![BJP Infighting | ಬಿಜೆಪಿಯಲ್ಲಿ ಮುಗಿಯದ ಭಿನ್ನಮತ; ವರಿಷ್ಠರ ನಡೆಗೆ ಅಸಮಾಧಾನ BJP Infighting | ಬಿಜೆಪಿಯಲ್ಲಿ ಮುಗಿಯದ ಭಿನ್ನಮತ; ವರಿಷ್ಠರ ನಡೆಗೆ ಅಸಮಾಧಾನ](https://karnataka.thefederal.com/h-upload/2025/02/08/511496-bj-1.webp)
BJP Infighting | ಬಿಜೆಪಿಯಲ್ಲಿ ಮುಗಿಯದ ಭಿನ್ನಮತ; ವರಿಷ್ಠರ ನಡೆಗೆ ಅಸಮಾಧಾನ
BJP Infighting : ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು, ಭಿನ್ನಮತೀಯ ಗುಂಪಿನ ನಾಯಕರೊಂದಿಗೆ ಯಾವುದೇ ಸಭೆ ನಡೆಸದೇ, ಅಭಿಪ್ರಾಯ ಸಂಗ್ರಹಿಸದೇ ವಾಪಸ್ ತೆರಳಿರುವುದು ಮತ್ತಷ್ಟು ಬೇಸರ ಮೂಡಿಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆಗಳು (BJP Infighting) ಬಿರುಸು ಪಡೆದಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ- ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣಗಳ ನಡುವಿನ ಬಡಿದಾಟ, ಶ್ರೀರಾಮುಲು-ಜನಾರ್ಧನ ರೆಡ್ಡಿ ನಡುವಿನ ದೋಸ್ತಿ ಕದನ, ಸಂಸದ ಡಾ.ಕೆ.ಸುಧಾಕರ್- ಶಾಸಕ ಎಸ್.ವಿಶ್ವನಾಥ್ ಕಲಹ ಪಕ್ಷವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಈ ಮಧ್ಯೆ ಬೆಂಗಳೂರಿಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು, ಭಿನ್ನಮತೀಯ ಗುಂಪಿನ ನಾಯಕರೊಂದಿಗೆ ಯಾವುದೇ ಸಭೆ ನಡೆಸದೇ, ಅಭಿಪ್ರಾಯ ಸಂಗ್ರಹಿಸದೇ ವಾಪಸ್ ತೆರಳಿರುವುದು ಮತ್ತಷ್ಟು ಬೇಸರ ಮೂಡಿಸಿದೆ.
ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಕುರಿತು ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ ಬಣದ ನಾಯಕ ಕುಮಾರ್ ಬಂಗಾರಪ್ಪ ಅವರು, "ಬಿಜೆಪಿ ರಾಜ್ಯ ಸಹ ಉಸ್ತುವಾರಿ ಅವರು ಮಾಮೂಲಿಯಂತೆ ಭೇಟಿ ನೀಡಿದ್ದಾರೆ. ಯಾವುದೇ ಭಿನ್ನಮತ ಶಮನದ ಮಾತುಕತೆಗಾಗಿ ಬಂದಿರಲಿಲ್ಲ. ನಾವು ಕೂಡ ಅವರನ್ನು ಭೇಟಿ ಮಾಡಿಲ್ಲ. ಈಗಾಗಲೇ ದೆಹಲಿ ನಾಯಕರಿಗೆ ರಾಜ್ಯ ಬಿಜೆಪಿ ನಾಯಕತ್ವದ ಕುರಿತು ವಿವರ ನೀಡಿದ್ದೇವೆ. ಭಿನ್ನಮತ ಶಮನಗೊಳಿಸುವ ಭರವಸೆ ನೀಡಿದ್ದಾರೆ" ಎಂದು ಹೇಳಿದರು.
"ಈ ಹಿಂದೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನದಾಸ್ ಅಗರ್‌ವಾಲ್ ಅವರು ಆಗಮಿಸಿದ್ದರು. ಈಗ ಸುಧಾಕರ ರೆಡ್ಡಿ ಅವರು ಬಂದು ಹೋಗಿದ್ದಾರೆ. ಉಳಿದಂತೆ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ನಮ್ಮ ಹೋರಾಟ ಅಚಲವಾಗಿದೆ. ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನಾಂಕ ಘೋಷಿಸುವ ಮುನ್ನ ಪಕ್ಷದಲ್ಲಿರುವ ಆಂತರಿಕ ಭಿನ್ನಮತ ಶಮನಗೊಳಿಸಲು ಕೋರಿದ್ದೇವೆ. ಒಂದು ವೇಳೆ ಭಿನ್ನಮತ ಶಮನ ಕಾಣದಿದ್ದರೆ ನಾವೂ ಕೂಡ ಬಿಜೆಪಿ ಅಧ್ಯಕ್ಷ ಸ್ಥಾನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ" ಎಂದು ಹೇಳಿದರು.
