Elephant Death | ಮೃತ ಆನೆಯ ಬಳಿಯೇ ಬೀಡುಬಿಟ್ಟ ಆನೆ ಹಿಂಡು: ಏಳು ಗ್ರಾಮಗಳಲ್ಲಿ ನಿಷೇದಾಜ್ಞೆ
x

Elephant Death | ಮೃತ ಆನೆಯ ಬಳಿಯೇ ಬೀಡುಬಿಟ್ಟ ಆನೆ ಹಿಂಡು: ಏಳು ಗ್ರಾಮಗಳಲ್ಲಿ ನಿಷೇದಾಜ್ಞೆ

ತಾಲೂಕಿನ ತುಡುಕೂರು, ಆಲ್ದೂರುಪುರ, ಹೊಸಹಳ್ಳಿ, ತೋರಣಮಾವು, ಚಿತ್ತುವಳ್ಳಿ ಸೇರಿದಂತೆ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಗ್ರಾಮಸ್ಥರು ಅರಣ್ಯದತ್ತ ಹೋಗದಂತೆ ಸೂಚನೆ ನೀಡಲಾಗಿದೆ. ಅರಣ್ಯಾಧಿಕಾರಿಗಳು ಆನೆ ಹಿಂಡಿನ ಮೇಲೆ ನಿಗಾ ಇರಿಸಿದ್ದು, ಗಸ್ತು ಆರಂಭಿಸಿದ್ದಾರೆ.


ಚಿಕ್ಕಮಗಳೂರು ತಾಲೂಕಿನ ಬೀಟಮ್ಮ ಗ್ಯಾಂಗ್‌ ಕಾಫಿ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಮೃತಪಟ್ಟ ಹಿನ್ನೆಲೆಯಲ್ಲಿ ಕಾಡಾನೆಗಳ ಹಿಂಡು ಸ್ಥಳದಲ್ಲೇ ಬೀಡುಬಿಟ್ಟಿವೆ. ಆನೆ ಹಿಂಡಿನ ಹಠಾತ್‌ ದಾಳಿ ಸಂಭಾವ್ಯದ ಹಿನ್ನೆಲೆಯಲ್ಲಿ ತಾಲೂಕಿನ 11 ಗ್ರಾಮಗಳಲ್ಲಿ ಜಿಲ್ಲಾಡಳಿತ ನಿಷೇದಾಜ್ಞೆ ಜಾರಿ ಮಾಡಿದೆ.

ಚಿಕ್ಕಮಗಳೂರು ತಾಲೂಕಿನ ತುಡುಕೂರು ಗ್ರಾಮದ ಬೀಟಮ್ಮ ಗ್ಯಾಂಗ್‌ ಕಾಫಿ ತೋಟಕ್ಕೆ 23 ಆನೆಗಳು ದಾಳಿ ನಡೆಸಿ, ಕಾಫಿ ತೋಟ ನಾಶಪಡಿಸಿದ್ದವು. ಈ ವೇಳೆ ಸಲಗವೊಂದು ವಿದ್ಯುತ್ ತಂತಿ ತುಳಿದು ಮೃತಪಟ್ಟಿತ್ತು. ಆನೆ ಮೃತಪಟ್ಟ ಸ್ಥಳದಲ್ಲಿ 23 ಕಾಡಾನೆಗಳು ಬೀಡು ಬಿಟ್ಟಿದ್ದು, ಘೀಳಿಡಲು ಆರಂಭಿಸಿವೆ.

ಇದರಿಂದ ಜಿಲ್ಲಾಡಳಿತವು ತಾಲೂಕಿನ ತುಡುಕೂರು, ಆಲ್ದೂರುಪುರ, ಹೊಸಹಳ್ಳಿ, ತೋರಣಮಾವು, ಚಿತ್ತುವಳ್ಳಿ ಸೇರಿದಂತೆ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಗ್ರಾಮಸ್ಥರು ಅರಣ್ಯದತ್ತ ಹೋಗದಂತೆ ಸೂಚನೆ ನೀಡಲಾಗಿದೆ. ಅರಣ್ಯಾಧಿಕಾರಿಗಳು ಆನೆ ಹಿಂಡಿನ ಮೇಲೆ ನಿಗಾ ಇರಿಸಿದ್ದು, ಗಸ್ತು ಆರಂಭಿಸಿದ್ದಾರೆ.

ಮೃತಪಟ್ಟಿರುವ ಆನೆಯನ್ನು ತೆರವು ಮಾಡಲು ಅರಣ್ಯ ಇಲಾಖೆ ಹಾಗೂ ಇಟಿಎಫ್‌ ಸಿಬ್ಬಂದಿ ಪ್ರಯತ್ನಿಸಿದಾಗ ಆನೆಗಳ ಹಿಂಡು ದಾಳಿಗೆ ಮುಂದಾಗಿದೆ. ಹಾಗಾಗಿ ಕಾಡಾನೆಗಳ ಹಿಂಡು ತಾವಾಗಿಯೇ ಸ್ಥಳದಿಂದ ತೆರಳುವವರೆಗೂ ಸಲಗದ ಬಳಿ ತೆರಳದಂತೆ ಸಿಬ್ಬಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಶಿವಮೊಗ್ಗದ ಕುಂಸಿ ಸಮೀಪದ ವೀರಗಾರನ ಬೈರನಕೊಪ್ಪದ ಕಂದಕ್ಕೆ ಕಾಡಾನೆಯೊಂದು ಬಿದ್ದು ಮೃತಪಟ್ಟಿತ್ತು. ಚಿಕ್ಕಮಗಳೂರು, ಶಿವಮೊಗ್ಗ ಸುತ್ತಮುತ್ತ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ. ಅರಣ್ಯ ಗಡಿಯಲ್ಲಿ ಕಂದಕ ನಿರ್ಮಿಸಿದರೂ ಆನೆಗಳ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ ರೈಲು ಕಂಬಿಗಳ ತಡೆಗೋಡೆ ನಿರ್ಮಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Read More
Next Story