ಅರ್ಹತೆ ಇರುವವರು ಸಿಎಂ ಕುರ್ಚಿಗೆ ಟವೆಲ್ ಹಾಕ್ತಾರೆ: ಡಿಕೆಶಿ ಪಕ್ಕದಲ್ಲಿದ್ದಾಗಲೇ ಎಚ್ ಡಿಕೆ ಹೇಳಿಕೆಗೆ ಟಾಂಗ್ ಕೊಟ್ಟ ಸಿಎಂ
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಬಯಲಾಗಿರುವುದು ಮುಖ್ಯಮಂತ್ರಿಗಳ ಕುರ್ಚಿಗೆ ಟವೆಲ್ ಹಾಕಿದವರಿಂದ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಅರ್ಹತೆ ಇರುವವರು ಮುಖ್ಯಮಂತ್ರಿ ಆಗಲು ಟವೆಲ್ ಹಾಕುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಹೀಗೆ ಟಾಂಗ್ ಕೊಡುವಾಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಕ್ಕದಲ್ಲೇ ಕುಳಿತಿದ್ದರು ಎಂಬುದು ವಿಶೇಷ.
ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಟಿ ನಡೆಸಿದ ಸಿದ್ದರಾಮಯ್ಯ, ʻʻಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವರದಿ ಕೇಳಿದ್ದಾರೆ, ಕೊಡುತ್ತೇವೆ. ಎಲ್ಲವೂ ಕಾನೂನು ಪ್ರಕಾರ ನಡೆದಿದೆ ಅಂತ ವರದಿ ನೀಡುತ್ತೇವೆʼʼ ಎಂದು ಹೇಳಿದರು.
ನಮ್ಮ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮವಾಗಿ ಬಳಸಿಕೊಂಡಿದ್ದೇ ತಪ್ಪು. ವಿಜಯನಗರ ಬಡಾವಣೆಯಲ್ಲಿ 125 ಸೈಟ್‌ಗಳನ್ನು ಹಂಚಿದ್ದಾರೆ. ಅದರಲ್ಲಿ ನಮಗೂ ನಿವೇಶನ ಕೊಟ್ಟಿದ್ದಾರೆ ಅಷ್ಟೇ. ನನ್ನದಾಗಲಿ, ನನ್ನ ಪತ್ನಿಯದಾಗಲಿ, ಬಾಮೈದನ ಪಾತ್ರ ಇದೆಯಾ? 2014ರಲ್ಲಿ ನನ್ನ ಬಾಮೈದ ಜಮೀನು ಖರೀದಿ ಮಾಡಿರುವುದು. ಸಂಪೂರ್ಣವಾಗಿ ಕಾನೂನು ಪ್ರಕಾರ ಸೈಟ್ ಹಂಚಿಕೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಈಗ ಅವರು (ಕುಮಾರಸ್ವಾಮಿ) ಅಪಪ್ರಚಾರ ಮಾಡಿ ತೇಜೋವಧೆ ಮಾಡಲು ಯತ್ನಿಸಿದ್ದಾರೆ. ನಾನು ಎರಡನೇ ಬಾರಿಗೆ ಸಿಎಂ ಆಗಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಿವೃತ್ತ ನ್ಯಾ. ದೇಸಾಯಿ ಅಧ್ಯಕ್ಷತೆಯಲ್ಲಿ ತನಿಖೆ ಮಾಡಿಸುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ಹೇಳಿದ್ದೇನು?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಭೂ ಹಗರಣವನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವವರೇ ಬಯಲಿಗೆಳೆದಿದ್ದಾರೆ. ಇಷ್ಟು ವರ್ಷಗಳಲ್ಲಿ ಬೆಳಕಿಗೆ ಬಾರದ ಭೂ ಹಗರಣ ದಿಢೀರ್ ಆಗಿ ಹೊರಬಿದ್ದಿದ್ದು ಹೇಗೆ? ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವವರ ಪಾತ್ರವೂ ಇದೆ. ಸಿಡಿ ಕಾರ್ಖಾನೆ ಮುಚ್ಚಲಾಗಿದೆ ಮತ್ತು ಮುಡಾ ಕಾರ್ಖಾನೆ ಈಗ ತೆರೆದಿದೆ. ಅವರದೇ ಪಕ್ಷದ ಅಧ್ಯಕ್ಷರು (ಡಿವೈ ಸಿಎಂ ಶಿವಕುಮಾರ್) ಮುಡಾ ಹಗರಣವನ್ನು ಹೊರ ತಂದಿದ್ದಾರೆ ಎಂದು ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.