ಸಂಯಮ ಪಾಲನೆಗೆ ತಾಕೀತು
ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರರೆಡ್ಡಿ ಅವರು, ದಿಢೀರ್ ಬಿಜೆಪಿ ಕಚೇರಿಗೆ ಆಗಮಿಸಿದ್ದರು. ಆದರೆ, ಯಾವುದೇ ಭಿನ್ನರನ್ನು ಭೇಟಿಯಾಗಿಲ್ಲ, ಭಿನ್ನಮತದ ಚರ್ಚೆಯೂ ಮಾಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಸುಧಾಕರೆ ರೆಡ್ಡಿ ಅವರು, 'ಕೆಲ ನಾಯಕರ ಬಹಿರಂಗ ಹೇಳಿಕೆಗಳಿಂದ ಕಾರ್ಯಕರ್ತರಿಗೆ ನೋವಾಗಿದೆ. ಯಾರೂ ಕೂಡ ಶಿಸ್ತು ಮೀರಿ ಹೇಳಿಕೆ ನೀಡಬಾರದು. ಸಮಸ್ಯೆಗಳಿದ್ದರೆ ಮಾತುಕತೆ ಮೂಲಕ ಬಗೆಹರಿಸಲು ಕೇಂದ್ರ ನಾಯಕತ್ವ ಸಮರ್ಥವಾಗಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಸಂಯಮ ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ವಿಜಯೇಂದ್ರ ಬಣ ಬೇಸರ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದರೂ ಈವರೆಗೂ ಕ್ರಮ ಜರುಗಿಸದ ಬಗ್ಗೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬಣದ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಶೋಕಾಶ್ ನೋಟಿಸ್ ನೀಡಿದ ನಂತರವೂ ಯತ್ನಾಳ್ ಬಣದ ನಾಯಕರು ರಾಜ್ಯಾಧ್ಯಕ್ಷರು ಹಾಗೂ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಯತ್ನಾಳ್ ಬಣದ ನಾಯಕರ ಟೀಕೆಗೆ ಉತ್ತರ ನೀಡದೇ ಕೆಲ ಹಿರಿಯ ನಾಯಕರು 'ಆನಂದ' ಅನುಭವಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೇಸರ ವ್ಯಕ್ತಪಡಿಸಿರುವುದು ಪರಿಸ್ಥಿತಿಯನ್ನು ಕಗ್ಗಂಟಾಗಿಸಿದೆ.
ಟೀಕಾಕಾರರ ವಿರುದ್ಧ ಕ್ರಮದ ಎಚ್ಚರಿಕೆ
ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಬಹಿರಂಗ ಟೀಕೆಗಳಲ್ಲಿ ತೊಡಗಿರುವವರನ್ನು ದೆಹಲಿಯ ವರಿಷ್ಠರು ಗಮನಿಸುತ್ತಿದ್ದು, ಸೂಕ್ತ ಕ್ರಮ ಜರುಗಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪಕ್ಷ ಕೆಲ ನಾಯಕರು ವಿವೇಚನೆಯಿಂದ ವರ್ತಿಸುತ್ತಿಲ್ಲ. ಸ್ವಹಿತಕ್ಕಾಗಿ ಪಕ್ಷ ಸಂಘಟನೆಗೆ ಹಾನಿ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ವರಿಷ್ಠರು ಮಾಹಿತಿ ಕಲೆ ಹಾಕುತ್ತಿದ್ದು, ಸೂಕ್ತ ಸಮಯದಲ್ಲಿ ಕ್ರಮ ಜರುಗಿಸುವುದು ನಿಶ್ಚಿತ ಎಂದು ತಿಳಿಸಿವೆ.
ಕೆಲವರು ಬಹಿರಂಗ ಟೀಕೆಗಳಲ್ಲಿ ತೊಡಗಿರುವುದು, ಗೌಪ್ಯ ಸಭೆ ನಡೆಸುವುದು, ಗುಂಪು ಕಟ್ಟಿಕೊಂಡು ದೆಹಲಿಗೆ ಹೋಗುತ್ತಿರುವುದನ್ನು ವರಿಷ್ಠರು ಸಹಿಸುತ್ತಿಲ್ಲ. ಭಿನ್ನರನ್ನು ಎತ್ತಿಕಟ್ಟುತ್ತಿರುವವರು ಯಾರೆಂಬುದು ವರಿಷ್ಠರ ಗಮನಕ್ಕೆ ಬಂದಿದೆ. ಅಂತವರ ವಿರುದ್ಧ ಕ್ರಮ ಜರುಗಿಸಲಿದೆ ಎಂದು ಹೇಳಿವೆ.
ಇತ್ತೀಚೆಗಷ್ಟೇ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಲಿಂಬಾವಳಿ ಅವರು ವರಿಷ್ಠರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿಯಲ್ಲಿ ತಲೆದೋರಿರುವ ಭಿನ್ನಮತ ಸೇರಿದಂತೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದರು.