ಮೇ 23ರಿಂದ ದಕ್ಷಿಣ ರಾಜ್ಯಗಳ ಅರಣ್ಯದಲ್ಲಿ ಮಹತ್ವದ ಗಜ ಗಣತಿ
x

ಮೇ 23ರಿಂದ ದಕ್ಷಿಣ ರಾಜ್ಯಗಳ ಅರಣ್ಯದಲ್ಲಿ ಮಹತ್ವದ ಗಜ ಗಣತಿ


ದೇಶದಲ್ಲಿಯೇ ಅತಿಹೆಚ್ಚ ಗಜ ಸಂಖ್ಯೆ ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿರುವ ಆನೆಗಳ ಸಂಖ್ಯೆ 6395 ಎಂದು ಏಷಿಯನ್‌ ಎಲಿಫೆಂಟ್‌ ಪಾಪ್ಯುಲೇಷನ್‌ ಅಂಡ್‌ ಡೆಮೊಗ್ರಾಫಿಕ್‌ ಎಸ್ಟಿಮೇಟ್ಸ್‌ (Asian Elephant Population and Demographic Estimates) 2023 ವರದಿ ಹೇಳುತ್ತದೆ. ಕರ್ನಾಟಕದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಅತಿಹೆಚ್ಚು ಆನೆಗಳಿರುವುದರಿಂದ ಅದು ಮೊದಲ ಸ್ಥಾನದಲ್ಲಿದ್ದು, ನಾಗರಹೊಳೆ ಎರಡನೇ ಸ್ಥಾನದಲ್ಲಿದೆ. ಈಗ ಮತ್ತೆ ನಾಲ್ಕು ರಾಜ್ಯಗಳ ಗಡಿ ಅರಣ್ಯ ಪ್ರದೇಶದಲ್ಲಿ ಮಹತ್ವದ ಗಜ ಗಣತಿ ನಡೆಯಲಿದೆ

ಸುಮಾರು ಇಪ್ಪತ್ತೈದರಿಂದ ಮೂವತ್ತು ವರ್ಷದೊಳಗಿರುವ ಹೆಣ್ಣು ಕಾಡಾನೆಯೊಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹಡಿಯಾಲ ಉಪವಿಭಾಗದ ಮೊಳೆಯೂರು ವಲಯದಲ್ಲಿ ಸಾವನ್ನಪ್ಪಿದೆ. ಅರಣ್ಯ ಸಿಬ್ಬಂದಿ ರೂಢಿಯಂತೆ ಗಸ್ತು ತಿರುಗುವ ವೇಳೆ ಈ ಹೆಣ್ಣು ಕಾಡಾನೆ ಕರೆಯ ಬಳಿ ಬಿದ್ದಿರುವುದರನ್ನು ಗಮನಿಸಿದ ಗಾರ್ಡ್, ತಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣಾನೆಯನ್ನು ಉಳಿಸಲು ವೈದ್ಯರು ಎಲ್ಲ ಪ್ರಯತ್ನ ನಡೆಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಹೆಣ್ಣಾನೆ ಸಾವನ್ನಪ್ಪಿದೆ ಎಂದು ಚಾಮರಾಜನಗರದ ಗುಂಡ್ಲುಪೇಟೆಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಏಪ್ರಿಲ್‌ ತಿಂಗಳಲ್ಲಿ ಸುಮಾರು ಐವತ್ತು ವರ್ಷದ ಕಾಡಾನೆಯೊಂದು ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಣ ವಲಯದಲ್ಲಿ ಸಾವನ್ನಪ್ಪಿತು. ಅರಣ್ಯ ಗಸ್ತು ಪಡೆ ಸತ್ಯಮಂಗಲ ಅರಣ್ಯ ವಲಯದ ಪುದುಕುಯ್ಯನೂರು ಗ್ರಾಮದ ಸಮೀಪದ ವಡವಳ್ಳಿ ಬಳಿ ಎಚ್ಚರ ತಪ್ಪಿ ಬಿದ್ದಿರುವುದು ಪತ್ತೆಯಾಯಿತು. ಅರಣ್ಯ ಇಲಾಖೆಯ ವೈದ್ಯರು ಆ ಕಾಡಾನೆಯನ್ನು ಉಳಿಸಲು ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿ ಆ ಗಜ ಇಹಯಾತ್ರೆ ಮುಗಿಸಿತು.

ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ಹಾಸನ ಸಮೀಪದ ಅರಣ್ಯದಲ್ಲಿ ಇತ್ತೀಚೆಗೆ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಹೋರಾಟ ನಡೆಸಿ ಸಾವನ್ನಪ್ಪಿತು. ನಾಡಿಗೆ ನಾಡೇ ಕಣ್ಣೀರು ಸುರಿಸಿತು. ಈ ಸಾವಿನ ಬಗ್ಗೆ ಪರಿಸರವಾದಿಗಳ ಹಾಗೂ ಪ್ರಾಣಿಪ್ರಿಯರ ಅಕ್ರೋಷವೂ ವ್ಯಕ್ತವಾಯಿತು. ಅರ್ಜನ ನಂಥ ಆನೆಯನ್ನು ಈ ಕಾರ್ಯಾಚರಣೆಯಲ್ಲಿ ಬಳಸಿದ ಬಗ್ಗೆಯೇ ಹಲವಾರು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಯಿತು. ಈ ಘಟನೆ ನಡೆಯುವ ಎರಡು ದಿನನಗಳ ಮುನ್ನ ಕೆಳಮೇಕನಗದ್ದೆ ಸಮೀಪ ಸಾಕಿದ ಹೆಣ್ಣಾನೆಯೊಂದನ್ನು ಬಳಸಿಕೊಂಡು ಕಾಡು ಸಲಗವನ್ನು ಹಿಡಿಯುವ ಪ್ರಯತ್ನವೂ ನಡೆಯಿತು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಕಾಡಾನೆ ಸಾವಿಗೀಡಾಯಿತು.

ದೇಶದಲ್ಲಿಯೇ ಅತಿಹೆಚ್ಚ ಗಜ ಸಂಖ್ಯೆ ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿರುವ ಆನೆಗಳ ಸಂಖ್ಯೆ 6395 ಎಂದು ಏಷಿಯನ್‌ ಎಲಿಫೆಂಟ್‌ ಪಾಪ್ಯುಲೇಷನ್‌ ಅಂಡ್‌ ಡೆಮೊಗ್ರಾಫಿಕ್‌ ಎಸ್ಟಿಮೇಟ್ಸ್‌ (Asian Elephant Population and Demographic Estimates) 2023 ವರದಿ ಹೇಳುತ್ತದೆ. ಕರ್ನಾಟಕದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಅತಿಹೆಚ್ಚು ಆನೆಗಳಿರುವುದರಿಂದ ಅದು ಮೊದಲ ಸ್ಥಾನದಲ್ಲಿದ್ದು, ನಾಗರಹೊಳೆ ಎರಡನೇ ಸ್ಥಾನದಲ್ಲಿದೆ. ಆನೆಗಳ ರಕ್ಷಣೆ ಮತ್ತು ಮಾನವ-ಗಜ ಸಂಘರ್ಷವನ್ನು ಕಡಿತಗೊಳಿಸಲು ತೆಗೆದುಕೊಂಡಿರುವ ಕ್ರಮಗಳಿಂದ ಆನೆಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ವರದಿ ಹೇಳಿದೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿ 1116 ಆನೆಳಿದ್ದು ನಾಗರಹೊಳೆಯಲ್ಲಿ 831 ಆನೆಗಳಿವೆ.

ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಆನೆ ಸಾವು ಈ ವರ್ಷದಲ್ಲಿ ಇದೇ ಮೊದಲಲ್ಲ. ಕಳೆದ ಐದು ತಿಂಗಳಲ್ಲಿ ಕರ್ನಾಟಕದಲ್ಲಿ ಸುಮಾರು 25 ಆನೆಗಳು ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳುತ್ತವೆ. ಈ ಪೈಕಿ 23 ಆನೆಗಳು ಸ್ವಾಭಾವಿಕ ಕಾರಣಗಳಿಗಾಗಿ ಸಾವನ್ನಪ್ಪಿದ್ದರೆ, ಇನ್ನೆರಡು ಆನೆಗಳು, ಬೇಟೆ ಮತ್ತಿತರೆ ಅಸಹಜ ಕಾರಣಗಳಿಂದ ಸಾವನ್ನಪ್ಪರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿ ಅನುಮಾನಪಟ್ಟಿದ್ದಾರೆ.

ಅಷ್ಟೆ ಅಲ್ಲ, ಮಾನವ-ಪ್ರಾಣಿ ಸಂಘರ್ಷದಿಂದ ಜನವರಿಯಿಂದ ಮೇ 21ರವರೆಗೆ ಒಟ್ಟು 26 ಗ್ರಾಮಸ್ತರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಈ ಪೈಕಿ 22 ಮಂದಿ ಆನೆ ದಾಳಿ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಮಾನವ-ಆನೆ ಸಂಘರ್ಷ ಇತ್ತೀಚಿನ ದಶಕಗಳಲ್ಲಿ ನಾಡು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಸಂಸತ್ತಿನಲ್ಲಿ ಮಂಡಿಸಲಾದ ಅರಣ್ಯ ಮತ್ತು ಪರಿಸರ ಇಲಾಖೆಯ ಅಂಕಿ-ಅಂಶಗಳ ಪ್ರಕಾರ 2021-22ಲ್ಲಿ ಮಾನವ- ಆನೆ ಸಂಘರ್ಷದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 535. ಇದೇ ವರ್ಷದಲ್ಲಿ ಮನುಷ್ಯರಿಂದಾಗಿ ಒಟ್ಟು 82 ಆನೆಗಳು ಸಾವನ್ನಪ್ಪಿವೆ. ಕರ್ನಾಟಕ ಮತ್ತು ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ಗರಿಷ್ಠ ಗಜ-ಸಾವುಗಳು ವರದಿಯಾಗಿದೆ.

ನೀಲಗಿರಿ ಶ್ರೇಣಿಯ ಸುರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರ ಗಜ ಸಂಚಾರ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಮಾನವ-ಗಜ ಸಂಘರ್ಷದ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳನ್ನೊಳಗೊಂಡ ಅಂತಾರಾಜ್ಯ ಸಮನ್ವಯ ಸಮಿತಿ (ICC) ಇತ್ತೀಚೆಗೆ ರಚನೆಯಾಗಿದೆ.

ಈ ಸಮಿತಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಮೇ 23 ರಿಂದ 25ರ ವರೆಗೆ ಮೂರು ದಿನಗಳ ಕಾಲ ಸಂಯೋಜಿತ ಆನೆಗಳ ಸಂಖ್ಯೆ ಅಂದಾಜು (ಗಣತಿ) ಕಾರ್ಯ ಕೈಗೊಳ್ಳಲಿದೆ. ಮಾರ್ಚಿ ತಿಂಗಳ 10 ರಂದು ಕರ್ನಾಟಕ, ಕೇರಳ ಅರಣ್ಯ ಸಚಿವರು ಮತ್ತು ತಮಿಳುನಾಡಿನ ಹಿರಿಯ ಅರಣ್ಯ ಅಧಿಕಾರಿಗಳು ಅಂತಾರಾಜ್ಯ ಪ್ರದೇಶದಲ್ಲಿನ ಸಂಯೋಜಿತ ಆನೆಗಳ ಗಣತಿ ಮಾಡುವ ನಿರ್ಧಾರಕ್ಕೆ ಸಹಿ ಹಾಕಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಗಡಿಯಲ್ಲಿರುವ ಹತ್ತು ಅರಣ್ಯ ವಿಭಾಗಗಳಲ್ಲಿ ಈ ಕಾರ್ಯ ನಡೆಯಲಿದೆ ಎಂದು ಕರ್ನಾಟಕದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್‌ ಖಂಡ್ರೆ ʼದ ಫೆಡರಲ್-ಕರ್ನಾಟಕʼಕ್ಕೆ ತಿಳಿಸಿದ್ದಾರೆ. ಕೋಲಾರ, ಕಾವೇರಿ ವನ್ಯಜೀವಿ, ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ತಾಣ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬಂಡಿಪುರ ಹುಲಿ ಸಂರಕ್ಷಿತ ತಾಣ, ಮಡಿಕೇರಿ ವನ್ಯಜೀವಿ, ವಿರಾಜಪೇಟೆ ಅರಣ್ಯ ವಿಭಾಗಗಳಲ್ಲಿ ಈ ಗಣತಿ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಈ 65 ಅರಣ್ಯ ವಲಯಗಳಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಗಣತಿಯಲ್ಲಿ ೫೬೩ ಬೀಟ್ ಗಳಿದ್ದು, ಒಟ್ಟು 1689 ಸಿಬ್ಬಂದಿ ಭಾಗವಹಿಸಲಿದ್ದಾರೆ. ಅರಣ್ಯ ಇಲಾಖೆಯ ಭಾಷೆಯಲ್ಲಿಯೇ ಹೇಳುವುದಾದರೆ, ಮೊದಲ ದಿನ ಬ್ಲಾಕ್‌ ಸ್ಯಾಂಪ್ಲಿಂಗ್‌, ಎರಡನೇ ದಿನ ಲೈನ್‌ ಟ್ರಾನ್ಸಾಕ್ಟ್‌ ಮಾದರಿ ಹಾಗೂ ಮೂರನೇ ದಿನ ಅರಣ್ಯದೊಳಗಿನ ಕೆರೆ ಕಟ್ಟೆಗಳ ಬಳಿ ಈ ಆನೆ ಗಣತಿ ನಡೆಯಲಿದೆ. ಈಗಾಗಲೇ, ಆಧುನಿಕ ತಂತ್ರಜ್ಞಾನವಾದ ಕ್ಯಾಮರಾ ಟ್ರ್ಯಾಪಿಂಗ್‌ ಮೂಲಕ 15 ದಿನಗಳ ಗಣತಿ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ 842 ಚದುರ ಕಿಮೀ ಉದ್ಯಾನದಲ್ಲಿ ೮೧೩ ಆನೆಗಳನ್ನು ಗುರುತಿಸಲಾಗಿದೆ.

Read More
Next Story