನೂ ಎರಡು ವರ್ಷ ತಗುಲಿದರೂ ಅಚ್ಚರಿಯಿಲ್ಲ. ಸಹಜ ಜೋಗವನ್ನ ಕಾಂಕ್ರಿಟ್‌ಮಯಮಾಡಿ ಅಮ್ಯೂಸ್ಮೆಂಟ್‌ ಪಾರ್ಕ ಮಾಡಲಾಗುತ್ತಿದೆ. ಇವೆಲ್ಲಾ ಪೂರ್ಣಗೊಂಡ ಮೇಲೆ ಇನ್ನೆಷ್ಟು ದರ ವಿಧಿಸುತ್ತಾರೋ ಎಂಬುದು ಯಕ್ಷಪ್ರಶ್ನೆ.

Read More
Next Story