Emphasis on Gram Swarajya from decentralization of power: CM Siddaramaiah
x

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.

ವಿಕೇಂದ್ರೀಕರಣದ ಕಟ್ಟುನಿಟ್ಟಿನ ಪಾಲನೆಗೆ ಸಿಎಂ ಸೂಚನೆ: ಮೀಸಲಾತಿ, ಯೋಜನಾ ಸಭೆಗಳಿಗೆ ಒತ್ತು

ವಿಕೇಂದ್ರೀಕರಣ ಪ್ರಕ್ರಿಯೆಯಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ, ಜನರ ಅಭಿಪ್ರಾಯಗಳಿಗೆ ಅಧಿಕಾರಿಗಳು ಮನ್ನಣೆ ನೀಡಬೇಕು. ಬಜೆಟ್ ಮಂಡನೆಗೆ ಪೂರ್ವಭಾವಿಯಾಗಿ ಯೋಜನಾ ಮತ್ತು ಅಭಿವೃದ್ಧಿ ಸಮಿತಿಗಳು ಸಭೆ ನಡೆಸಿ, ಜನರ ಅಭಿಪ್ರಾಯಗಳನ್ನು ಚರ್ಚಿಸಬೇಕು.


‘ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ನಿಯಮಿತವಾಗಿ ರಾಜ್ಯ ಪ್ರವಾಸ ಮಾಡಬೇಕು. ಗ್ರಾಮ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ಹಿಂದುಳಿದವರಿಗೆ ಮೀಸಲಾತಿ ಸರಿಯಾಗಿ ಪಾಲನೆ ಆಗುತ್ತಿದೆಯೇ ಎಂದು ಗಮನ ವಹಿಸಬೇಕು’ ಎಂದು ನೀತಿ ಮತ್ತು ಯೋಜನಾ ಆಯೋಗ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಜಂಟಿ ಸಭೆ ಗುರುವಾರ ನಡೆಯಿತು. ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಒತ್ತು ನೀಡಬೇಕು. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಗ್ರಾಮಗಳ ನಕ್ಷೆ ಸಿದ್ಧಪಡಿಸುವ ಕಾರ್ಯವನ್ನು 2025 ಆಗಸ್ಟ್ 15ರೊಳಗೆ ಪೂರ್ಣಗೊಳಿಸಲು ಸಿಎಂ ಸೂಚನೆ ನೀಡಿದರು.

‘ನಾನು ವಿಕೇಂದ್ರೀಕರಣದ ಪರ, ಅಧಿಕಾರವನ್ನು ಗ್ರಾಮ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಅಧಿಕಾರ ವಿಕೇಂದ್ರೀಕರಣದಲ್ಲಿ ಜನರ ಒಳಗೊಳ್ಳುವಿಕೆ ಮುಖ್ಯ. ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ಯೋಜನಾ ಮತ್ತು ಅಭಿವೃದ್ಧಿ ಸಮಿತಿಗಳು ಬಜೆಟ್ ಮಂಡನೆಗೆ ಪೂರ್ವದಲ್ಲಿ ಸಭೆ ಕರೆದು ಅಭಿಪ್ರಾಯಗಳನ್ನು ಚರ್ಚಿಸಬೇಕು’ ಎಂದರು.

ನೀತಿ ಯೋಜನೆ ಸಮಿತಿಗಳ ಆಯ್ಕೆ ಕಾಲಕಾಲಕ್ಕೆ ಆಗಬೇಕು ಹಾಗೂ ಸಭೆಗಳು ನಿಯಮಿತವಾಗಿ ನಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲು ತೀರ್ಮಾನಿಸಲಾಯಿತು. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಶಿಫಾರಸುಗಳನ್ನು ಬಜೆಟ್ ಪೂರ್ವ ಸಭೆಗಳಲ್ಲಿ ಮಂಡಿಸುವಂತೆ ಸೂಚಿಸಿದರು.

‘ಗ್ರಾಮ ಠಾಣಾ ಗಡಿಯನ್ನು ಬಹಳ ಹಿಂದೆ ನಿಗದಿ ಪಡಿಸಲಾಗಿದ್ದು ಪ್ರಸ್ತುತ ವಿಸ್ತರಣೆ ಆಗಿರುವ ಪ್ರದೇಶವನ್ನು ಪುನರ್ ಸಮೀಕ್ಷೆ ಮಾಡಿಸಿ ನಿಗದಿಪಡಿಸಲು ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಕ್ರಮ ವಹಿಸಬೇಕು. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ಲ್ಯಾಂಡ್ ಬ್ಯಾಂಕ್ ಸ್ಥಾಪನೆ, ಗ್ರಾಮ ನಕ್ಷೆ ಹೊಂದಿರದ ಗ್ರಾಮಗಳಿಗೆ ಗ್ರಾಮ ನಕ್ಷೆ ರಚನೆ ಕುರಿತಂತೆಯೂ ಪ್ರಸ್ತಾವನೆ ಸಲ್ಲಿಸಬೇಕು’ ಎಂದೂ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ಬಿ.ಆರ್. ಪಾಟೀಲ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಭೆಯಲ್ಲಿ ಇದ್ದರು.

Read More
Next Story